ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಮತ್ತು ಬಂಧನದಲ್ಲಿರುವ ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸಚಿವರನ್ನು ಪದಚ್ಯುತಗೊಳಿಸಲು ಅನುವು ಮಾಡಿಕೊಡುವ ಮೂರು ಮಸೂದೆಗಳನ್ನು ಬುಧವಾರ (ಆ.20) ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025; ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025; ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ (ತಿದ್ದುಪಡಿ) ಮಸೂದೆ 2025 ಈ ಮೂರು ಮಸೂದೆಗಳಾಗಿವೆ.
ಈ ಮೂರು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಸ್ತಾವನೆ ಮಂಡಿಸುವ ಸಾಧ್ಯತೆ ಇದೆ.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025ರ ಉದ್ದೇಶ ಮತ್ತು ಕಾರಣಗಳ ಹೇಳಿಕೆಯ ಪ್ರಕಾರ, ಗಂಭೀರ ಕ್ರಿಮಿನಲ್ ಆರೋಪಗಳ ಕಾರಣದಿಂದಾಗಿ ಬಂಧಿಸಲ್ಪಟ್ಟ ಮತ್ತು ಬಂಧನದಲ್ಲಿರುವ ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸಲು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, (1963ರ ಸೆಕ್ಷನ್ 20) ಅಡಿಯಲ್ಲಿ ಯಾವುದೇ ಅವಕಾಶವಿಲ್ಲ.
ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸಲು ಕಾನೂನು ಚೌಕಟ್ಟನ್ನು ಒದಗಿಸಲು 1963ರ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಕಾಯ್ದೆಯ ಸೆಕ್ಷನ್ 45ಕ್ಕೆ ತಿದ್ದುಪಡಿ ತರುವ ಅವಶ್ಯಕತೆಯಿದೆ.
ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025ರ ಉದ್ದೇಶಗಳು, ಗಂಭೀರ ಕ್ರಿಮಿನಲ್ ಆರೋಪಗಳ ಕಾರಣದಿಂದಾಗಿ ಬಂಧಿಸಲ್ಪಟ್ಟ ಮತ್ತು ಬಂಧನದಲ್ಲಿರಿಸಲ್ಪಟ್ಟ ಸಚಿವರನ್ನು ತೆಗೆದುಹಾಕಲು ಸಂವಿಧಾನದ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೇಳುತ್ತದೆ.
ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಪ್ರಧಾನಿ ಅಥವಾ ಕೇಂದ್ರ ಸಚಿವ ಸಂಪುಟದ ಸಚಿವರನ್ನು, ಮುಖ್ಯಮಂತ್ರಿ ಅಥವಾ ರಾಜ್ಯ ಸಚಿವ ಸಂಪುಟದ ಸಚಿವರನ್ನು ಹಾಗೂ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸಚಿವರನ್ನು ಪದಚ್ಯುತಗೊಳಿಸಲು ಕಾನೂನು ಚೌಕಟ್ಟನ್ನು ಒದಗಿಸಲು ಸಂವಿಧಾನದ 75, 164 ಮತ್ತು 239ಎಎ ವಿಧಿಗಳನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ.
ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ (ತಿದ್ದುಪಡಿ) ಮಸೂದೆ, 2025ರ ಉದ್ದೇಶಗಳು, ಗಂಭೀರ ಕ್ರಿಮಿನಲ್ ಆರೋಪಗಳ ಕಾರಣದಿಂದಾಗಿ ಬಂಧಿಸಲ್ಪಟ್ಟ ಮತ್ತು ಬಂಧನದಲ್ಲಿರುವ ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸಲು ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ ಕಾಯ್ದೆ, 2019 (2019 ರ 34) ಅಡಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೇಳುತ್ತದೆ.
ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸಲು ಕಾನೂನು ಚೌಕಟ್ಟನ್ನು ಒದಗಿಸಲು ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ ಕಾಯ್ದೆ, 2019 ರ ಸೆಕ್ಷನ್ 54 ಅನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ.
