Homeಅಂಕಣಗಳುಇಲ್ಲಿ ಶವಗಳನ್ನು ಸೀಳಿ ನೋಡುವವರು ವೈದ್ಯರಲ್ಲ, ದಲಿತ ಮಹಿಳೆ: ಮಲ ಹೊರುವ ಪದ್ಧತಿಗೂ ಮೀರಿದ ಜಾತಿ...

ಇಲ್ಲಿ ಶವಗಳನ್ನು ಸೀಳಿ ನೋಡುವವರು ವೈದ್ಯರಲ್ಲ, ದಲಿತ ಮಹಿಳೆ: ಮಲ ಹೊರುವ ಪದ್ಧತಿಗೂ ಮೀರಿದ ಜಾತಿ ತಾರತಮ್ಯದ ಭಯಾನಕ ಮುಖ

- Advertisement -
- Advertisement -

ಛತ್ತೀಸ್‌ಗಢದ ನರಹರಪುರದ ಕಾಡುಗಳ ನಡುವೆ, ಒಂದು ಸಣ್ಣ ಸಿಮೆಂಟ್ ಕಟ್ಟಡವಿದೆ. ಅದರ ಗೋಡೆಯ ಮೇಲೆ ಕಪ್ಪು ಅಕ್ಷರಗಳಲ್ಲಿ “ನವೀನ್ ಶವ್ ಗೃಹ” ಎಂದು ಬರೆಯಲಾಗಿದೆ. ಅಂದರೆ “ಹೊಸ ಶವಗಳ ಮನೆ”. ಕಳೆದ 20 ವರ್ಷಗಳಲ್ಲಿ ಇಲ್ಲಿ 1,200 ಕ್ಕೂ ಹೆಚ್ಚು ಶವಪರೀಕ್ಷೆಗಳನ್ನು ನಡೆಸಲಾಗಿದೆ. ಈ ಶವಗಳನ್ನು ಸೀಳಿ ನೋಡುವ ವ್ಯಕ್ತಿ ವೈದ್ಯರಲ್ಲ, ಬದಲಿಗೆ ಒಬ್ಬ ದಲಿತ ಮಹಿಳೆಯಾದ ಸಂತೋಷಿ ದುರ್ಗಾ, ಒಬ್ಬ ಸ್ವಚ್ಛತಾ ಕಾರ್ಮಿಕಳು. ಆಕೆಯ ವಿದ್ಯಾರ್ಹತೆ ಎಂಬಿಬಿಎಸ್ ಅಲ್ಲ, ಆಕೆಯ ಜಾತಿ. ಇದು ಭಾರತದ ಆಧುನಿಕ ಸಮಾಜದಲ್ಲಿ ಇನ್ನೂ ಬೇರೂರಿರುವ ಅಸಮಾನತೆ, ತಾರತಮ್ಯ ಮತ್ತು ಅಮಾನವೀಯತೆಯ ಕಥೆ.

ಛತ್ತೀಸ್‌ಗಡದ ನರಹರಪುರದಿಂದ ಗುರುಗ್ರಾಮ, ಧಾರವಾಡದಿಂದ ದೆಹಲಿಯವರೆಗೆ ಸಾವಿರಾರು ದಲಿತ ಸ್ವಚ್ಛತಾ ಕಾರ್ಮಿಕರು ಶವಪರೀಕ್ಷೆ ಮಾಡಲು ಒತ್ತಾಯಿಸಲ್ಪಡುತ್ತಿದ್ದಾರೆ. ವೈದ್ಯಕೀಯ ವಲಯದಲ್ಲಿ ಅವರನ್ನು “ಕಟರ್ಸ್” ಎಂದು ಕರೆಯಲಾಗುತ್ತದೆ. ಅವರಿಗೆ ಯಾವುದೇ ಔಪಚಾರಿಕ ತರಬೇತಿ, ರಕ್ಷಣಾತ್ಮಕ ಉಪಕರಣಗಳು, ಮಾನ್ಯತೆ, ಅಥವಾ ಹೆಚ್ಚುವರಿ ಪರಿಹಾರ ಸಿಗುವುದಿಲ್ಲ. ಶವಪರೀಕ್ಷೆ ಮಾಡಲು ಎಂಬಿಬಿಎಸ್ ಪದವಿ ಅಗತ್ಯವಿದೆ ಎಂದು ಸರ್ಕಾರಿ ನಿಯಮಗಳು ಹೇಳಿದರೂ, ಅನೇಕ ವೈದ್ಯರು ಕೊಳೆತ ಶವಗಳ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಅವರು ದೂರದಿಂದ ಮೇಲ್ವಿಚಾರಣೆ ಮಾಡಬಹುದು, ಆದರೆ ಶವವನ್ನು ಕತ್ತರಿಸುವ ಕೆಲಸವನ್ನು ಸ್ವಚ್ಛತಾ ಕಾರ್ಮಿಕರಿಗೆ ಬಿಡುತ್ತಾರೆ. ಈ ಕಾರ್ಮಿಕರು ಯಾವಾಗಲೂ ದಲಿತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.

ಈ ಕೆಲಸವನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲಾಗುತ್ತದೆ. ಇದು ಅಪಾಯಕಾರಿ ವೈದ್ಯಕೀಯ ಕೆಲಸವನ್ನು ಆನುವಂಶಿಕ ಜಾತಿ ಆಧಾರಿತ ಕರ್ತವ್ಯವಾಗಿ ಪರಿವರ್ತಿಸುತ್ತದೆ. ಇಂದಿಗೂ, ಸಮಾಜದಲ್ಲಿ ಕೆಲವು ಕೆಲಸಗಳನ್ನು ಕೀಳಾಗಿ ಕಾಣಲಾಗುತ್ತದೆ. “ಈ ಅಭ್ಯಾಸವು ಮಲ ಹೊರುವ ಪದ್ಧತಿಗಿಂತಲೂ ಕೆಟ್ಟದಾಗಿದೆ” ಎಂದು ಸಫಾಯಿ ಕರ್ಮಚಾರಿ ಆಂದೋಲನದ ಸಂಚಾಲಕರಾದ ಬೆಜವಾಡ ವಿಲ್ಸನ್ ಹೇಳುತ್ತಾರೆ. ಸ್ವಚ್ಛತಾ ಕಾರ್ಮಿಕರು ಅಪಾಯಕಾರಿ ಮತ್ತು ಮಾನಸಿಕ ಆಘಾತ ತರುವ ಕೆಲಸವನ್ನು ತಮ್ಮ ಒಪ್ಪಿಗೆ ಇಲ್ಲದೆ ಮಾಡುತ್ತಿದ್ದಾರೆ. ಅವರು ತಾತ್ಕಾಲಿಕ ಗುತ್ತಿಗೆ ಕೆಲಸಗಾರರಾಗಿರುವುದರಿಂದ, ವಾರದ ಏಳೂ ದಿನ ಕೆಲಸ ಮಾಡುತ್ತಾರೆ. ಶವಪರೀಕ್ಷೆ ಮಾಡಿಸಿಕೊಳ್ಳುವವರ ಕುಟುಂಬದಿಂದ ಸಿಗುವ “ಟಿಪ್ಸ್” ಅಥವಾ “ಕಾಣಿಕೆ” ಯಿಂದ ಅವರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾಗಿದೆ.

ನರಹರಪುರದ ದುರ್ಗಾ ಅವರಿಗೆ ಈ ಕೆಲಸ ಹೊಸದೇನಲ್ಲ. ತಮ್ಮ ತಂದೆಯಿಂದ ಈ ಕೆಲಸವನ್ನು ಕಲಿತವರು. ಅವರ ತಂದೆ ಈ ಕೆಲಸದ ಒತ್ತಡವನ್ನು ನಿಭಾಯಿಸಲು ಮದ್ಯವ್ಯಸನಿಯಾಗಿದ್ದರು. “ನನ್ನ ತಂದೆ ಮೊದಲು ಇಲ್ಲಿ ಶವಪರೀಕ್ಷೆ ಮಾಡುತ್ತಿದ್ದರು. ಆದರೆ ಅವರು ಕುಡಿದು ಕೆಲಸ ಮಾಡುತ್ತಿದ್ದರು. ನಾನು ಈ ಕೆಲಸವನ್ನು ಕುಡಿಯದೇ ಮಾಡಬಹುದೆಂದು ಅವರಿಗೆ ಸಾಬೀತುಪಡಿಸಲು ಬಯಸಿದ್ದೆ. ಅವರ ಜೊತೆ ನಿಂತು ಈ ಕೆಲಸ ಕಲಿತೆ” ಎಂದು ದುರ್ಗಾ ಹೇಳುತ್ತಾರೆ.

