ಮಧ್ಯಪ್ರದೇಶದ ಮೊರೆನಾದಲ್ಲಿ ಕೂಲಿ ಇಲ್ಲದೆ ಜೀತ ಮಾಡಲು ನಿರಾಕರಿಸಿದ ದಲಿತ ವ್ಯಕ್ತಿಯ ಮೇಲೆ ಗುರ್ಜರ ಸಮುದಾಯದ ಸದಸ್ಯನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು, ಬಲಿಪಶುವನ್ನು ಹೊಡೆದಿದ್ದಲ್ಲದೆ, ಆತನ ಗುಡಿಸಲು ಮತ್ತು ಕೊಟ್ಟಿಗೆಗೂ ಬೆಂಕಿ ಹಚ್ಚಿದ್ದಾನೆ.
ಈ ಘಟನೆ ಸೋಮವಾರ ಸಂಜೆ ತಡರಾತ್ರಿ ಅಂಬಾ ಪೊಲೀಸ್ ವ್ಯಾಪ್ತಿಯ ಮಾಲ್ಬಸಾಯಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ತನಿಖೆ ಕೈಗೊಂಡಿದ್ದಾರೆ.
ಗ್ರಾಮದ ದಲಿತ ನಿವಾಸಿ ರಿಂಕು ಸಖ್ಬರ್, ರವಿ ಗುರ್ಜರ್, ಅವರ ತಂದೆ ಪಂಜಾಬ್ ಗುರ್ಜರ್ ಮತ್ತು ಚಿಕ್ಕಪ್ಪನಾದ ಕೃಷ್ಣ ಅಲಿಯಾಸ್ ಬಂಟಿ ಪೆಹಲ್ವಾನ್ ಅವರು ತಮ್ಮ ಕುಟುಂಬವನ್ನು ಪದೇಪದೆ ಕೂಲಿ ಇಲ್ಲದೆ ಜೀತಪದ್ಧತಿಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಕುಟುಂಬವು ಹಲವಾರು ತಿಂಗಳುಗಳಿಂದ ಈ ಬೇಡಿಕೆಗಳನ್ನು ವಿರೋಧಿಸುತ್ತಿದೆ ಎಂದು ರಿಂಕು ಹೇಳಿಕೊಂಡಿದ್ದಾರೆ.
ಘಟನೆಯ ರಾತ್ರಿ, ರಿಂಕು ಅವರ ಸಹೋದರಿ ಮತ್ತು ಚಿಕ್ಕಮ್ಮ ರಕ್ಷಾ ಬಂಧನ ಹಬ್ಬಕ್ಕೆ ಭೇಟಿ ನೀಡುತ್ತಿದ್ದರು. ರಿಂಕು ಪ್ರಕಾರ, ಆರೋಪಿಯೊಂದಿಗೆ ಇತರ ಹಲವರು ಇದ್ದರು. ಅವರು ಬಂದೂಕುಗಳೊಂದಿಗೆ (ಕಟ್ಟಾ) ಬಂದು ಬೆದರಿಕೆ ಹಾಕಿ, ವಿರೋಧಿಸಿದಾಗ ನನ್ನನ್ನೂ ಸಹ ಥಳಿಸಲಾಯಿತು ಎಂದು ವಿವರಿಸಿದ್ದಾರೆ.
ವರದಿಗಳ ಪ್ರಕಾರ, ದನದ ಕೊಟ್ಟಿಗೆಗಳ ಬಳಿ ಘರ್ಷಣೆ ಉಲ್ಬಣಗೊಂಡು, ಅವುಗಳಿಗೆ ಬೆಂಕಿ ಹಚ್ಚಲಾಯಿತು.
ಸುಟ್ಟ ಗುಡಿಸಲುಗಳನ್ನು ಪ್ರಾಥಮಿಕವಾಗಿ ತಮ್ಮ ಜಾನುವಾರುಗಳನ್ನು ಆಶ್ರಯಿಸಲು ಬಳಸಲಾಗುತ್ತಿತ್ತು. ಅವುಗಳ ನಾಶದಿಂದ ನಮಗೆ ಸಾಕಷ್ಟು ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ರಿಂಕು ಅವರ ಕುಟುಂಬ ಹೇಳಿದೆ.
ಸಖ್ಬರ್ ಮತ್ತು ಗುರ್ಜರ್ ಕುಟುಂಬಗಳ ನಡುವೆ ಘರ್ಷಣೆ ನಡೆದಿರುವುದನ್ನು ಎಸ್‌ಡಿಒಪಿ ಅಂಬಾ ರವಿ ಭದೌರಿಯಾ ದೃಢಪಡಿಸಿದರು. ದನಗಳ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಒಪ್ಪಿಕೊಂಡರು. ಆದರೆ ಅದು ಹೇಗೆ ಪ್ರಾರಂಭವಾಯಿತು ಎಂಬುದು ಇನ್ನೂ ತನಿಖೆಯಲ್ಲಿದೆ ಎಂದು ಸ್ಪಷ್ಟಪಡಿಸಿದರು. “ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ, ಸತ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಈ ಘಟನೆಯು ಈ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರ ಮತ್ತು ಜೀತದಾಳು ಪದ್ಧತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಆಂಧ್ರಪ್ರದೇಶದಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ; ಆರೋಪಿಗೆ ಜಗನ್ ಮೋಹನ್ ರೆಡ್ಡಿ ಪಕ್ಷದ ನಾಯಕನ ಜೊತೆ ನಂಟು


