ಇರಾನ್ ಜೊತೆಗೆ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಮಾಡುತ್ತಿರುವ ಕಾರಣ ನೀಡಿ ಭಾರತದ ಆರು ಕಂಪನಿಗಳ ಮೇಲೆ ಟ್ರಂಪ್ ಆಡಳಿತವು ನಿರ್ಬಂಧ ಹೇರಿದೆ ಎಂದು ವರದಿಯಾಗಿದೆ.
ಭಾರತದ ಕಂಪನಿಗಳು ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ ವಹಿವಾಟು ನಡೆಸುತ್ತಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಆರೋಪಿಸಿದೆ.
ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್, ಕಾಂಚನ್ ಪಾಲಿಮರ್ಸ್ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
ಇರಾನ್ ಜೊತೆ ತೈಲ ವ್ಯವಹಾರ ಹೊಂದಿರುವ ವಿವಿಧ ದೇಶಗಳ 20 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಅವುಗಳಲ್ಲಿ ಭಾರತದ 6 ಕಂಪನಿಗಳು ಸೇರಿವೆ ಎಂದು ವರದಿಗಳು ಹೇಳಿವೆ.
ಇರಾನ್ ಮಧ್ಯ ಪ್ರಾಚ್ಯದಲ್ಲಿ ಸಂಘರ್ಷವನ್ನು ಉತ್ತೇಜಿಸುತ್ತಿದೆ. ತೈಲ ವ್ಯವಹಾರದ ಆದಾಯವನ್ನು ವಿವಿಧ ದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಿದೆ. ತನ್ನದೇ ಜನರನ್ನು ಧಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆರೋಪಿಸಿದೆ. ಹಾಗಾಗಿ, ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಪ್ರಮುಖವಾಗಿ ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಟರ್ಕಿ ಮತ್ತು ಇಂಡೋನೇಷ್ಯಾದ ಕಂಪನಿಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಟ್ರಂಪ್ ಅವರು ಹೇಳಿದಂತೆ, ಇರಾನ್ ಜೊತೆ ತೈಲ ವ್ಯವಹಾರ ಮಾಡಲು ಮುಂದಾಗುವ ದೇಶ, ಕಂಪನಿ ಮತ್ತು ವ್ಯಕ್ತಿಗಳು ಸ್ವಯಂ ಅಪಾಯ ತಂದುಕೊಳ್ಳಿಲಿದ್ದಾರೆ. ಅವರಿಗೆ ಅಮೆರಿಕದಲ್ಲಿ ವ್ಯವಹಾರ ನಡೆಸಲು ನಿರ್ಬಂಧ ವಿಧಿಸಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತದ ಪೆಟ್ರೋಕೆಮಿಕಲ್ ಟ್ರೇಡಿಂಗ್ ಕಂಪನಿ ಆಲ್ಕೆಮಿಕಲ್ ಸೊಲ್ಯೂಷನ್ಸ್ 2024ರ ಜನವರಿಯಿಂದ ಡಿಸೆಂಬರ್ ನಡುವೆ ಬಹು ಕಂಪನಿಗಳ ಮೂಲಕ 84 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿರುವ ಆರೋಪವಿದೆ.
ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ ಕಂಪನಿಯು 2024ರ ಜನವರಿ 2025ರ ಜನವರಿ ನಡುವೆ ಬಹು ಕಂಪನಿಗಳಿಂದ ಮೆಥನಾಲ್ ಮತ್ತು ಟೊಲುಯೀನ್ ಸೇರಿದಂತೆ 22 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಇರಾನಿನ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎನ್ನಲಾಗಿದೆ.
ಕಾಂಚನ್ ಪಾಲಿಮರ್ಸ್ ಕಂಪನಿಯು 2024ರ ಫೆಬ್ರವರಿಯಿಂದ ಜುಲೈ ನಡುವೆ ಯುಎಇ ಮೂಲದ ತನಾಯಿಸ್ ಟ್ರೇಡಿಂಗ್‌ನಿಂದ ಪಾಲಿಥಿಲೀನ್ ಸೇರಿದಂತೆ 1.3 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಮೌಲ್ಯದ ಇರಾನಿನ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 2024ರ ಜನವರಿಯಿಂದ 2025ರ ಜನವರಿ ನಡುವೆ ಬಹು ಕಂಪನಿಗಳಿಂದ 49 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಟೊಲ್ಯೂನ್ ಸೇರಿದಂತೆ ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎನ್ನಲಾಗಿದೆ.
ಇನ್ನುಳಿದ ಎರಡು ಭಾರತೀಯ ಕಂಪನಿಗಳಾದ ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ ಮತ್ತು ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಕಳೆದ ವರ್ಷದ ಬಹು ಕಂಪನಿಗಳೊಂದಿಗೆ ಕ್ರಮವಾಗಿ 51 ಮಿಲಿಯನ್ ಡಾಲರ್ ಮತ್ತು 14 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ವ್ಯವಹಾರ ನಡೆಸಿವೆ ಎಂದು ಹೇಳಲಾಗಿದೆ.
ಉದ್ದೇಶಪೂರ್ವಕವಾಗಿ ಇರಾನ್‌ನಿಂದ ಪೆಟ್ರೋಕೆಮಿಕಲ್ ಉತ್ಪನ್ನಗಳ ಖರೀದಿ, ಸ್ವಾಧೀನ, ಮಾರಾಟ, ಸಾಗಣೆ ಮತ್ತು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಕಂಪನಿಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದೆ ಎಂದು ವರದಿಗಳು ಹೇಳಿವೆ.


