ಧರ್ಮಸ್ಥಳದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಶವ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಹೆಚ್‌ಆರ್‌ಸಿ) ಸದಸ್ಯರ ತಂಡ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾಮಕ್ಕೆ ಸೋಮವಾರ (ಆ.11) ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದುಕೊಂಡಿದೆ.
ಎನ್‌ಹೆಚ್‌ಆರ್‌ಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಯುವರಾಜ್, ಡಿವೈಎಸ್‌ಪಿ ರವಿ ಸಿಂಗ್ ಹಾಗೂ ಇತರರನ್ನು ಒಳಗೊಂಡ ತಂಡ ಬೆಳ್ತಂಗಡಿಯ ಎಸ್‌ಐಟಿ ಕಚೇರಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಮತ್ತು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ.
ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ಸಾಕ್ಷಿ ದೂರುದಾರ ಮತ್ತು ಅವರ ವಕೀಲರಿಂದ ಕೂಡ ಎನ್‌ಹೆಚ್‌ಆರ್‌ಸಿ ಹೇಳಿಕೆ ಪಡೆದುಕೊಂಡಿದೆ. ಅಲ್ಲದೆ, ಕಳೆದ ದಶಕಗಳಲ್ಲಿ ದಾಖಲಾದ ಅಸಹಜ ಸಾವು ಪ್ರಕರಣಗಳ ಮಾಹಿತಿಯನ್ನು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಸಂಗ್ರಹಿಸಿದೆ.
ತಂಡದ ಕೆಲ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಭೇಟಿ ಕೊಟ್ಟು ಕಳೆದ ದಶಕಗಳಲ್ಲಿ ಗ್ರಾಮದಲ್ಲಿ ಹೂಳಲಾದ ಅನಾಥ ಶವಗಳ ಮಾಹಿತಿಯನ್ನು ಪಡೆದುಕೊಂಡಿದೆ.
ಈ ಅವಧಿಯಲ್ಲಿ ಶವಗಳ ಅಂತ್ಯಕ್ರಿಯೆಯಲ್ಲಿ ತೊಡಗಿದ್ದ ಕಾರ್ಮಿಕರ ಸಂಖ್ಯೆ ಮತ್ತು ಅವರೆಲ್ಲರೂ ಇನ್ನೂ ಜೀವಂತವಾಗಿದ್ದಾರೆಯೇ ಎಂಬ ವಿವರಗಳನ್ನು ಕೂಡ ಎನ್‌ಹೆಚ್‌ಆರ್‌ಸಿ ತಂಡ ಸಂಗ್ರಹಿಸಿದೆ.
ವರದಿಗಳ ಪ್ರಕಾರ, ಶವಗಳನ್ನು ಹೂಳಿದ್ದ ಕೆಲವು ಕಾರ್ಮಿಕರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಪ್ರಸ್ತುತ ಗ್ರಾಮ ಪಂಚಾಯತ್‌ನಿಂದ ನೇಮಕಗೊಂಡಿರುವ ನೈರ್ಮಲ್ಯ ಕಾರ್ಮಿಕರನ್ನು ಪಂಚಾಯತ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಆಗಸ್ಟ್ 9ರಂದು ಎಸ್‌ಐಟಿ ತಂಡವು ಧರ್ಮಸ್ಥಳದ ಬಾಹುಬಲಿ ಬೆಟ್ಟಕ್ಕೆ ಹೋಗುವ ರಸ್ತೆಯ ಬದಿ ಶವಶೋಧ ನಡೆಸಿತ್ತು. ಆ ಜಾಗವನ್ನು ಎನ್‌ಎಚ್‌ಆರ್‌ಸಿ ತಂಡ ಪರಿಶೀಲಿಸಿದೆ.
ಸ್ವಯಂ ಪ್ರೇರಿತ ತನಿಖೆ
“ಪ್ರಕರಣದ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ನಾವು ಸ್ವಯಂ ಪ್ರೇರಿತ ಪರಿಶೀಲನೆ ಮತ್ತು ತನಿಖೆ ನಡೆಸುತ್ತಿದ್ದೇವೆ” ಎಂದು ಎನ್‌ಹೆಚ್‌ಆರ್‌ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಪೊಲೀಸರು ನಿಯಮಗಳನ್ನು ಪಾಲಿಸದೆ ಶವಗಳನ್ನು ವಿಲೇವಾರಿ ಮಾಡಿದ್ದಾರೆಯೇ?..ಯಾವುದೇ ಲೋಪಗಳಾಗಿವೆಯೇ ಎಂದು ನಾವು ಪರಿಶೀಲಿಸುತ್ತೇವೆ. ಸಾಕ್ಷಿ ದೂರುದಾರ, ಅವರ ವಕೀಲರು, ಅವರ ಬೆಂಬಲಿಗರು ಮತ್ತು ತನಿಖೆಯನ್ನು ವಿರೋಧಿಸುವವರಿಂದ ನಾವು ಹೇಳಿಕೆಗಳನ್ನು ದಾಖಲಿಸುತ್ತೇವೆ. ಎಸ್‌ಐಟಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಕೂಡ ನಾವು ಪರಿಶೀಲಿಸುತ್ತೇವೆ. ಎಲ್ಲಾ ಕೋನಗಳಿಂದ ಮಾಹಿತಿಯನ್ನು ಸಂಗ್ರಹಿಸಲು ನಾವು ಸುಮಾರು ನಾಲ್ಕು ದಿನಗಳ ಕಾಲ ಇಲ್ಲಿಯೇ ಇರಲು ಯೋಜಿಸಿದ್ದೇವೆ ಮತ್ತು ಅಗತ್ಯವಿದ್ದರೆ ಹೆಚ್ಚು ಕಾಲ ಉಳಿಯಬಹುದು” ಎಂದು ಅಧಿಕಾರಿ ಹೇಳಿದ್ದಾಗಿ ವರದಿ ವಿವರಿಸಿದೆ.
ಕಾಂಗ್ರೆಸ್ ತೊರೆದ ಅಕ್ಕೈ ಪದ್ಮಶಾಲಿ: ಲಿಂಗತ್ವ, ಲೈಂಗಿಕತೆ ವಿಷಯಗಳಲ್ಲಿ ರಾಜಕೀಯ ಪ್ರಬುದ್ಧತೆಗೆ ಕರೆ


