ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರಿಂದ ಪಿಹೆಚ್‌ಡಿ ಪದವಿ ಸ್ವೀಕರಿಸಲು ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ನಿರಾಕರಿಸಿದ ಘಟನೆ ಬುಧವಾರ (ಆ.13) ತಿರುನಲ್ವೇಲಿಯಲ್ಲಿ ನಡೆದಿದೆ.
ಇಲ್ಲಿನ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ (ಎಂಎಸ್‌ಯು) 32ನೇ ಘಟಿಕೋತ್ಸವ ಸಮಾರಂಭದಲ್ಲಿ, ಜೀನ್ ಜೋಸೆಫ್ ಎಂಬ ಸಂಶೋಧನಾ ವಿದ್ಯಾರ್ಥಿನಿ ರಾಜ್ಯಪಾಲರಿಂದ ಪದವಿ ಸ್ವೀಕರಿಸಲು ನಿರಾಕರಿಸಿದ್ದು, ಬದಲಾಗಿ ವಿವಿಯ ಉಪಕುಲಪತಿ ಚಂದ್ರಶೇಖರ್ ಅವರಿಂದ ಪದವಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.
ಜೀನ್ ಜೋಸೆಫ್ ಅವರು ಡಿಎಂಕೆ ನಾಗರಕೋಯಿಲ್ ಘಟಕದ ಉಪ ಕಾರ್ಯದರ್ಶಿ ಎಂ ರಾಜನ್ ಅವರ ಪತ್ನಿ ಎಂದು ವರದಿಯಾಗಿದೆ. ಜೀನ್ ಜೋಸೆಫ್ ಅವರ ವಿಭಿನ್ನ ಪ್ರತಿಭಟನೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜೀನ್ ಜೋಸೆಫ್, “ನನ್ನ ಪದವಿ ಯಾರಿಂದ ಪಡೆದುಕೊಳ್ಳಬೇಕು ಎನ್ನುವುದು ನನ್ನ ಆಯ್ಕೆ. ರಾಜ್ಯಪಾಲರು ತಮಿಳುನಾಡು ಮತ್ತು ತಮಿಳರ ವಿರೋಧಿಯಾಗಿರುವುದರಿಂದ ನಾನು ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸಿದೆ. ನಾನು ದ್ರಾವಿಡ ಮಾದರಿ ಅನುಸರಿಸುತ್ತೇನೆ. ಇಲ್ಲಿ ಹಲವರಿಗೆ ನನ್ನಂತೆ ಅಭಿಪ್ರಾಯ ಇರಬಹುದು. ಇವರಿಂದ ಪದವಿ ಪಡೆಯುವುದು ಬೇಡ ಎಂದು ಹಲವರು ಅಂದುಕೊಂಡಿರಬಹುದು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಕ್ಕಿಲ್ಲ ಎಂದಿದ್ದಾರೆ.
ಮುಂದುವರಿದು, ನಮ್ಮ ತಮಿಳುನಾಡಿನಲ್ಲಿ ಬೇರೆ ಯಾರಾದರು ಪದವಿ ಕೊಡಬಹುದಲ್ವಾ? ಅದಕ್ಕೆ ಅರ್ಹರಾದ ಅನೇಕ ಜನರಿದ್ದಾರೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೇರಿದಂತೆ ಹಲವರು ನಮ್ಮ ನಾಡಿನಲ್ಲಿ ಇದ್ದಾರೆ. ಅವರು ಕೊಡಬಹುದಲ್ವಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ತಮಿಳು, ತಮಿಳುನಾಡಿಗೆ ಏನು ಮಾಡಿದ್ದಾರೆ. ಅವರು ತಮಿಳು ವಿರೋಧಿ. ಈ ಕಾರಣಕ್ಕೆ ಅವರಿಂದ ಪದವಿ ಪಡೆಯಬಾರದು ಎಂದು ನಿರ್ಧರಿಸಿದೆ ಎಂದಿದ್ದಾರೆ.
ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ


