ರಾಂಪುರ: ಉತ್ತರಪ್ರದೇಶದ ರಾಂಪುರದಲ್ಲಿ ದಾರಿ ಬಿಡದ ಕಾರಣಕ್ಕೆ ಬೈಕ್ ಸವಾರರು ಮತ್ತು ಇ-ರಿಕ್ಷಾ ಚಾಲಕನ ನಡುವೆ ನಡೆದ ವಾಗ್ವಾದವು ಘರ್ಷಣೆಗೆ ತಿರುಗಿದ ಪರಿಣಾಮ, ಬೈಕ್ ಸವಾರರ ಕ್ರೂರ ಹಲ್ಲೆಯಿಂದ 55 ವರ್ಷದ ದಲಿತ ಇ-ರಿಕ್ಷಾ ಚಾಲಕ ಭಗವಾನ್ ದಾಸ್ ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ 7.30ರ ಸುಮಾರಿಗೆ, ಪರಮ ಕಲ್ಯಾಣಪುರ ಗ್ರಾಮದ ನಿವಾಸಿಗಳಾದ ಭಗವಾನ್ ದಾಸ್ ಮತ್ತು ಅವರ ಮಗ ಜಿತೇಂದ್ರ ತಮ್ಮ ಇ-ರಿಕ್ಷಾದಲ್ಲಿ ಪ್ರಯಾಣಿಕರೊಂದಿಗೆ ನಗರದಿಂದ ಹಳ್ಳಿಗೆ ಹಿಂತಿರುಗುತ್ತಿದ್ದರು. ತರಬ್ಬಾ ಗ್ರಾಮದ ಬಳಿ, ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರರು ದಾರಿ ಬಿಡುವಂತೆ ಕೇಳಿದ್ದಾರೆ. ಇ-ರಿಕ್ಷಾದಲ್ಲಿ ಪ್ರಯಾಣಿಕರಿದ್ದ ಕಾರಣ ದಾರಿ ಕೊಡಲು ಸಾಧ್ಯವಾಗದಿದ್ದಾಗ, ಬೈಕ್ ಸವಾರರು ಭಗವಾನ್ ದಾಸ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವಾಗ್ವಾದ ತೀವ್ರಗೊಂಡು, ಬೈಕ್ ಸವಾರರು ಭಗವಾನ್ ದಾಸ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಭಗವಾನ್ ಅವರ ಮಗ ಜಿತೇಂದ್ರ ಹೇಳಿರುವ ಪ್ರಕಾರ, ಆರೋಪಿಗಳು ತಮ್ಮ ತಂದೆಯನ್ನು ಕ್ರೂರವಾಗಿ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಜಿತೇಂದ್ರ ತಂದೆಯ ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ನಂತರ, ವಿಷಯ ತಿಳಿದ ದಲಿತ ಸಮುದಾಯದ ಜನರು ಮತ್ತು ಕುಟುಂಬ ಸದಸ್ಯರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಎಸ್‌ಡಿಎಂ ಆನಂದ್ ಕುಮಾರ್ ಕನೌಜಿಯಾ, ಸಿಒ ರಾಜವೀರ್ ಸಿಂಗ್ ಪರಿಹಾರ್, ಕೊತ್ವಾಲ್ ಧನಂಜಯ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. ಕುಟುಂಬ ಸದಸ್ಯರು ಮತ್ತು ಪ್ರತಿಭಟನಾಕಾರರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ನಿರಾಕರಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾ ಸಾಗರ್ ಮಿಶ್ರಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ, ಸುಮಾರು ಹತ್ತು ಗಂಟೆಯ ಸುಮಾರಿಗೆ ಪ್ರತಿಭಟನೆ ತಣ್ಣಗಾಯಿತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಮಳೆಯ ಕಾರಣದಿಂದ ಮೃತದೇಹವನ್ನು ಟಿನ್ ಶೆಡ್ ಒಂದರಲ್ಲಿ ಇರಿಸಿ ನಂತರ ಪ್ರತಿಭಟನಾಕಾರರು ರಸ್ತೆಗೆ ಬಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು, ಹಲ್ಲೆ ಮಾಡಿದ ಆರೋಪಿಗಳು ಮಿಲಕ್ ಕೊತ್ವಾಲಿ ಪ್ರದೇಶದ ಬಾರಾ ಗಜೇಜಾ ನಿವಾಸಿಗಳು ಎಂದು ಆರೋಪಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾ ಸಾಗರ್ ಮಿಶ್ರಾ ಅವರು ಮಾತನಾಡಿ, ಘಟನೆ ಬಗ್ಗೆ ಮಾಹಿತಿ ಬಂದಿದ್ದು, ತನಿಖೆ ನಡೆಸಲಾಗುವುದು ಮತ್ತು ಇನ್ನೂ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 125 ಕೃಷಿ ಸಹಕಾರ ಸಂಘಗಳು ದಿವಾಳಿ ಹಂತದಲ್ಲಿವೆ: ಲೋಕಸಭೆಗೆ ಅಮಿತ್ ಶಾ ಮಾಹಿತಿ


