ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಘೋಷಿಸಲಾದ ‘ಉಂಗಲುಡನ್ ಸ್ಟಾಲಿನ್’ (ನಿಮ್ಮ ಸ್ಟಾಲಿನ್) ಯೋಜನೆಗೆ ತಮಿಳುನಾಡು ಸರ್ಕಾರ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹೆಸರನ್ನು ಬಳಸುವುದನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ (ಆಗಸ್ಟ್ 6) ರದ್ದುಗೊಳಿಸಿದೆ.
ಹೈಕೋರ್ಟ್‌ನ ಆದೇಶದ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಹಾಗೂ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಆದೇಶ ಹೊರಡಿಸಿದೆ.
ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಜೀವಂತ ವ್ಯಕ್ತಿಗಳು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಅಥವಾ ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಬಳಸುವುದನ್ನು ಹೈಕೋರ್ಟ್‌ನ ಆದೇಶವು ನಿರ್ಬಂಧಿಸಿತ್ತು.
ದೇಶದಾದ್ಯಂತ ನಾಯಕರ ಹೆಸರಿನಲ್ಲಿ ಇಂತಹ ಯೋಜನೆಗಳು ಸಾಮಾನ್ಯವಾಗಿರುವಾಗ, ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ (ಹೈಕೋರ್ಟ್‌ನಲ್ಲಿ ಅರ್ಜಿದಾರ) ತಮಿಳುನಾಡು ಸರ್ಕಾರದ ಯೋಜನೆಯನ್ನು ಮಾತ್ರ ಎತ್ತಿ ತೋರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀವ್ರ ಟೀಕೆ ವ್ಯಕ್ತಪಡಿಸಿತು. ಎಐಎಡಿಎಂಕೆ ಅಧಿಕಾರಾವಧಿಯಲ್ಲಿ ನಾಯಕರ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂಬ ಡಿಎಂಕೆಯ ವಾದವನ್ನು ನ್ಯಾಯಾಲಯ ಗಮನಿಸಿತು.
ಅರ್ಜಿದಾರರು ಭಾರತ ಚುನಾವಣಾ ಆಯೋಗಕ್ಕೆ ದೂರು ನೀಡಿದ ಮೂರು ದಿನಗಳಲ್ಲಿ ಹೈಕೋರ್ಟ್‌ಗೆ ಧಾವಿಸಿ ಬಂದಿರುದಕ್ಕೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿತು. ರಿಟ್ ಅರ್ಜಿಯು ‘ಕಾನೂನಿನಲ್ಲಿ ತಪ್ಪು ಕಲ್ಪನೆ’ ಮಾತ್ರವಲ್ಲದೆ ಕಾನೂನಿನ ಪ್ರಕ್ರಿಯೆಯ ದುರುಪಯೋಗ ವಾಗಿದೆ ಎಂದು ಹೇಳಿತು.
ಹೈಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವರ್ಗಾಯಿಸಿಕೊಂಡಿತು ಮತ್ತು ಅರ್ಜಿದಾರನಿಗೆ 10 ಲಕ್ಷ ರೂ.ಗಳ ದಂಡ ವಿಧಿಸಿ ವಜಾಗೊಳಿಸಿತು. ಒಂದು ವಾರದೊಳಗೆ ತಮಿಳುನಾಡು ಸರ್ಕಾರಕ್ಕೆ ದಂಡದ ಹಣವನ್ನು ಠೇವಣಿ ಇಡಲು ನ್ಯಾಯಾಲಯ ನಿರ್ದೇಶಿಸಿದೆ. ಸರ್ಕಾರವು ಈ ಮೊತ್ತವನ್ನು ದೀನದಲಿತರ ಕಲ್ಯಾಣಕ್ಕಾಗಿ ಬಳಸಬೇಕೆಂದು ನ್ಯಾಯಾಲಯ ಸೂಚಿಸಿದೆ.
Courtesy : livelaw.in .