ಜಾತಿ ಮತ್ತು ಅಸಹಾಯಕತೆಯ ನಡುವೆ ಸಿಲುಕಿದ ಕೆಲಸಗಾರರು

ದುರ್ಗಾ ಅವರು ಬಳಸುವ ಸಾಧನಗಳು ಕೇವಲ ಒಂದು ಸುತ್ತಿಗೆ ಮತ್ತು ಕೆಲವು ಬ್ಲೇಡ್‌ಗಳು. ಒಂದು ಕಪ್ಪು ಬ್ಯಾಗ್‌ನಲ್ಲಿ ಒಂದು  ಮಾಸ್ಕ್, ಮತ್ತು ಗ್ಲೌಸ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಮೂಳೆ ಗರಗಸ, ಪಕ್ಕೆಲುಬು ಕತ್ತರಿಸುವ ಉಪಕರಣ ಅಥವಾ ವಿಶೇಷ ಶವಪರೀಕ್ಷೆ ಚಾಕುಗಳ ಬಗ್ಗೆ ಗೊತ್ತೇ ಇಲ್ಲ. ಇವರ ಕಿಟ್ ಅನ್ನು ಅಪಾಯಕಾರಿ ಎಂದು ಬರೆಯಲಾಗಿರುತ್ತದೆ. ಮುಂದಿನ ಪರೀಕ್ಷೆಗೆ ಅಗತ್ಯವಿದ್ದರೆ, ಅವರು ಶವದ ಭಾಗಗಳನ್ನು ಒಂದು ಸಾಮಾನ್ಯ ಪ್ಲಾಸ್ಟಿಕ್ ಡಬ್ಬಿಯಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ. ಈ ಡಬ್ಬಿಯನ್ನು ತೊಳೆದು ಮತ್ತೆ ಬಳಸುತ್ತಾರೆ.

ವೈದ್ಯರು ಮತ್ತು ಪೊಲೀಸರು ಕೊಳೆತ ದೇಹ ಅಥವಾ ಕೊಲೆ, ಆತ್ಮಹತ್ಯೆ ಪ್ರಕರಣಗಳ ಶವಪರೀಕ್ಷೆಗಾಗಿ ದುರ್ಗಾ ಅವರನ್ನು ಕರೆಯುತ್ತಾರೆ. ದೇಹಗಳು ಹುಳುಗಳಿಂದ ತುಂಬಿರಬಹುದು, ಊದಿಕೊಂಡಿರಬಹುದು ಅಥವಾ ಗುರುತಿಸಲಾಗದಷ್ಟು ವಿರೂಪಗೊಂಡಿರಬಹುದು. “ವೈದ್ಯರು ಎಂದಿಗೂ ದೇಹವನ್ನು ಮುಟ್ಟುವುದಿಲ್ಲ, ಅವರು ಕೇವಲ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಾರೆ. ನಾನು ಈಗ ಸಂಪೂರ್ಣ ಅನುಭವಿಯಾಗಿದ್ದೇನೆ. ದೇಹವನ್ನು ಹೇಗೆ ಸೀಳಬೇಕು ಮತ್ತು ತಲೆಬುರುಡೆಯನ್ನು ಹೇಗೆ ತೆರೆಯಬೇಕು ಎಂದು ನನಗೆ ತಿಳಿದಿದೆ. ಗಾಯಗಳು ಎಲ್ಲಿವೆ, ಮೂಳೆಗಳು ಹೇಗೆ ಮುರಿದಿವೆ ಎಂದು ನಾನು ವೈದ್ಯರಿಗೆ ತೋರಿಸುತ್ತೇನೆ” ಎಂದು ದುರ್ಗಾ ಹೇಳುತ್ತಾರೆ.

“ಶವಪರೀಕ್ಷೆ ನಡೆಸುವುದು ಮತ್ತು ದೇಹವನ್ನು ಕತ್ತರಿಸುವುದು ಬೇರೆ ಬೇರೆ. ಕತ್ತರಿಸುವ ಕಾರ್ಯಕ್ಕೆ ಸಹಾಯ ಹಸ್ತ ಬೇಕು” ಎಂದು ಹೇಳುತ್ತಾರೆ. ಆದರೆ, ದಲಿತ ಸ್ವಚ್ಛತಾ ಕಾರ್ಮಿಕರು ಏಕೆ ಈ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಭಾರತದಲ್ಲಿ “ಅರ್ಹ” ಶವಾಗಾರ ಸಹಾಯಕರು ಇಲ್ಲ ಎಂದು ಅವರು ಹೇಳುತ್ತಾರೆ. ಮಣಿಪಾಲ್ ವಿಶ್ವವಿದ್ಯಾಲಯ ಮತ್ತು ಜಿಪ್ಮರ್‌ನಂತಹ ಕೆಲವು ವಿಶ್ವವಿದ್ಯಾಲಯಗಳು ಶವಾಗಾರ ತಂತ್ರಜ್ಞ ಪ್ರಮಾಣಪತ್ರ ಕೋರ್ಸ್‌ಗಳನ್ನು ಆರಂಭಿಸಿವೆ, ಆದರೆ ಅವು ಅಪರೂಪ. ಇದರಿಂದಾಗಿ, ತರಬೇತಿ ಪಡೆದ ಕಾರ್ಮಿಕರು ಅಸ್ತಿತ್ವದಲ್ಲಿಲ್ಲ ಎಂದು ಗುಜರಾತ್‌ನ ಒಬ್ಬ ಹಿರಿಯ ವಿಧಿವಿಜ್ಞಾನ ರೋಗಶಾಸ್ತ್ರಜ್ಞರು ಹೇಳುತ್ತಾರೆ.

“ಭಾರತದಲ್ಲಿ ಶವಪರೀಕ್ಷೆ ಸಹಾಯಕರಿಗೆ ಯಾವುದೇ ಪ್ರಮಾಣೀಕರಣವಿಲ್ಲ. ನಾಲ್ಕನೇ ದರ್ಜೆಯ ನೌಕರರು ಶವಪರೀಕ್ಷೆ ನಡೆಸುತ್ತಾರೆ. ನಾವು ಅವರಿಗೆ ಅಂಗಗಳನ್ನು ತೆಗೆಯಲು, ದೇಹವನ್ನು ಮೇಜಿನ ಮೇಲೆ ಇಡಲು, ರಾಸಾಯನಿಕ ವಿಶ್ಲೇಷಣೆಗೆ ಸಹಾಯ ಮಾಡಲು ತರಬೇತಿ ನೀಡುತ್ತೇವೆ. ಆದರ್ಶವಾಗಿ, ಶವಪರೀಕ್ಷೆ ವೈದ್ಯರಿಂದಲೇ ಆಗಬೇಕು” ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ವೈದ್ಯರು ಈ ಕೆಲಸವನ್ನು ಕೀಳು ಎಂದು ಪರಿಗಣಿಸುವುದರಿಂದ ದಲಿತರಿಗೆ ಈ ಕೆಲಸವನ್ನು ವಹಿಸಲಾಗುತ್ತದೆ. ಇದು “ಅಸ್ಪೃಶ್ಯ” ಎಂದು ಕರೆಯಲ್ಪಡುವವರಿಗೆ ಮಾತ್ರ ಮೀಸಲಾಗಿರುವ ಕೆಲಸವಾಗಿದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಫೊರೆನ್ಸಿಕ್ ಮೆಡಿಸಿನ್‌ನ ಪ್ರಧಾನ ಕಾರ್ಯದರ್ಶಿಯಾದ ಡಾ. ರಾಜೇಶ್ ಡೆರೆ ತಿಳಿಸುತ್ತಾರೆ.

