ಹಲವಾರು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಪ್ರಕರಣವೊಂದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪೂರ್ಣಗೊಳಿಸಿದೆ. ಇಂದು (ಬುಧವಾರ) ಪ್ರಕಟವಾಗಬೇಕಿದ್ದ ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ಪ್ರಜ್ವಲ್ ರೇವಣ್ಣ ಸಂಸದರಾಗಿದ್ದ ಸಮಯದಲ್ಲಿ ಹಲವಾರು ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಬೆದರಿಸಿ, ಆಮಿಷವೊಡ್ಡಿ ಅತ್ಯಾಚಾರವೆಸಗಿರುವ ಆರೋಪವಿದೆ. ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ. ಪ್ರಜ್ವಲ್ ಅವರ ಕಾಮಕೃತ್ಯಗಳದ್ದು ಎನ್ನಲಾದ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳು 2024ರ ಲೋಕಸಭಾ ಚುನಾವಣೆ ವೇಳೆ ಹಾಸನದಾದ್ಯಂತ ದೊರೆತಿದ್ದವು. ಬಳಿಕ ಪ್ರಜ್ವಲ್ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ನಾಲ್ಕು ಪ್ರಕರಣಗಳ ಪೈಕಿ, ಮೈಸೂರಿನ ಕೆ.ಆರ್ ನಗರದ ಸಂತ್ರಸ್ತೆ (ಮನೆ ಕೆಲಸದ ಮಹಿಳೆ) ಮೇಲಿನ ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ಹೇಳಿಕೆಗಳು ಹಾಗೂ ಪರ-ವಿರೋಧ ವಾದಗಳನ್ನು ಆಲಿಸಿದೆ. ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇಂದು ತೀರ್ಪು ನೀಡುವುದಾಗಿ ತಿಳಿಸಿತ್ತು.
ಆದಾಗ್ಯೂ, ಪ್ರಕರಣದಲ್ಲಿ ಒದಗಿಸಿರುವ ಗೂಗಲ್ ಮ್ಯಾಪ್ ಮತ್ತು ಎಫ್‌ಎಸ್‌ಎಲ್ ವರದಿಯ ಬಗ್ಗೆ ಸ್ಪಷ್ಟನೆ ಬೇಕೆಂದು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಹೇಳಿದ್ದಾರೆ. ಸ್ಪಷ್ಟನೆ ನೀಡುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ, ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಲಾಗಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟ ಪ್ರಕಾಶ್ ರಾಜ್


