ಧರ್ಮಸ್ಥಳದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೊಂಡಿರುವ ಶವ ಶೋಧ ಕಾರ್ಯಾಚರಣೆಯಲ್ಲಿ ಶನಿವಾರ (ಆ.9) ಹೊಸ ಬೆಳವಣಿಗೆಯೊಂದು ನಡೆದಿದೆ.
ಸಾಕ್ಷಿ ದೂರುದಾರ ಬಾಹುಬಲಿ ಬೆಟ್ಟದಲ್ಲಿ ಹೊಸ ಜಾಗವೊಂದನ್ನು ತೋರಿಸಿದ್ದಾರೆ. ಈ ಜಾಗವನ್ನು ಎಸ್‌ಐಟಿ ತಂಡ ಪಾಯಿಂಟ್ ನಂಬರ್ 16 ಎಂದು ಗುರುತಿಸಿದೆ. ಬಾಹುಬಲಿ ಬೆಟ್ಟದ ತುದಿಗೆ ತೆರಳುವ ರಸ್ತೆ ಬದಿಯೇ ಈ ಜಾಗವಿದ್ದು, ಅಲ್ಲಿ ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿಶೇಷವಾಗಿ, ಎಸ್‌ಐಟಿ ತಂಡ ದೂರುದಾರನನ್ನು ಕರೆದುಕೊಂಡು ಧರ್ಮಸ್ಥಳ ದೇವಸ್ಥಾನದ ಮುಖ್ಯ ದ್ವಾರದ ಮೂಲಕವೇ ಒಳ ಪ್ರವೇಶಿಸಿ ಬೆಟ್ಟದ ತುದಿಗೆ ತೆರಳಿದೆ. ಅಲ್ಲಿ ಆತ ತೋರಿಸಿರುವ ಜಾಗವನ್ನು ಅಧಿಕಾರಿಗಳು ಟೇಪ್ ಕಟ್ಟಿ ಗುರುತು ಮಾಡಿದ್ದಾರೆ. ಅಲ್ಲದೆ, ಹಸಿರು ನೆಟ್ ಕಟ್ಟಿ ಮಣ್ಣು ಅಗೆಯಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಕ್ಷಿ ದೂರುದಾರ ಆರಂಭದಲ್ಲಿ 13 ಜಾಗಗಳನ್ನು ಪಾಯಿಂಟ್‌ಗಳನ್ನು ಗುರುತಿಸಿದ್ದರು. ಬಳಿಕ ಅದು 15ರಕ್ಕೇರಿತ್ತು. ಈ ಪೈಕಿ ಪಾಯಿಂಟ್ 13 ಹೊರತುಪಡಿಸಿ ಉಳಿದೆಡೆ ಶೋಧ ನಡೆಸಲಾಗಿದೆ. ಪಾಯಿಂಟ್ ನಂಬರ್ 6 ಮತ್ತು 11ರ ಸಮೀಪ ಮನುಷ್ಯರ ಅಸ್ಥಿಪಂಜರದ ಅವಶೇಷಗಳು ಸಿಕ್ಕಿದೆ ಎನ್ನಲಾಗಿದೆ.
ಈಗಾಗಲೇ ಎಲ್ಲೆಡೆ ಸುದ್ದಿಯಾಗಿರುವಂತೆ ದೂರುದಾರ ಧರ್ಮಸ್ಥಳ ಸಮೀಪದ ಕಲ್ಲೇರಿ ಮತ್ತು ಬೋಳಿಯಾರ್ ಎಂಬ ಜಾಗಗಳಲ್ಲಿ ಶವ ಹೂತಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆ ಜಾಗಗಳಲ್ಲಿ ಎಸ್‌ಐಟಿ ಶನಿವಾರ ಶೋಧ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ನಡುವೆ ದೂರುದಾರ ಬಾಹುಬಲಿ ಬೆಟ್ಟದಲ್ಲಿ ಹೊಸ ಪಾಯಿಂಟ್ ತೋರಿಸಿದ್ದಾರೆ.
ಇಬ್ಬರು ಸಾಕ್ಷಿಗಳು ಪ್ರತ್ಯಕ್ಷ
ಎಸ್‌ಐಟಿ ಶವ ಶೋಧ ನಡೆಸುತ್ತಿರುವ ಪ್ರಕರಣದ ದೂರುದಾರ ಶವ ಹೂತಿರುವುದನ್ನು ನಾವು ನೋಡಿದ್ದೇವೆ ಎಂದು ಇಬ್ಬರು ಎಸ್‌ಐಟಿ ತಂಡ ಮುಂದೆ ಹಾಜರಾಗಿದ್ದಾರೆ ಎಂದು ಶುಕ್ರವಾರ ವರದಿಯಾಗಿತ್ತು. ಅವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಸಲಹೆ ನೀಡಿದ್ದರು. ಅದರಂತೆ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಜಯಂತ ಶೆಟ್ಟಿಯಿಂದ ಎರಡೇ ದೂರು
ಮೊದಲ ಅನಾಮಿಕ ವ್ಯಕ್ತಿಯ ದೂರಿನಂತೆ ಪ್ರಸ್ತುತ ಧರ್ಮಸ್ಥಳದಲ್ಲಿ ಶವ ಶೋಧ ನಡೆಯುತ್ತಿದೆ. ಈ ನಡುವೆ ಆಗಸ್ಟ್ 2ರಂದು ಜಯಂತ ಶೆಟ್ಟಿ ಎಂಬವರು ವರ್ಷಗಳ ಬಾಲಕಿಯೊಬ್ಬಳ ಶವ ಹೂತು ಹಾಕಿರುವುದನ್ನು ನಾನು ನೋಡಿದ್ದೇನೆ. ತನ್ನ ಆರೋಪಕ್ಕೆ ಜೀವಂತ ಸಾಕ್ಷಿಗಳಿದ್ದಾರೆ. ಅಗತ್ಯ ಬಂದರೆ ಅವರನ್ನು ಕರೆತಂದು ನಿಲ್ಲಿಸುತ್ತೇನೆ ಎಂದು ಎಸ್‌ಐಟಿಗೆ ದೂರು ನೀಡಿದ್ದರು. ತಾನು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಪದ್ಮಲತಾ ಅವರ ಸಂಬಂಧಿ ಎಂದು ಜಯಂತ ಶೆಟ್ಟಿ ಹೇಳಿಕೊಂಡಿದ್ದಾರೆ.
ಜಯಂತ ಶೆಟ್ಟಿ ದೂರು ನೀಡಿದ ಮರುದಿನವೇ 5 ಮಂದಿ ಸಾಕ್ಷಿಗಳು ತಾವು ಶವ ಹೂತಿರುವುದನ್ನು ನೋಡಿರುವುದಾಗಿ ಎಸ್‌ಐಟಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಯೂಟ್ಯೂಬರ್‌ಗಳ ಮೇಲೆ ಹಲ್ಲೆ
ಆಗಸ್ಟ್ 6ರಂದು ಸೌಜನ್ಯ ಮನೆಗೆ ತೆರಳುವ ಪಾಂಗಳ ಕ್ರಾಸ್ ಬಳಿ ನಾಲ್ವರು ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ, ನಂತರದ ಘಟನೆಗಳಿಗೆ ಸಂಬಂಧಪಟ್ಟಂತೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಫ್‌ಐಆರ್‌ಗಳು ದಾಖಲಾಗಿವೆ.
ಮತಗಳ್ಳತನ| ಕಾನೂನು ಇಲಾಖೆ ಶಿಫಾರಸಿನಂತೆ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ


