ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶನಿವಾರ (ಆ.23) ಅದರ ಕಚೇರಿಗಳಲ್ಲಿ ಶೋಧ ನಡೆಸಿದೆ ಎಂದು ವರದಿಯಾಗಿದೆ.
ಆರ್‌ಕಾಮ್, ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿ ಅವರ ಮನೆ ಸೇರಿದಂತೆ ಇತರ ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ ಎಂದು ವರದಿ ಹೇಳಿದೆ.
ವಂಚನೆ ಅಪಾಯ ನಿರ್ವಹಣೆ ಕುರಿತ ಆರ್‌ಬಿಐನ ಮಾಸ್ಟರ್ ನಿರ್ದೇಶನಗಳು ಮತ್ತು ವಂಚನೆಗಳ ವರ್ಗೀಕರಣ, ವರದಿ ಮತ್ತು ನಿರ್ವಹಣೆಯ ಕುರಿತ ಬ್ಯಾಂಕಿನ ಮಂಡಳಿ-ಅನುಮೋದಿತ ನೀತಿಗೆ ಅನುಗುಣವಾಗಿ ಜೂನ್ 13 ರಂದು ಈ (ಆರ್‌ಕಾಮ್) ಸಂಸ್ಥೆಗಳನ್ನು ವಂಚನೆ ಎಂದು ವರ್ಗೀಕರಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ತಿಂಗಳು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.
“ಜೂನ್ 24, 2025ರಂದು, ಬ್ಯಾಂಕ್ ‘ವಂಚನೆ ವರ್ಗೀಕರಣ’ವನ್ನು ಆರ್‌ಬಿಐಗೆ ವರದಿ ಮಾಡಿದೆ ಮತ್ತು ಸಿಬಿಐಗೆ ದೂರು ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಮುಂಬೈನಲ್ಲಿರುವ ಅಂಬಾನಿ ಅವರ ನಿವಾಸಕ್ಕೆ ಏಳರಿಂದ ಎಂಟು ಅಧಿಕಾರಿಗಳು ಶನಿವಾರ ಬೆಳಿಗ್ಗೆ ತೆರಳಿ ಶೋಧ ಕಾರ್ಯ ನಡೆಸಿರುವ ಬಗ್ಗೆ ವರದಿಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ನೀಡಿದ ದೂರು ಆಧರಿಸಿ ಅನಿಲ್ ಅಂಬಾನಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಇತರರ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲಾಗಿದೆ.


