ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷ ಸಂಸದರು ಮಂಗಳವಾರವೂ (ಆ.12) ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ, ದಾವಣಗೆರೆ ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ‘ಮಿಂಟಾ ದೇವಿ’ ಎಂದು ಬರೆದ ಮಹಿಳೆಯೊಬ್ಬರ ಚಿತ್ರವಿರುವ ಟೀ- ಶರ್ಟ್ ಧರಿಸಿ ಗಮನ ಸೆಳೆದರು. ಟೀ-ಶರ್ಟ್ ಹಿಂಭಾಗದಲ್ಲಿ ‘124 ನಾಟ್ ಔಟ್’ ಎಂದು ಬರೆಯಲಾಗಿತ್ತು.
‘ಮಿಂಟಾ ದೇವಿ ಎಂಬ ಹೆಸರು ಬಿಹಾರದ ಮತದಾರರ ಪಟ್ಟಿಯಲ್ಲಿದ್ದು, 124 ವರ್ಷ ವಯಸ್ಸಿನ ಅವರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ’ಎಂದು ಉಲ್ಲೇಖಿಸಿರುವುದಾಗಿ ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ಡಿಎಂಕೆ ಸಂಸದ ಟಿಆರ್ ಬಾಲು, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಡಿಎಂಕೆ ಮತ್ತು ಎಡ ಪಕ್ಷಗಳ ಇತರ ಸಂಸದರು ಮಂಗಳವಾರ ಸಂಸತ್ತಿನ ಮಕರ ದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾ ನಿರತರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕೈಬಿಡುವಂತೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು, ಘೋಷಣೆಗಳನ್ನು ಕೂಗಿದರು. ಅವರ ಮುಂದೆ ಇದ್ದ ಒಂದು ಬ್ಯಾನರ್‌ನಲ್ಲಿ “ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ” ಮತ್ತು ಇನ್ನೊಂದು ಬ್ಯಾನರ್‌ನಲ್ಲಿ “ಎಸ್‌ಐಆರ್-ಸೈಲೆಂಟ್ ಇನ್ವಿಸಿಬಲ್ ರಿಗ್ಗಿಂಗ್” ಎಂದು ಬರೆಯಲಾಗಿತ್ತು.
ಸಂಸತ್ ಮುಂದೆ ಕಳೆದ 15 ದಿನಗಳಿಂದ ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜೀವ್ ಕುಮಾರ್ ಮತ್ತು ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಬಿಜೆಪಿಯ ಇಲಾಖೆಯಾಗಿದೆ ಎಂದು ಕಾಂಗ್ರೆಸ್‌ನ ಮಾಣಿಕ್ಕಂ ಟ್ಯಾಗೋರ್ ಆರೋಪಿಸಿದರು.
“ಮಿಂಟಾ ದೇವಿ ಮೊದಲ ಬಾರಿಗೆ ಮತ ಚಲಾಯಿಸಿದವರು ಮತ್ತು ಅವರಿಗೆ 124 ವರ್ಷ ವಯಸ್ಸಾಗಿದೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಮೊದಲ ಬಾರಿಗೆ ಮತ ಚಲಾಯಿಸಿದವರಂತೆ ಇದೆ. ಇಂತಹ ವಿಷಯಗಳ ಕುರಿತು ನಾವು ಚರ್ಚೆಯನ್ನು ಬಯಸುತ್ತಿದ್ದೇವೆ. ಚುನಾವಣಾ ಆಯೋಗವು ಬಿಜೆಪಿಗೆ ಹೇಗೆ ಒಂದು ಪಕ್ಷವಾಗಿದೆ. ಮತದಾರರ ಪಟ್ಟಿಯು ಅಂತಹ ವಂಚನೆಯಿಂದ ತುಂಬಿದೆ” ಎಂದು ಪ್ರತಿಭಟನೆಯ ವೇಳೆ ಟ್ಯಾಗೋರ್ ಕಿಡಿಕಾರಿದರು.
ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವಿನ ಒಪ್ಪಂದವನ್ನು ಆರೋಪಿಸಿ ಸಂಸದ “ಸ್ಟಾಪ್ ಎಸ್‌ಐಆರ್” ಮತ್ತು “ವೋಟ್ ಚೋರಿ” ಎಂಬ ಭಿತ್ತಪತ್ರಗಳನ್ನು ಹಿಡಿದಿದ್ದರು.
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗುರಿಯೊಂದಿಗೆ ಚುನಾವಣಾ ಆಯೋಗದ ಮತದಾರರ ಪಟ್ಟಿಯ ಪರಿಷ್ಕರಣೆ ಕೈಗೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸಂಸತ್ತಿನ ಎರಡೂ ಮನೆಗಳಲ್ಲಿ ವಿರೋಧ ಪಕ್ಷಗಳು ಎಸ್‌ಐಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ಉಭಯ ಸದನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
ಈ ವಿಚಾರವಾಗಿ ಸಂಸತ್ತಿನ ಕಲಾಪದಲ್ಲಿ ಗದ್ದಲ ನಡೆಯುತ್ತಿದೆ.
ಜುಲೈ 21 ರಂದು ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ, ಆಪರೇಷನ್ ಸಿಂಧೂರ್ ಕುರಿತು ಚರ್ಚೆಗಳು ನಡೆದಿರುವುದನ್ನು ಹೊರತುಪಡಿಸಿ, ಸಂಸತ್ತಿನಲ್ಲಿ ಯಾವುದೇ ವ್ಯವಹಾರಗಳು ನಡೆದಿಲ್ಲ. ಎಸ್‌ಐಆರ್ ವಿಚಾರವಾಗಿಯೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ನಡೆಯುತ್ತಿದೆ.
ಸೋಮವಾರ ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಅಸ್ಸಾಂ ತೆರವು ಕಾರ್ಯಾಚರಣೆ ವೇಳೆ ಮುಸ್ಲಿಂ ಯುವಕ ಗುಂಡಿನ ದಾಳಿಗೆ ಬಲಿ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ತಾಯಿ ಮನವಿ


