ಶನಿವಾರ ತಡರಾತ್ರಿ ಪೊಲೀಸರೊಂದಿಗೆ ಮನೆಗೆ ನುಗ್ಗಿದ 30 ರಿಂದ 40 ಜನರ ಗುಂಪು, ನಮ್ಮ ಭಾರತೀಯ ಪೌರತ್ವ ಸಾಬೀತು ಮಾಡುವಂತೆ ಒತ್ತಾಯಿಸಿದೆ ಎಂದು ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡಿದ್ದ ಪುಣೆ ಮೂಲದ ನಿವೃತ್ತ ಹಿರಿಯ ಯೋಧನ ಕುಟುಂಬ ಆರೋಪಿಸಿದೆ.
ತಡರಾತ್ರಿ ಪುಣೆಯ ಚಂದನ್ ನಗರದ ನಮ್ಮ ಮನೆಗೆ ಏಕಾಏಕಿ ಮನೆಗ ನುಗ್ಗಿದ ಗುಂಪು, ನಮ್ಮ ಭಾರತೀಯ ಪೌರತ್ವದ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದೆ. ಅಲ್ಲದೆ, ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಹಕೀಮುದ್ದೀನ್ ಶೇಖ್ ಅವರ ಕುಟುಂಬ ಮಂಗಳವಾರ ಹೇಳಿಕೊಂಡಿದೆ.
“ಬೆಳಿಗ್ಗೆ 3 ಗಂಟೆಯವರೆಗೆ ಕಾಯುತ್ತೇವೆ . ಅದರೊಳಗೆ ನೀವು ಪೌರತ್ವ ಸಾಬೀತು ಮಾಡಲು ವಿಫಲರಾದರೆ, ನಿಮ್ಮನ್ನು ಬಾಂಗ್ಲಾದೇಶಿಯರು ಅಥವಾ ರೋಹಿಂಗ್ಯಾಗಳು ಎಂಬುವುದಾಗಿ ಘೋಷಿಸುತ್ತೇವೆ” ಎಂದು ನಮಗೆ ಬೆದರಿಕೆ ಹಾಕಲಾಗಿದೆ ಎಂದು ಯೋಧನ ಕುಟುಂಬ ತಿಳಿಸಿದೆ.
“ಅಕ್ರಮ ವಲಸಿಗರು ಎಂಬ ಶಂಕೆಯ ಮೇಲೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಮ್ಮ ತಂಡ ದಾಖಲೆಗಳನ್ನು ಕೇಳಿತ್ತು. ಅವರು ಭಾರತೀಯರು ಎಂದು ಖಚಿತವಾದ ಬಳಿಕ, ಅವರನ್ನು ಬಿಟ್ಟು ಕಳಿಸಿದ್ದೇವೆ. ಪೊಲೀಸರ ತಂಡದೊಂದಿಗೆ ಹೊರಗಿನವರು ಯಾರು ಇರಲಿಲ್ಲ. ಈ ಬಗ್ಗೆ ವಿಡಿಯೋ ಇದೆ” ಎಂದು ಡಿಸಿಪಿ ಸೋಮೈ ಮುಂಡೆ ಹೆಳಿದ್ದಾರೆ.
58 ವರ್ಷದ ನಿವೃತ್ತ ಯೋಧ ಹಕೀಮುದ್ದೀನ್ ಅವರು, 1984ರಿಂದ 2000ವರೆಗೆ ಭಾರತೀಯ ಸೇನೆಯ 269ನೇ ಇಂಜಿನಿಯರ್ ರೆಜೆಮೆಂಟ್‌ನಲ್ಲಿ 16 ವರ್ಷದ ಸೇವೆ ಸಲ್ಲಿಸಿದವರು. “ಕಾರ್ಗಿಲ್ ಯುದ್ದದಲ್ಲಿ ನಾನು ಈ ದೇಶಕ್ಕೋಸ್ಕರ ಹೋರಾಡಿದವನು. ನನ್ನ ಇಡೀ ಕುಟುಂಬ ಈ ದೇಶಕ್ಕೆ ಸಮರ್ಪಿತವಾಗಿದೆ. ನಮ್ಮನ್ನೇಕೆ ಪೌರತ್ವ ಸಾಬೀತುಪಡಿಸಲು ಕೇಳಿದ್ದು? ಎಂದು ಹಕೀಮುದ್ದೀನ್ ಪ್ರಶ್ನಿಸಿದ್ದಾರೆ.
ಹಕೀಮುದ್ದೀನ್ ಅವರ ಕುಟುಂಬಸ್ಥರು ಮೂಲತಃ ಉತ್ತರ ಪ್ರದೇಶದ ಪ್ರತಾಪ್‌ಘಡದವರು, 1960ರಿಂದ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಹಕೀಮುದ್ದೀನ್ 2013ರಲ್ಲಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ್ದಾರೆ. ಅವರ ಸಹೋದರ,ಇತರ ಕುಟುಂಬಸ್ಥರು ಮತ್ತು ಸಂಬಂಧಿಕರು ಪುಣೆಯಲ್ಲೇ ಇದ್ದಾರೆ.
