ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಜು.29) ಎತ್ತಿಹಿಡಿದಿದೆ.
ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಅಕ್ರಮವಾಗಿಲ್ಲ. ಇದರಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ. ಸಾಕ್ಷ್ಯಾಧಾರಗಳು ಮತ್ತು ಅನ್ವಯವಾಗುವ ಕಾನೂನನ್ನು ಸೂಕ್ತವಾಗಿ ಪರಿಗಣಿಸಿದ ನಂತರ ಶಿಕ್ಷೆಯ ಆದೇಶವನ್ನು ನೀಡಲಾಗಿದೆ. ಮೇಧಾ ಪಾಟ್ಕರ್ ಅವರ ಮೇಲ್ಮನವಿಯನ್ನು ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಮೂರ್ತಿ ಶಾಲಿಂದರ್ ಕೌರ್ ಅವರ ಪೀಠ ಹೇಳಿದೆ.
ಆದಾಗ್ಯೂ, ಪಾಟ್ಕರ್ ಪ್ರತಿ ಮೂರು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ವಿಧಿಸಿದ್ದ ಷರತ್ತನ್ನು ನ್ಯಾಯಾಲಯ ಮಾರ್ಪಡಿಸಿದೆ. ಪಾಟ್ಕರ್ ಅವರು ದೈಹಿಕವಾಗಿ, ವಿಸಿ ಮೂಲಕ ಹಾಜರಾಗಲು ಅಥವಾ ವಕೀಲರ ಮೂಲಕ ಪ್ರತಿನಿಧಿಸಲು ಸ್ವಾತಂತ್ರ್ಯ ಹೊಂದಿರುತ್ತಾರೆ ಎಂದು ಹೈಕೋರ್ಟ್ ಹೇಳಿದೆ.
ಏಪ್ರಿಲ್ 2ರಂದು ಪ್ರಕರಣದಲ್ಲಿ ಶಿಕ್ಷೆ ವಿಧಿಸುವುದರ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಪಾಟ್ಕರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಅಲ್ಲದೆ, ಶಿಕ್ಷೆಯ ಕುರಿತು ವಾದ ಮಂಡಿಸಲು ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿ ಅದೇ ದಿನಾಂಕದಂದು ಹೊರಡಿಸಲಾದ ಆದೇಶವನ್ನೂ ಪಾಟ್ಕರ್ ಪ್ರಶ್ನಿಸಿದ್ದರು.
ಸಕ್ಸೇನಾ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ಸಾಬೀತುಪಡಿಸಲು ಹೆಚ್ಚುವರಿ ಸಾಕ್ಷಿಯನ್ನು ಪ್ರಸ್ತುತಪಡಿಸಲು ಮತ್ತು ವಿಚಾರಣೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರ ವಿರುದ್ಧದ ಪಾಟ್ಕರ್ ಅರ್ಜಿಯನ್ನು ಕೂಡ ಹೈಕೋರ್ಟ್ ವಜಾಗೊಳಿಸಿದೆ.
ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಕೌರ್ ಅವರು ಪಾಟ್ಕರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ್ದರು ಮತ್ತು 25,000 ರೂ.ಗಳ ವೈಯಕ್ತಿಕ ಬಾಂಡ್ ಸಲ್ಲಿಸುವ ಷರತ್ತು ವಿಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದ್ದರು.
1860ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಅಪರಾಧಕ್ಕಾಗಿ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು.
2001ರಲ್ಲಿ ಪಾಟ್ಕರ್ ವಿರುದ್ಧ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು.
ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟನೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು.
“ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿಕೆ ಸಕ್ಸೇನಾ, ಸ್ವತಃ ಮಾಲೆಗಾಂವ್‌ಗೆ ಬಂದು ಎನ್‌ಬಿಎಯನ್ನು ಹೊಗಳಿ ರೂ. 40,000ರ ಚೆಕ್ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ” ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದರು.
ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್‌ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
“ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆ”ಎಂದಿದ್ದರು.