ಪ್ರತಿಪಕ್ಷ ನಾಯಕರಿಂದ ವಿರೋಧ
ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿರುವ ಮಸೂದೆಗಳನ್ನು ಪ್ರತಿಪಕ್ಷಗಳ ನಾಯಕರು ವಿರೋಧಿಸಿದ್ದಾರೆ. ಇದು ಸಂವಿಧಾನ ಬದಲಾಯಿಸುವ ಯತ್ನ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, “ವಿರೋಧ ಪಕ್ಷದ ಭವಿಷ್ಯವಾಣಿಗಳು ನಿಜವಾಗಿದೆ. ಕೇವಲ 240 ಸಂಸದರನ್ನು ಹೊಂದಿರುವ ಬಿಜೆಪಿ ಸಂವಿಧಾನ ಬದಲಾಯಿಸುತ್ತಿದೆ. ಹೊಸ ಮಸೂದೆ ಒಕ್ಕೂಟ ವ್ಯವಸ್ಥೆ ಮತ್ತು ನ್ಯಾಯಾಂಗ ಎರಡನ್ನೂ ಮೀರಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಬಳಸಿಕೊಂಡು ಚುನಾಯಿತ ವಿರೋಧ ಪಕ್ಷದ ಮುಖ್ಯಮಂತ್ರಿಯನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಬಹುದು ಮತ್ತು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗದೆ ಅವರನ್ನು ವಜಾಗೊಳಿಸಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Opposition predictions come true- Constitution being changed by BJP with only 240 MPs. New bill bypasses both federal structure & judiciary – Union govt can use ED CBI to arrest elected opposition CM on fake charges & sack them WITHOUT proven guilty by a court.
— Mahua Moitra (@MahuaMoitra) August 20, 2025
“ಮತಗಳ್ಳತನ ಬಹಿರಂಗವಾದಾಗ ಮೋದಿ-ಶಾ ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. ಸಿಬಿಐ-ಇಡಿ ಬಿಜೆಪಿಗಾಗಿ ರಾಜ್ಯ ಸರ್ಕಾರಗಳನ್ನು ನೇರವಾಗಿ ಉರುಳಿಸಲು ಅನುವು ಮಾಡಿಕೊಡುವ ಹೊಸ ಮಸೂದೆಯನ್ನು ಇಂದು ಮಂಡಿಸಲಾಗುತ್ತಿದೆ. ನ್ಯಾಯಾಲಯವು ಶಿಕ್ಷೆ ವಿಧಿಸಿದಾಗ ಮಾತ್ರ ಒಬ್ಬರು ವ್ಯಕ್ತಿ ಅಪರಾಧಿಯಾಗುತ್ತಾರೆ. ಅಲ್ಲಿಯವರೆಗೆ ಅವರು ‘ಆರೋಪಿ’ ಆಗಿರುತ್ತಾರೆ. ಕೇವಲ ಆರೋಪದ ಮೇಲೆ ನೀವು ಮುಖ್ಯಮಂತ್ರಿ/ಸಚಿವರನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ. ಮೋದಿ-ಶಾ ಅವರ ಕೇಂದ್ರೀಯ ಸಂಸ್ಥೆಗಳ ಬಂಧನವು ಅಪರಾಧದ ಸಾಬೀತಲ್ಲ” ಎಂದು ಮತ್ತೋರ್ವ ಟಿಎಂಸಿ ಸಂಸದ ಸಾಕೇತ್ ಗೋಖಲೆ ಬರೆದುಕೊಂಡಿದ್ಧಾರೆ.
ಮುಂದುವರಿದು, “ಕುತೂಹಲಕಾರಿ ಸಂಗತಿಯೆಂದರೆ ಕಳೆದ 11 ವರ್ಷಗಳಲ್ಲಿ ಬಿಜೆಪಿಯ ಯಾವುದೇ ಕೇಂದ್ರ/ರಾಜ್ಯ ಸಚಿವರ ಬಂಧನವಾಗಿಲ್ಲ. ಎಲ್ಲಾ ಬಂಧನಗಳು ವಿರೋಧ ಪಕ್ಷದ ನಾಯಕರದ್ದು ಮಾತ್ರ” ಎಂದು ಹೇಳಿದ್ದಾರೆ.
When vote-chori is exposed, Modi-Shah looking for new tricks. New Bill being brought today to allow CBI-ED to directly topple state govts for the BJP.
