ಅಲಿಗಢ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿದೇಶಿ ಉತ್ಪನ್ನಗಳನ್ನು ಖರೀದಿಸುವುದರಿಂದ ಬಂದ ಲಾಭವು ಭಯೋತ್ಪಾದನೆ, ಮತಾಂತರ ಮತ್ತು ‘ಲವ್ ಜಿಹಾದ್’ನಂತಹ ದೇಶ ವಿರೋಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತದೆ ಎಂದು ಹೇಳಿಕೆ ನೀಡಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ.
ದೇಶೀಯ ಉತ್ಪನ್ನಗಳಿಗೆ ಒತ್ತು
ರಾಜ್ಯ ಸರ್ಕಾರದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಕಾರ್ಯಕ್ರಮದಡಿ ಅಲಿಗಢದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಯೋಗಿ, ಪ್ರಜೆಗಳು ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ‘ಸ್ವದೇಶಿ’ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಕರೆ ನೀಡಿದರು. “ನೀವು ವಿದೇಶಿ ವಸ್ತುಗಳನ್ನು ಖರೀದಿಸಿದಾಗ, ಅದರ ಲಾಭ ವಿದೇಶಗಳಿಗೆ ಹೋಗುತ್ತದೆ. ಆ ಹಣವು ದೇಶದ ಸ್ಥಿರತೆಗೆ ಧಕ್ಕೆ ತರುವ ಭಯೋತ್ಪಾದನೆ, ಲವ್ ಜಿಹಾದ್ ಮತ್ತು ಮತಾಂತರ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ,” ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಬಲಪಡಿಸಲು ಈ ಹೇಳಿಕೆ ನೀಡಿರುವುದಾಗಿ ಅವರು ತಿಳಿಸಿದರು. ಆರ್ಥಿಕ ಸ್ವಾವಲಂಬನೆಯನ್ನು ರಾಷ್ಟ್ರೀಯ ಭದ್ರತೆಗೆ ಜೋಡಿಸುವುದು ಇದರ ಮುಖ್ಯ ಉದ್ದೇಶ ಎಂದು ಅವರು ಹೇಳಿದರು.
ಅಲಿಗಢದ ಸಾಂಪ್ರದಾಯಿಕ ಬೀಗಗಳ ಉದ್ಯಮವನ್ನು ಉದಾಹರಣೆಯಾಗಿ ನೀಡಿದ ಸಿಎಂ, 2017ರ ಮೊದಲು ಮಾರುಕಟ್ಟೆ ಚೀನಾ ಉತ್ಪನ್ನಗಳಿಂದ ತುಂಬಿ ಹೋಗಿತ್ತು. ಇದರಿಂದ ಸ್ಥಳೀಯ ಕುಶಲಕರ್ಮಿಗಳ ಜೀವನಕ್ಕೆ ಹೊಡೆತ ಬಿದ್ದಿತ್ತು ಎಂದು ಹೇಳಿದರು. ಆದರೆ, ODOP ಉಪಕ್ರಮವು ಪ್ರಾದೇಶಿಕ ಉತ್ಪಾದನೆಯನ್ನು ಪುನಶ್ಚೇತನಗೊಳಿಸಿದೆ ಎಂದು ಅವರು ಪ್ರತಿಪಾದಿಸಿದರು.
ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ
ವಿದೇಶಿ ಸರಕುಗಳ ಖರೀದಿ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ನಡುವೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಸಿಎಂ ಯೋಗಿ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕೆಲವರು ಯೋಗಿ ಅವರ ಹೇಳಿಕೆಯನ್ನು ರಾಷ್ಟ್ರೀಯತೆ ಮತ್ತು ಆರ್ಥಿಕ ಜಾಗೃತಿಯ ಸಂಕೇತವೆಂದು ಬಣ್ಣಿಸಿದ್ದಾರೆ. “ಸ್ವದೇಶಿ ಕೇವಲ ಆರ್ಥಿಕತೆಯ ಪ್ರಶ್ನೆಯಲ್ಲ, ಇದು ರಾಷ್ಟ್ರೀಯತೆಯ ವಿಷಯ. ವಿದೇಶಿ ವಸ್ತುಗಳ ಮೇಲೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯೂ ಭಾರತಕ್ಕೆ ಹಾನಿ ಮಾಡಬಹುದು,” ಎಂದು X (ಹಿಂದಿನ ಟ್ವಿಟರ್) ಬಳಕೆದಾರರೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಹೆಚ್ಚಿನ ಜನರು ಈ ಹೇಳಿಕೆಯನ್ನು “ಭಯ ಹುಟ್ಟಿಸುವ ತಂತ್ರ” ಎಂದು ಟೀಕಿಸಿದ್ದಾರೆ. “ಗ್ರಾಹಕರ ಆಯ್ಕೆಗಳನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವುದು ರಾಜಕೀಯ ತಂತ್ರದ ಹೊರತಾಗಿ ಬೇರೇನೂ ಅಲ್ಲ. ಇದು ವಾಸ್ತವಿಕ ನೀತಿಯಲ್ಲ,” ಎಂದು ಮತ್ತೊಬ್ಬ X ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್ ಫೋರಮ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ, ಈ ಹೇಳಿಕೆಯ ಕುರಿತು ವ್ಯಂಗ್ಯಭರಿತ ಪೋಸ್ಟ್‌ಗಳು ಮತ್ತು ಮೀಮ್‌ಗಳು ಹರಿದಾಡುತ್ತಿವೆ. ವಿದೇಶಿ ವ್ಯಾಪಾರವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳೊಂದಿಗೆ ಸಮೀಕರಿಸುತ್ತಿರುವ ಬಗ್ಗೆ ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ರೆಡ್ಡಿಟ್ ಬಳಕೆದಾರರು, “ಬಸ್ ಅಬ್ PM ಬನಾ ಹಿ ದೊ” (ಇನ್ನು ಇವರನ್ನು ಪ್ರಧಾನಿ ಮಾಡಿಬಿಡಿ) ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ಈ ಹೇಳಿಕೆಯು ಆರ್ಥಿಕ ತರ್ಕಕ್ಕಿಂತ ಹೆಚ್ಚಾಗಿ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ ಎಂದು ಸೂಚಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಉಲ್ಲೇಖಿಸಿ, ಮುಸ್ಲಿಮೇತರರ ಟ್ರಿಬ್ಯೂನಲ್ ಪ್ರಕರಣ ಕೈಬಿಡಲು ಅಸ್ಸಾಂ ಸರಕಾರ ಆದೇಶ


