ಬೆಂಗಳೂರು, ಆ.7: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು (ಆ.8) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ನಗರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ನಿರ್ಬಂಧಿತ ರಸ್ತೆಗಳು ಮತ್ತು ಪರ್ಯಾಯ ಮಾರ್ಗಗಳು:
- ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್: ಇಲ್ಲಿಂದ ಆನಂದ್ ರಾವ್ ಮೇಲ್ಸೇತುವೆ, ಓಲ್ಡ್ ಜೆಡಿಎಸ್ ರಸ್ತೆ ಮತ್ತು ಶೇಷಾದ್ರಿಪುರ ರಸ್ತೆಗೆ ಸಂಚಾರವನ್ನು ನಿಷೇಧಿಸಲಾಗಿದೆ.
- ಪರ್ಯಾಯ ಮಾರ್ಗ: ಲುಲು ಮಾಲ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್ ಮತ್ತು ರೇಸ್ ಕೋರ್ಸ್ ಮೇಲ್ಸೇತುವೆಗಳ ಮೂಲಕ ಪ್ರಯಾಣಿಸಬಹುದು.
- ಮೈಸೂರು ಬ್ಯಾಂಕ್‌ನಿಂದ ಚಾಲುಕ್ಯ ಕಡೆಗೆ: ಈ ಮಾರ್ಗದಲ್ಲಿ ಸಂಚಾರ ನಿರ್ಬಂಧವಿದೆ.
- ಪರ್ಯಾಯ ಮಾರ್ಗ: ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ರಾಜೀವ್ ಗಾಂಧಿ ಸರ್ಕಲ್ ಮತ್ತು ರೇಸ್ ಕೋರ್ಸ್ ಮೇಲ್ಸೇತುವೆಗಳ ಮೂಲಕ ಸಂಚರಿಸಬಹುದು.
- ಚಾಲುಕ್ಯದಿಂದ ಮೈಸೂರು ಬ್ಯಾಂಕ್ ಕಡೆಗೆ: ಈ ಮಾರ್ಗದಲ್ಲಿಯೂ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಪರ್ಯಾಯ ಮಾರ್ಗ: ಚಾಲುಕ್ಯ ಸರ್ಕಲ್, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸಲು ಸೂಚಿಸಲಾಗಿದೆ.
- ಕಾಳಿದಾಸ ರಸ್ತೆ, ಕನಕದಾಸ ಜಂಕ್ಷನ್: ಇಲ್ಲಿಂದ ಫ್ರೀಡಂ ಪಾರ್ಕ್ ಕಡೆಗೆ ಹೋಗುವ ವಾಹನಗಳು ಕನಕದಾಸ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಸಾಗರ್ ಜಂಕ್ಷನ್ ಕಡೆಗೆ ಹೋಗಬಹುದು.
- ಮೌರ್ಯ ಸುಬ್ಬಣ್ಣ ಜಂಕ್ಷನ್: ಇಲ್ಲಿಂದ ಫ್ರೀಡಂ ಪಾರ್ಕ್ ಕಡೆಗೆ ಹೋಗುವವರು ಸುಬ್ಬಣ್ಣ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದು.
ಸಂಚಾರ ದಟ್ಟಣೆಯ ಅನನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಹೋರಾಟದ ಹಿನ್ನಲೆ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ, ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ (ಅ.7) ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನ್ಯಾಯಯುತ ಚುನಾವಣೆಗಳನ್ನು ನಡೆಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಟೀಕಿಸಿದ್ದರು.
ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು, ಅಮಾನ್ಯ ವಿಳಾಸಗಳು ಮತ್ತು ಒಂದೇ ವಿಳಾಸದಲ್ಲಿ ಅನೇಕ ಹೆಸರುಗಳು ದಾಖಲಾಗಿವೆ ಎಂದು ಕಾಂಗ್ರೆಸ್ ನಡೆಸಿದ ಆಂತರಿಕ ಅಧ್ಯಯನದಿಂದ ತಿಳಿದುಬಂದಿದೆ ಎಂದು ಗಾಂಧಿ ವಿವರಿಸಿದ್ದರು. ಈ ಅಕ್ರಮಗಳಿಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಸಹಕರಿಸಿವೆ ಎಂದು ಅವರು ಆರೋಪಿಸಿದ್ದರು.
ಚುನಾವಣಾ ಆಯೋಗವು ಮತದಾರರ ಪಟ್ಟಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ನೀಡಲು ನಿರಾಕರಿಸಿರುವುದನ್ನು ಗಾಂಧಿ ಪ್ರಶ್ನಿಸಿದರು. ಎಲೆಕ್ಟ್ರಾನಿಕ್ ಡೇಟಾ ನೀಡಿದರೆ ಕೇವಲ 30 ಸೆಕೆಂಡುಗಳಲ್ಲಿ ಈ ವಂಚನೆಯನ್ನು ಬಯಲು ಮಾಡಬಹುದು. ಆದರೆ, ಆಯೋಗವು ಭೌತಿಕ ಪ್ರತಿಯನ್ನು ಮಾತ್ರ ನೀಡುವ ಮೂಲಕ ಪರಿಶೀಲನೆ ಪ್ರಕ್ರಿಯೆಯನ್ನು ಕಠಿಣಗೊಳಿಸಿದೆ ಎಂದು ಅವರು ಹೇಳಿದರು. ಅಲ್ಲದೆ, ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿದ್ದರು.
2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಕೇವಲ 32,707 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಅಕ್ರಮಗಳು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ರಾಹುಲ್ ಗಾಂಧಿ ದೂರಿದ್ದರು.
“ಇದು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆಯ ಮೇಲಿನ ನೇರ ದಾಳಿ. ಚುನಾವಣಾ ಆಯೋಗವು ತನ್ನ ಸಂವಿಧಾನಾತ್ಮಕ ಕರ್ತವ್ಯವನ್ನು ನಿರ್ಲಕ್ಷಿಸಿ, ಬಿಜೆಪಿ ಸರ್ಕಾರಕ್ಕೆ ಅನುಕೂಲಕರವಾಗಿ ವರ್ತಿಸುತ್ತಿದೆ,” ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು. ಈ ಆರೋಪಗಳ ಹಿನ್ನೆಲೆಯಲ್ಲಿ ಇಂದು (ಆ.8) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದ್ದರು. ಈ ಪ್ರತಿಭಟನೆಯ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಲಿದ್ದು, ಎಐಸಿಸಿ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಮತ ಕದ್ದು ಪ್ರಧಾನಿಯಾಗಿರುವ ಮೋದಿಗೆ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ: ಸಿದ್ದರಾಮಯ್ಯ