A person is a criminal ONLY when convicted by a court of law. Until then, they’re an “accused”. You can’t remove a CM/Minister…
— Saket Gokhale MP (@SaketGokhale) August 20, 2025
“ಗೃಹ ಸಚಿವ ಅಮಿತ್ ಶಾ ಅವರ ಮಸೂದೆಗಳು ರಾಹುಲ್ ಗಾಂಧಿಯವರ ಮತ ಅಧಿಕಾರ ಯಾತ್ರೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಮೊದಲು ಸಿಎಸ್‌ಡಿಎಸ್ – ಬಿಜೆಪಿ ಐಟಿ ಸೆಲ್ ನಾಟಕ ಮತ್ತು ಈಗ ಈ ಮಸೂದೆಗಳು. ಬಿಹಾರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ಪಷ್ಟ” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಬರೆದುಕೊಂಡಿದ್ದಾರೆ.
The bills of Home Minister Amit Shah are nothing but a desperate attempt to divert the attention of the public away from the blistering Vote Adhikar Yatra of Shri Rahul Gandhi.
First CSDS – BJP IT cell drama and now these bills.
Clearly the winds of change are blowing in…
— Gaurav Gogoi (@GauravGogoiAsm) August 19, 2025
“ಇದೊಂದು ವಿಕೃತ ಚಕ್ರವ್ಯೂಹವೇ ಸರಿ!. ಇಲ್ಲಿ ಬಂಧನಕ್ಕೆ ಸಂಬಂಧಪಟ್ಟ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿಲ್ಲ!. ವಿರೋಧ ಪಕ್ಷಗಳ ನಾಯಕರ ಬಂಧನಗಳು ಅತಿರೇಕವಾಗಿ ಹಾಗೂ ಅನಿಯಮಿತವಾಗಿ ನಡೆಯುತ್ತಿರುವಾಗ, ಹೊಸ ಪ್ರಸ್ತಾಪಿತ ಕಾನೂನು ಅನ್ವಯ, ಯಾರಾದರು ಮುಖ್ಯಮಂತ್ರಿ ಬಂಧಿತರಾದರೆ ಅವರನ್ನು ತಕ್ಷಣವೇ ಅಧಿಕಾರದಿಂದ ವಜಾಗೊಳಿಸಲಾಗುತ್ತದೆ.”
ವಿರೋಧ ಪಕ್ಷವನ್ನು ಅಸ್ಥಿರಗೊಳಿಸುವ ಅತ್ಯುತ್ತಮ ಮಾರ್ಗವೇಂದರೆ, ಪಕ್ಷಪಾತಿ ಕೇಂದ್ರ ಸಂಸ್ಥೆಗಳ ಸಹಾಯದಿಂದ ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸುವುದು. ಚುನಾವಣೆಗಳಲ್ಲಿ ಸೋಲಿಸಲು ಸಾಧ್ಯವಾಗದ ಕಾರಣ, ಇಂಥ ಏಕಪಕ್ಷೀಯ ಬಂಧನಗಳ ಮೂಲಕ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ. ಇದವರೆಗೆ ಆಡಳಿತ ಪಕ್ಷದ ಯಾವುದೇ ಮುಖ್ಯಮಂತ್ರಿಯನ್ನು ಟಚ್ ಮಾಡಿದ್ದಿಲ್ಲ” ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಅಭಿಷೇಕ್ ಮನು ಸಿಂಘ್ವಿ ಕಳವಳ ವ್ಯಕ್ತಪಡಿಸಿದ್ದಾರೆ.
Wht a vicious circle! No guildelines for arrest followed! Arrests of opposition leaders rampant and disproportionate. New proposed law removes incumbent #CM etc immly on arrest. Best way to destabilise opposition is to unleash biased central agencies to arrest oppo CMs and…
— Abhishek Singhvi (@DrAMSinghvi) August 19, 2025
ಪ್ರತಿಪಕ್ಷ ನಾಯಕ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಗಮನಿಸಿದರೆ, ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸುವಾಗ ಗದ್ದಲ ಉಂಟಾಗುವ ಸಾಧ್ಯತೆ ಇದೆ.
‘ದಿ ವೈರ್’ನ ಸಿದ್ಧಾರ್ಥ್ ವರದರಾಜನ್, ಕರಣ್ ಥಾಪರ್ ವಿರುದ್ಧ ದೇಶದ್ರೋಹ ಪ್ರಕರಣ: ಪತ್ರಕರ್ತರ ಸಂಘಗಳಿಂದ ಖಂಡನೆ