ಮಾನಸಿಕ ಮತ್ತು ದೈಹಿಕ ಆಘಾತ

ಗುರುಗ್ರಾಮದ 40 ವರ್ಷದ ಶವಾಗಾರ ಕಾರ್ಮಿಕನಿಗೆ ಪ್ರತಿದಿನವೂ ಆಘಾತಕಾರಿ ಅನುಭವ. ಶವಗಳನ್ನು ಸೀಳುವಾಗ ರಕ್ತ ಕಣ್ಣಿಗೆ ಸಿಡಿಯುತ್ತದೆ. ಕೆಲವೊಮ್ಮೆ ಕೊಳೆತ ಶವಗಳ ಒಳಭಾಗವನ್ನು ನೋಡಿದಾಗ ತೀರಾ ಬಳಲಿಕೆ ಉಂಟಾಗುತ್ತದೆ. “ನಾನು ಕತ್ತರಿಸಿದ ಜನರು ನನ್ನ ಕನಸಿನಲ್ಲಿ ಬರುತ್ತಾರೆ” ಎಂದು ಅವರು ಹೇಳುತ್ತಾರೆ. ಅವರಿಗೆ ಸರಿಯಾದ ರಕ್ಷಣಾತ್ಮಕ ಉಪಕರಣಗಳು ಇರುವುದಿಲ್ಲ. ಸೋಂಕು ನಿವಾರಕ ರಾಸಾಯನಿಕಗಳಿಂದ ಕೈಗಳು ಸುಡುತ್ತವೆ. ಕೊಳೆತ ಶವಗಳ ವಾಸನೆಯಿಂದ ವಾಂತಿಯಾಗುತ್ತದೆ ಎಂದು ಈ ಕಾರ್ಮಿಕ ಹೇಳುತ್ತಾನೆ.

ಈ ಕೆಲಸದ ಹೊರತಾಗಿ, ಸಮಾಜದಲ್ಲಿಯೂ ಅವರಿಗೆ ಗೌರವ ಸಿಗುವುದಿಲ್ಲ. ನೆರೆಹೊರೆಯವರು ಅವರನ್ನು “ಜಲ್ಲಾದ್” (ಗಲ್ಲು ಹಾಕುವವನು) ಎಂದು ಕರೆಯುತ್ತಾರೆ. ಅವರ ಮಕ್ಕಳು ಬೇರೆ ಕೆಲಸ ಹುಡುಕಲು ಹೇಳುತ್ತಾರೆ. ಈ ನೋವನ್ನು ಮರೆಯಲು ಅವರು ಪ್ರತಿದಿನ ಮದ್ಯಪಾನ ಮಾಡುತ್ತಾರೆ. ದುರ್ಗಾ ಅವರ ತಂದೆ ಕೂಡ ಮದ್ಯಪಾನದಿಂದಲೇ ಸಾವನ್ನಪ್ಪಿದರು. ಭೀಮ್ ಬಸ್ಫೋರೆ ಅವರ ತಂದೆಯ ಬದುಕು ಕೂಡ ಇದೇ ಕಾರಣಕ್ಕೆ ಕಡಿಮೆ ಅವಧಿಯ ಜೀವನ ಪೂರೈಸಿ ಅಂತ್ಯಗೊಂಡಿತ್ತು.  “ಶವಾಗಾರಗಳಲ್ಲಿ ಕೆಲಸ ಮಾಡುವ ಸ್ವಚ್ಛತಾ ಕಾರ್ಮಿಕರು ಸದ್ದುಗದ್ದಲವಿಲ್ಲದೆ ಸಾಯುತ್ತಿದ್ದಾರೆ. ಅನೇಕ ಪ್ರಕರಣಗಳಲ್ಲಿ, ಅವರಿಗೆ 35 ವರ್ಷ ವಯಸ್ಸಾಗುವಷ್ಟರಲ್ಲಿ ಅವರು ರಕ್ತ ವಾಂತಿ ಮಾಡಿಕೊಳ್ಳಲು ಶುರುಮಾಡುತ್ತಾರೆ, ಕ್ಷಯರೋಗ ಅಥವಾ ಯಕೃತ್ತಿನ ವೈಫಲ್ಯಕ್ಕೆ ಒಳಗಾಗುತ್ತಾರೆ.” ಎಂದು ಟಿಸ್ಸ್ ಗುವಾಹಟಿಯ ಪ್ರೊಫೆಸರ್ ಪ್ರದೀಪ್ ರಾಮವತ್ ಮಾಹಿತಿ ನೀಡುತ್ತಾರೆ.

