ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗೆ ಹೊಂದಿಕೊಂಡಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಬುಧವಾರ (ಜು.30) ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆ ಹಾಜರಾದರು.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಸೈಬರಾಬಾದ್ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 29 ಸೆಲೆಬ್ರಿಟಿಗಳಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು.
ನಟ, ನಟಿಯರು ಸೇರಿದಂತೆ ಪ್ರಭಾವಿಗಳು ಆನ್‌ಲೈನ್ ಜಾಹಿರಾತುಗಳ ಮೂಲಕ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
2016ರಲ್ಲಿ ಜಂಗ್ಲೀ ರಮ್ಮಿ ಎಂಬ ಗೇಮಿಂಗ್ ಆ್ಯಪ್ ಜಾಹಿರಾತು ಸಂಬಂಧ ಪ್ರಕಾಶ್ ರಾಜ್ ವಿರುದ್ದ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಅಂತಹ ಆ್ಯಪ್‌ಗಳ ಜಾಹಿರಾತು ಸರಿಯಾದುದಲ್ಲ ಎಂದು ಅರಿತುಕೊಂಡ ನಂತರ, 2017ರಲ್ಲಿ ನಾನು ಅದರಿಂದ ಹಿಂದೆ ಸರಿದಿದ್ದೇನೆ. ಅಂದಿನಿಂದ ಯಾವುದೇ ಗೇಮಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಸೆಲೆಬ್ರೆಟಿಗಳ ಹಣಕಾಸು ವಹಿವಾಟುಗಳು ಮತ್ತು ಡಿಜಿಟಲ್ ಟ್ರೇಲ್‌ಗಳನ್ನು ಇಡಿ ತನಿಖೆ ನಡೆಸುತ್ತಿದೆ. ಸಮನ್ಸ್ ಪಡೆದವರಲ್ಲಿ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಮತ್ತು ದೂರದರ್ಶನ ನಿರೂಪಕಿ ಶ್ರೀಮುಖಿ ಸೇರಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 49ರೊಂದಿಗೆ ಓದಲಾದ ಸೆಕ್ಷನ್ 318(4) ಮತ್ತು 112, ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆಯ ಸೆಕ್ಷನ್ 4 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಡಿ ಸೇರಿದಂತೆ ಬಹು ಕಾನೂನುಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ದ ತನಿಖೆ ಆರಂಭಗೊಂಡಿದೆ.
ಜುಲೈ 23ರ ಬುಧವಾರ ವಿಚಾರಣೆಗೆ ಹಾಜರಾಗಲು ನಟ ರಾಣಾ ದಗ್ಗುಬಾಟಿ ಅವರಿಗೆ ಇಡಿ ಸೂಚಿಸಿತ್ತು. ಆದರೆ, ಅವರು ಸಿನಿಮಾ ಕೆಲಸಗಳನ್ನು ಉಲ್ಲೇಖಿಸಿ ಹೆಚ್ಚಿನ ಸಮಯ ಕೋರಿದ್ದರು. ಹಾಗಾಗಿ, ಅವರಿಗೆ ಆಗಸ್ಟ್ 13ರಂದು ಹಾಜರಾಗುವಂತೆ ಇಡಿ ಸೂಚಿಸಿದೆ. ಅಂದೇ ಮಂಚು ಲಕ್ಷ್ಮಿ ಕೂಡ ವಿಚಾರಣೆಗೆ ಹಾಜರಾಗಲಿದ್ದಾರೆ. ಆಗಸ್ಟ್ 6ರಂದು ಹಾಜರಾಗಲು ವಿಜಯ್ ದೇವರಕೊಂಡ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಕಾರ್ಗಿಲ್ ಯೋಧನ ಕುಟುಂಬಕ್ಕೆ ಭಾರತೀಯ ಪೌರತ್ವ ಸಾಬೀತುಪಡಿಸಲು ಒತ್ತಾಯ: ವರದಿ


