ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ನ್ಯಾಯಾಲಯ ಶನಿವಾರ (ಆ.23) 10 ದಿನಗಳ ಅವಧಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿದೆ ಎಂದು ವರದಿಯಾಗಿದೆ.
ಸುದೀರ್ಘ ವಿಚಾರಣೆಯ ಬಳಿಕ ಶನಿವಾರ ಎಸ್‌ಐಟಿ ಅಧಿಕಾರಿಗಳು ದೂರುದಾರನನ್ನು ಬಂಧಿಸಿದ್ದರು. ಬಳಿಕ ಆತನನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ದೂರುದಾರನಿಗೆ ಸಾಕ್ಷ್ಯ ರಕ್ಷಣೆ ಕಾಯ್ದೆಯಡಿ ನ್ಯಾಯಾಲಯ ರಕ್ಷಣೆ ಒದಗಿಸಿದೆ. ಹಾಗಾಗಿ, ಆತನನ್ನು ಬಂಧಿಸಲು ಅಥವಾ ವಶಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸದನದಲ್ಲಿ ಹೇಳಿದ್ದರು. ಪ್ರಸ್ತುತ ದೂರುದಾರನಿಗೆ ನೀಡಿದ್ದ ರಕ್ಷಣೆ ರದ್ದಾಗಿದೆ. ಹಾಗಾಗಿ, ಎಸ್ಐಟಿ ಬಂಧಿಸಿದೆ ಎಂಬ ಮಾಹಿತಿ ದೊರೆತಿದೆ.
ಈವರೆಗೆ ಮಾಸ್ಕ್ ಧರಿಸಿಕೊಂಡಿದ್ದ ಸಾಕ್ಷಿ ದೂರುದಾರನ ಬಂಧನವಾಗುತ್ತಿದಂತೆಯೇ ಹೆಸರು, ಊರು, ವಿವರ ಸೇರಿದಂತೆ ಫೋಟೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ದೂರುದಾರ ಆಗಿದ್ದ ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ. ಆತನ ಹೆಸರು ಸಿ.ಎನ್ ಚಿನ್ನಯ್ಯ ಯಾನೆ ಚೆನ್ನ ಎಂಬ ಮಾಹಿತಿ ಸದ್ಯ ಹರಿದಾಡಿದೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನನ್ನು ಬಂಧಿಸಿದ ಎಸ್ಐಟಿ