ಈ ಕೆಲಸ ಮಾಡುವ ಮಹಿಳೆಯರು ಇನ್ನೂ ಹೆಚ್ಚು ಏಕಾಂಗಿತನವನ್ನು ಎದುರಿಸುತ್ತಾರೆ. ಅವರ ಅನುಭವಗಳು ದಾಖಲಾಗಿಲ್ಲ. ಅವರನ್ನು “ಮಾಟಗಾತಿ” ಎಂದು ಗುರಿಯಾಗಿರಿಸಲಾಗುತ್ತದೆ. ಈ ಬಗ್ಗೆ ಯಾವುದೇ ಅಧ್ಯಯನಗಳು ಅಥವಾ ನೀತಿಗಳು ಇಲ್ಲ. ದುರ್ಗಾ ತಮ್ಮ ಕೆಲಸದ ಬಗ್ಗೆ ಜನರಲ್ಲಿ ಹೆಮ್ಮೆ ಬರಬೇಕು ಎಂದು ಬಯಸುತ್ತಾರೆ. ಆದರೆ ಇಂದಿಗೂ ಜಾತಿ ತಾರತಮ್ಯ ವ್ಯಾಪಕವಾಗಿದೆ.

ಕರ್ನಾಟಕದಲ್ಲಿ ಒಂದು ಭರವಸೆಯ ಬೆಳಕು?

ಕರ್ನಾಟಕದ ಧಾರವಾಡದ ನಾಗರಿಕ ಆಸ್ಪತ್ರೆಯಲ್ಲಿ, ಒಬ್ಬ ಯುವ ಗ್ರೂಪ್ ಡಿ ಶವಾಗಾರ ಸಹಾಯಕ ಶವದ ಮೇಜಿನ ಬಳಿ ನಿಂತು ವೈದ್ಯರಿಗೆ ವಿವರಗಳನ್ನು ನೀಡುತ್ತಿದ್ದ. “ಕುತ್ತಿಗೆಯ ಮೇಲಿನ ಗುರುತು 27 ಸೆಂಟಿಮೀಟರ್ ಇದೆ, ರಿಗರ್ ಮಾರ್ಟಿಸ್ ಶುರುವಾಗಿದೆ. ಕುತ್ತಿಗೆಯ ಹಿಂಭಾಗದಲ್ಲಿ ಯಾವುದೇ ಹಗ್ಗದ ಗುರುತುಗಳಿಲ್ಲ” ಎಂದು ಹೇಳುತ್ತಾ ಶವವನ್ನು ಸೀಳುತ್ತಿದ್ದ. ಆತ ಬಿಎಸ್ಸಿ ಪದವಿ ಪಡೆದಿದ್ದಾನೆ ಮತ್ತು ಒಂದು ತಿಂಗಳ ತರಬೇತಿಯ ನಂತರ ಈ ಕೆಲಸದಲ್ಲಿ ಪರಿಣತಿ ಪಡೆದಿದ್ದೆ ಎಂದು ಹೇಳುತ್ತಾನೆ.

ಈ ಇಬ್ಬರು ಕೆಲಸಗಾರರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂದು ಹೇಳುತ್ತಾರೆ. ಈ ಸಮುದಾಯದಲ್ಲಿ ಜಾತಿ ಭೇದವಿಲ್ಲ ಎಂದು ಹೇಳಲಾಗಿದೆಯಾದರೂ, ಇನ್ನೂ ಕೆಲವು ತಾರತಮ್ಯಗಳಿವೆ ಎಂದು ಪ್ರೊ. ರಾಮವತ್ ಹೇಳುತ್ತಾರೆ. ಈ ಯುವಕನಿಗೆ ಗ್ರೂಪ್ ಡಿ ಯಲ್ಲಿ ಖಾಯಂ ಉದ್ಯೋಗವಿದೆ. ಇವರಿಗೆ ಸರಿಯಾದ ಉಪಕರಣಗಳಿಲ್ಲದಿದ್ದರೂ, ಇವರು ವಾರದ ಏಳೂ ದಿನ ಕೆಲಸ ಮಾಡುತ್ತಾರೆ.