ಅಪರಿಚಿತ ಪುರುಷರ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ನಮ್ಮ ಮನೆ ಬಳಿಗೆ ಬಂತು. ಬಾಗಿಲಿಗೆ ಒದ್ದು ಏಕಾಏಕಿ ಮನೆಯೊಳಗೆ ನುಗ್ಗಿತು. ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿತು. ಸಿವಿಲ್ ಡ್ರೆಸ್‌ನಲ್ಲಿದ್ದ ಅಧಿಕಾರಿಯೊಬ್ಬರು ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಪೊಲೀಸ್ ವ್ಯಾನ್ ರಸ್ತೆಯಲ್ಲಿ ಕಾಯುತ್ತಿತ್ತು” ಎಂದು ಹಕೀಮುದ್ದೀನ್ ಅವರ ಸಹೋದರ ಇರ್ಷಾದ್ ಶೇಖ್ ಹೇಳಿದ್ದಾರೆ.
ಹಕೀಮುದ್ದೀನ್ ಮಾತ್ರವಲ್ಲದೆ ನಮ್ಮ ಕುಟುಂಬದಲ್ಲಿ ಶೇಖ್ ನಯೀಮುದ್ದೀನ್ ಮತ್ತು ಶೇಖ್ ಮೊಹಮ್ಮದ್ ಸಲೀಂ ಎಂಬ ಇನ್ನಿಬ್ಬರು ನಿವೃತ್ತ ಯೋಧರಿದ್ದಾರೆ. ಅವರು 1965 ಮತ್ತು 1971ರ ಯುದ್ಧಗಳಲ್ಲಿ ದೇಶಕ್ಕಾಗಿ ಹೋರಾಡಿವದರು. “ಸೈನಿಕರ ಕುಟುಂಬಗಳನ್ನು ಹೀಗೆ ನಡೆಸಿಕೊಳ್ಳುತ್ತಾರಾ? ಎಂದು ಇರ್ಷಾದ್ ಪ್ರಶ್ನಿಸಿದ್ದಾರೆ. ಸಿಕ್ಕ ಸಿಕ್ಕವರು ಬಾಗಿಲು ತಟ್ಟಿದಾಗಲೆಲ್ಲಾ ನಮ್ಮ ಪೌರತ್ವ ಸಾಬೀತುಪಡಿಸಬೇಕಾದರೆ ನಾವು ಭಾರತೀಯರಾಗಿರುವುದರ ಅರ್ಥವೇನು? ಎಂದಿದ್ದಾರೆ.
ಮನೆಗೆ ನುಗ್ಗಿದ ಗುಂಪು ದಾಖಲೆಗಳನ್ನು ತೋರಿಸಿದರೂ ಅದನ್ನು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ. ನಾವು ಆಧಾರ್ ಕಾರ್ಡ್ ತೋರಿಸಿದರೂ, ಅದು ನಕಲಿ ಎಂದು ಗುಂಪು ಅಪಹಾಸ್ಯ ಮಾಡಿತು ಎಂದು ಯೋಧ ಹಕೀಮುದ್ದೀನ್ ಅವರ ಸೋದರಳಿಯರಾದ ನೌಶಾದ್ ಮತ್ತು ನವಾಬ್ ಶೇಖ್ ಹೇಳಿದ್ದಾರೆ. ಅವರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ನೌಶಾದ್ ಆರೋಪಿಸಿದ್ದು, ಅವರು ಬಾಗಿಲಿಗೆ ಒದ್ದರು, ಮಹಿಳೆಯರ ಮುಂದೆ ದಾಖಲೆ ತೋರಿಸುವಂತೆ ಅಬ್ಬರಿಸಿದರು ಎಂದು ಹೇಳಿದ್ದಾರೆ.
ಭಾನುವಾರ ಕೂಡ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಅಲ್ಲಿ ನಮ್ಮ ದಾಖಲೆಗಳನ್ನು ಪಡೆದು ಎರಡು ಗಂಟೆ ಕಾಯಿಸಿದರು. ನಂತರ ಇನ್‌ಸ್ಪೆಕ್ಟರ್ ಬರಲ್ಲ ಎಂದು ಕಳಿಸಿದರು. ನಮ್ಮ ದಾಖಲೆಗಳು ಈಗಲೂ ಅವರ ಬಳಿಯಿದೆ ಎಂದು ಮತ್ತೊಬ್ಬರು ಶಂಶಾದ್ ಶೇಖ್ ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದು, “ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಮಾಹಿತಿ ಪ್ರಕಾರ ಪೊಲೀಸರು ಬಲವಂತವಾಗಿ ಮನೆಗೆ ಪ್ರವೇಶಿಸಿಲ್ಲ” ಎಂದಿದ್ದಾರೆ.
Courtesy: timesofindia.indiatimes.com


