ಧರ್ಮಸ್ಥಳದಲ್ಲಿ 39 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಕೋರಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪದ್ಮಲತಾ ಅವರ ಅಕ್ಕ ಇಂದ್ರಾವತಿ ದೂರು ನೀಡಿದ್ದಾರೆ.
ಸೋಮವಾರ (ಆ.11) ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ ಇಂದ್ರಾವತಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
“ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು, ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕನಾಗಿರುತ್ತೇನೆ. 38 ವರ್ಷಗಳ ಹಿಂದೆ ಎಸ್‌ಡಿಎಂ ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತಾ ದಿನಾಂಕ 22.12.1986ರಂದು ಉಜಿರೆ ಕಾಲೇಜಿಗೆ ಹೋದವಳು ಸಂಜೆ ಧರ್ಮಸ್ಥಳ ತನಕ ಬಂದು ಕಾಣೆಯಾಗಿರುತ್ತಾಳೆ. ಆಕೆಯ ಮೃತದೇಹ ದಿನಾಂಕ 17.02.1987 ರಂದು ನೆರಿಯ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮ ತಂದೆ ಮನೆಯು ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಇತ್ತು” ಎಂದು ವಿವರಿಸಿದ್ದಾರೆ.
ಮುಂದುವರಿದು, “ನನ್ನ ತಂಗಿ ಅಪಹರಣ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಕಾರಣ, ಆಕೆಯ ಅಸಹಜ ಸಾವಿಗೆ ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಿಪಿಐಎಂ ಮುಖಂಡರೂ ಆಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ಸಿಪಿಐಎಂ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಹೋರಾಟಕ್ಕೆ ಮಣಿದ ಸರ್ಕಾರ ಕೊನೆಗೆ ಪ್ರಕರಣದ ತನಿಖೆ ನಡೆಸಲು ಸಿಓಡಿ ತನಿಖೆಗೆ ಆದೇಶಿಸಿತು. ವಿಧಾನ ಸಭೆಯಲ್ಲಿ ಚರ್ಚೆ ಆಗಿರುವುದು ಕೂಡಾ ವಿಧಾನಸಭಾ ದಾಖಲೆಯಲ್ಲಿ ಇರಬೇಕು. ಅಂದು ಸಚಿವರಾಗಿದ್ದ ರಾಚಯ್ಯ ಅವರೂ ಧರ್ಮಸ್ಥಳ ಗ್ರಾಮದ ಬೊಳಿಯಾರಲ್ಲಿರುವ ನಮ್ಮ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಕೊನೆಗೆ ತನಿಖೆಯು ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ನಮಗೆ ನ್ಯಾಯ ಸಿಗದಂತಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಅದು ಒಂದು ಯೋಜಿತ ಅಪಹರಣ, ಅತ್ಯಾಚಾರ, ಕೊಲೆ ಎಂಬ ನಮ್ಮ ಅನುಮಾನದಂತೆ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ನನ್ನ ತಂಗಿಯ ಕಳೆಬರಹವನ್ನು ದಹನ ಮಾಡದೆ ಹೂತಿಟ್ಟಿದ್ದೇವೆ. ಅದನ್ನು ತೆಗೆದು ತನಿಖೆ ನಡೆಸಿದರೆ ಕೊಲೆಯಾದ ಖಚಿತತೆ ಸಿಗಲಿದೆ ಹಾಗೂ ನನಗೆ ತಿಳಿದ ಸಾಕ್ಷಿನುಡಿಯಲು ನಾನು ಸಿದ್ಧಳಿದ್ದೇನೆ. ಆದ್ದರಿಂದ ನನ್ನ ತಂಗಿಯ ಪ್ರಕರಣವನ್ನು ರೀ-ಓಪನ್ ಮಾಡಿ, ಹೂತಿಟ್ಟ ಕಳೆಬರವನ್ನು ತೆಗೆದು ತನಿಖೆ ನಡೆಸಿ ತಂಗಿಯ ಸಾವಿಗೆ ನ್ಯಾಯ ಒದಗಿಸಬೇಕಾಗಿ ಹಾಗೂ ಅಪರಾಧಿಗಳ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಮಾಡುತ್ತೇನೆ” ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಂದ್ರಾವತಿ, “ನನ್ನ ತಂಗಿ ಕೊಲೆಯಾಗಿ 39 ವರ್ಷಗಳು ಕಳೆಯಿತು. ಇದುವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ. ಕೊಲೆಗಾರರು ಯಾರು ಅಂತ ಪತ್ತೆಯಾಗಿಲ್ಲ. ಈಗ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅವರು ಪದ್ಮಲತಾ ಕೊಲೆಗಾರರನ್ನೂ ಪತ್ತೆ ಹಚ್ಚಬಹುದು ಎಂಬ ನಿರೀಕ್ಷೆಯಿಂದ ದೂರು ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಪದ್ಮಲತಾ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ‘ಪತ್ತೆ ಹಚ್ಚಲಾಗದ ಪ್ರಕರಣ’ ಎಂದು ವರದಿ ಕೊಟ್ಟಿತ್ತು. ಈಗ ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ನಮಗೆ ನ್ಯಾಯ ಸಿಗಬಹುದು ಎಂಬ ಭರವಸೆಯಲ್ಲಿ ದೂರು ಕೊಟ್ಟಿದ್ದೇವೆ ಎಂದಿದ್ದಾರೆ.
ಪದ್ಮಲತಾ ಕೊಲೆಗಾರರು ಯಾರು ಎಂದು ಗೊತ್ತಾಗಬೇಕು. ಅವರಿಗೆ ಸರಿಯಾಗಿ ಶಿಕ್ಷೆಯಾಗಬೇಕು ಎಂದು ಇಂದ್ರಾವತಿ ಆಗ್ರಹಿಸಿದ್ದಾರೆ.
ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿ ಸದಸ್ಯ ಮಾತನಾಡಿ, “ದೇವಾನಂದರ ಮಗಳು ಪದ್ಮಲತಾ ಡಿಸೆಂಬರ್ 22, 1986ರಂದು ಕಾಲೇಜಿಗೆ ತೆರಳಿದವಳು ವಾಪಸ್ ಧರ್ಮಸ್ಥಳಕ್ಕೆ ಬಸ್‌ನಲ್ಲಿ ಬಂದಿರುವುದನ್ನು ಆಕೆಯ ಸಹಪಾಠಿಗಳು ನೋಡಿದ್ದರು. ಆಮೇಲೆ ಪದ್ಮಲತಾ ಕಣ್ಮರೆಯಾಗಿದ್ದಳು. ಫೆಬ್ರವರಿ 17, 1987ರಂದು ಕೊಳೆತ ಸ್ಥಿತಿಯಲ್ಲಿ ನೆರಿಯ ಹೊಳೆಯ ಸಮೀಪ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ವಸ್ತ್ರ ಮತ್ತು ಕೈಗೆ ಕಟ್ಟಿದ್ದ ವಾಚ್‌ನಿಂದ ಅದು ಪದ್ಮಲತಾ ಮೃತದೇಹ ಎಂದು ನಾವು ಗುರುತು ಹಿಡಿದಿದ್ದೆವು ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದರೂ ಸರಿಯಾದ ತನಿಖೆ ನಡೆದಿರಲಿಲ್ಲ. ಸಿಐಡಿ ಪತ್ತೆಯಾಗದ ಪ್ರಕರಣ ಎಂದು ಹಿಂಬರಹ ಕೊಟ್ಟಿತ್ತು. ಸಿಐಡಿ ಅಪರಾಧಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಿರಲಿಲ್ಲ. ನಾವು ಅವತ್ತು ಪದ್ಮಲತಾಳ ಶವ ಸುಟ್ಟಿರಲಿಲ್ಲ. ಅಗತ್ಯ ಬಂದರೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬಹುದು ಎಂದು ಮುಂದಾಲೋಚನೆಯಿಂದ ಹಾಗೆ ಮಾಡಿದ್ದೆವು. ಈಗ ಮತ್ತೆ ಎಸ್‌ಐಟಿ ರಚನೆಯಾಗಿದೆ. ಹಾಗಾಗಿ ಮತ್ತೊಮ್ಮೆ ದೂರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.