ರಾಮವತ್ ಅವರು ಕರ್ನಾಟಕವನ್ನು “ನೂರು ವರ್ಷಗಳಷ್ಟು ಮುಂದಿದೆ” ಎಂದು ಹೇಳುತ್ತಾರೆ. ಕಳೆದ ವರ್ಷ, ಬೆಂಗಳೂರಿನ 24,005 ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದು ಅವರ ಹಕ್ಕುಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಆದರೆ ಭಾರತದ ಇತರ ರಾಜ್ಯಗಳಲ್ಲಿ ಬಹುತೇಕ ಸ್ವಚ್ಛತಾ ಕಾರ್ಮಿಕರು ಗುತ್ತಿಗೆ ಕೆಲಸದಲ್ಲಿ ಸಿಲುಕಿಕೊಂಡಿದ್ದಾರೆ.

ಛತ್ತೀಸ್‌ಗಢದ ಕಂಕೇರ್‌ನಲ್ಲಿ ರಾಕೇಶ್ ರಾಜಕ್ ಅವರು 2010ರಿಂದ ಶವಪರೀಕ್ಷೆ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳಿಗೆ ಕೇವಲ 10,000 ರೂಪಾಯಿ ಸಂಬಳ. ಈಗ 47 ವರ್ಷ ವಯಸ್ಸಿನ ಅವರಿಗೆ, ಉದ್ಯೋಗವನ್ನು ಖಾಯಂಗೊಳಿಸಲು ಗರಿಷ್ಠ ವಯಸ್ಸು 45 ಆಗಿರುವುದರಿಂದ ಅದು ಸಾಧ್ಯವಿಲ್ಲ. ದುರ್ಗಾ ಕೂಡ ಒಂದು ತಿಂಗಳಿಗೆ ಕೇವಲ 8,000 ರೂಪಾಯಿ ಗಳಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸಲು ಬಯಸುತ್ತಾರೆ. “ನನ್ನ ಮಕ್ಕಳು ನಾನು ಮಾಡುವ ಕೆಲಸವನ್ನು ಎಂದಿಗೂ ಮಾಡಲು ಬಯಸುವುದಿಲ್ಲ, ನಾನು ಅವರಿಗೆ ಶಿಕ್ಷಣ ಕೊಡಿಸಲು ಬಯಸುತ್ತೇನೆ. ಅದಕ್ಕಾಗಿ ನನಗೆ ಒಂದು ಖಾಯಂ ಕೆಲಸ ಸಿಕ್ಕರೆ ಸಾಕು” ಎಂದು ಹೇಳುತ್ತಾರೆ.

ದಲಿತ ಸ್ವಚ್ಛತಾ ಕಾರ್ಮಿಕರಿಂದ ಶವಪರೀಕ್ಷೆ ಮಾಡಿಸುವ ಈ ಅಮಾನವೀಯ ಪದ್ಧತಿ ದಶಕಗಳಿಂದಲೂ ಮರೆಮಾಚಲ್ಪಟ್ಟಿದೆ. ಮಲ ಹೊರುವ ಪದ್ಧತಿ ವಿರುದ್ಧ ಪ್ರತಿಭಟನೆಗಳು ನಡೆದರೂ, ಈ ಕೆಲಸದ ವಿರುದ್ಧ ಯಾವುದೇ ಧ್ವನಿ ಎತ್ತಿಲ್ಲ. ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಈಗ ಅನಿವಾರ್ಯವಾಗಿದೆ.

ಆಧಾರ: ಶುಭಾಂಗಿ ಮಿಶ್ರಾ, ದಿ ಪ್ರಿಂಟ್

ಕನ್ನಡಕ್ಕೆ: ಪೃಥ್ವಿ ಕಣಸೋಗಿ

‘ಹರಿಜನ’ ಪದದ ನಿಷೇಧ: ಒಡಿಶಾ ಸರ್ಕಾರದ ಮಹತ್ವದ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...