ಮಹಿಳೆಯರಿಗಾಗಿ ಮಹಾರಾಷ್ಟ್ರ ಸರ್ಕಾರ ರೂಪಿಸಿರುವ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯ ಲಾಭವನ್ನು 14, 298 ಪುರುಷರು ಪಡೆದಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 21.44 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಪ್ರತಿ ತಿಂಗಳು ಮಹಿಳೆಯರ ಖಾತೆಗೆ 1,500 ರೂಪಾಯಿ ನೇರ ಜಮಾ ಮಾಡುವ ಈ ಯೋಜನೆಯ ಹಣವನ್ನು ಸುಮಾರು 10 ತಿಂಗಳ ಕಾಲ ಈ 14 ಸಾವಿರ ಪುರುಷರು ಪಡೆದಿದ್ದಾರೆ.
ಲಡ್ಕಿ ಬಹಿನ್ ಯೋಜನೆಯು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರ ಹಿಡಿಯಲು ಪ್ರಮುಖ ಕಾರಣವಾಗಿತ್ತು. ಕಳೆದ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಈ ಯೋಜನೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮತ ತಂದು ಕೊಟ್ಟಿತ್ತು. ಆರ್ಥಿಕವಾಗಿ ಹಿಂದುಳಿದ ಅಥವಾ ಸಂಕಷ್ಟ ಅನುಭವಿಸುತ್ತಿರುವ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಈ ಯೋಜನೆಗೆ ಆರ್ಹರು.
ಕಳೆದ ವರ್ಷ ಜೂನ್‌ನಲ್ಲಿ ಈ ಯೋಜನೆ ಆರಂಭಗೊಂಡಾಗ ರಾಜ್ಯದ ಆರ್ಥಿಕತೆಯ ಮೇಲೆ ಹೊರೆ ಬೀಳುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿತ್ತು. ನಂತರ ಯೋಜನೆಯ ಲಾಭವನ್ನು ಅನರ್ಹರು ಪಡೆಯುತ್ತಿದ್ದಾರೆ ಎಂಬುವುದು ಪತ್ತೆಯಾಗಿತ್ತು. ಇತ್ತೀಚಿನ ಪರಿಶೀಲನೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 14,298 ಪುರುಷರು ಸುಳ್ಳು ದಾಖಲೆಗಳನ್ನು ನೀಡಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ 10 ತಿಂಗಳಿನಿಂದ ಅವರ ಖಾತೆಗೆ ಹಣ ಜಮೆ ಆಗಿದೆ ಎಂಬುವುದು ಬಯಲಾಗಿದೆ.
ಲಡ್ಕಿ ಬಹಿನ್ ಯೋಜನೆಯಡಿ 24.1 ಮಿಲಿಯನ್ ಫಲಾನುಭವಿಗಳಿಗೆ ತಿಂಗಳಿಗೆ 1,500 ರೂ. ಪಾವತಿಸಲು ರಾಜ್ಯ ಸರ್ಕಾರ ಪ್ರಸ್ತುತ 3,700 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ವರದಿಗಳು ಹೇಳಿವೆ.
ಇತ್ತೀಚಿನ ಪರಿಶೀಲನಾ ವರದಿಯ ಪ್ರಕಾರ, ಕಳೆದ 12 ತಿಂಗಳುಗಳಲ್ಲಿ ಲಕ್ಷಾಂತರ ಅನರ್ಹ ಫಲಾನುಭವಿಗಳಿಗೆ ಹಣ ಪಾವತಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 1,640 ಕೋಟಿ ರೂ. ನಷ್ಟ ಉಂಟಾಗಿದೆ. ಕಳೆದ ಫೆಬ್ರವರಿಯಲ್ಲಿ, ಯೋಜನೆಯನ್ನು ಜಾರಿಗೊಳಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸುಮಾರು 500,000 ಫಲಾನುಭವಿಗಳನ್ನು ಕೈಬಿಡಲಾಗಿದೆ ಎಂದು ಹೇಳಿತ್ತು. ಇದರಲ್ಲಿ ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವ ಕುಟುಂಬಗಳ ಸುಮಾರು 162,000 ಮಹಿಳೆಯರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 287,000 ಫಲಾನುಭವಿಗಳು ಸೇರಿದ್ದಾರೆ (ಅವರು ಬೇರೆ ಯೋಜನೆಯಡಿಯಲ್ಲಿ ಪ್ರಯೋಜನಗಳಿಗೆ ಅರ್ಹರು).
ಇನ್ನು ಮಾಸಿಕವಾಗಿ ಹಣ ಪಡೆಯುತ್ತಿರುವವರಲ್ಲಿ ಕುಟುಂಬದ ಮೂರನೇ ಸದಸ್ಯರಾದ ಮಹಿಳೆಯರು ಕೂಡ ಸೇರಿದ್ದಾರೆ. ಒಂದು ಕುಟುಂಬದಿಂದ ಇಬ್ಬರು ಮಹಿಳೆಯರು ಮಾತ್ರ ಯೋಜನೆಗೆ ಅರ್ಹರು. ಆದರೆ, ಲಕ್ಷಾಂತರ ಮಹಿಳೆಯರು ವಂಚನೆಯಿಂದ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಇಂತಹ ಸುಮಾರು 797,000 ಪ್ರಕರಣಗಳಿಂದ ಸರ್ಕಾರದ ಬೊಕ್ಕಸಕ್ಕೆ 1,196 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಪತ್ತೆಹಚ್ಚಿದೆ.
ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ 14,000ಕ್ಕೂ ಹೆಚ್ಚು ಪುರುಷರು ಪ್ರಯೋಜನ ಪಡೆದಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್, “ಲಡ್ಕಿ ಬಹಿನ್ ಯೋಜನೆ ಪುರುಷರಿಗಾಗಿ ಅಲ್ಲ, ಕಡಿಮೆ ಆದಾಯದ ಗುಂಪುಗಳ ನಿರ್ಗತಿಕ ಮಹಿಳೆಯರಿಗಾಗಿ ರೂಪಿಸಲಾಗಿದೆ. ಯೋಜನೆಯಡಿಯಲ್ಲಿ ಹಣವನ್ನು ಪಡೆದ ಪುರುಷರಿಂದ ರಾಜ್ಯ ಸರ್ಕಾರ ಹಣವನ್ನು ವಸೂಲಿ ಮಾಡಲಿದೆ. ಅವರು ಸಹಕರಿಸದಿದ್ದರೆ, ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಇಂದಿನಿಂದ ‘ಆಪರೇಷನ್ ಸಿಂಧೂರ್’ ಚರ್ಚೆ: ಸಂಸದರಿಗೆ ವಿಪ್ ಜಾರಿಗೊಳಿಸಿದ ಕಾಂಗ್ರೆಸ್


