ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ, ಹೆಚ್ಚಿನ ಸಂಖ್ಯೆಯ ಬಡವರು ಮತ್ತು ಅಂಚಿನಲ್ಲಿರುವ ಜನರು ‘ಮತದಾನದಿಂದ ವಂಚಿತರಾಗುವ’ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ನಾಗರಿಕರು ಒದಗಿಸಲು ಸಾಧ್ಯವಾಗದ ದಾಖಲೆಗಳನ್ನು ಕೇಳಿರುವ ಆಡಳಿತ ವ್ಯವಸ್ಥೆಯ ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು ಸೇನ್ ಪ್ರಶ್ನಿಸಿದ್ದಾರೆ.
ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ಆವರ್ತಕ ಪರಿಷ್ಕರಣೆಗಳು ಅಗತ್ಯ, ಆದರೆ ಇವು ಮೂಲಭೂತ ಹಕ್ಕುಗಳನ್ನು ಬಲಿಕೊಡಬಾರದು ಎಂದು ಅವರು ಹೇಳಿದ್ದಾರೆ.
“ಹೌದು, ಕಾಲಕಾಲಕ್ಕೆ ವಿವಿಧ ಕಾರ್ಯವಿಧಾನದ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ ಎಂಬುದು ನಿಜ. ಆದರೆ, ಬಡವರ ಹಕ್ಕುಗಳನ್ನು ತುಳಿದು ‘ಉತ್ತಮ ವ್ಯವಸ್ಥೆ’ಯನ್ನು ರಚಿಸಲು ಸಾಧ್ಯವಿಲ್ಲ” ಎಂದು ಸೇನ್ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ವಿಧಾನದ ಮಹತ್ವವನ್ನು ಒತ್ತಿ ಹೇಳಿದ ಸೇನ್, “ಅನೇಕ ಜನರು ಇನ್ನೂ ಸರಿಯಾದ ದಾಖಲೆಗಳನ್ನು ಹೊಂದಿಲ್ಲ. ಹೀಗಿರುವಾಗ ಇಂತಹ ಕಠಿಣ ಪರಿಷ್ಕರಣೆಗಳು ಚುನಾವಣಾ ಪ್ರಕ್ರಿಯೆಯಿಂದ ಆ ಜನರನ್ನು ಹೊರಗಿಡುತ್ತದೆ ಎಂದು ಸೇನ್ ತಿಳಿಸಿದ್ದಾರೆ.
“ಹಲವರ ಬಳಿ ದಾಖಲೆಗಳಿಲ್ಲ. ಹಲವರಿಗೆ ಮತ ಚಲಾಯಿಸಲು ಸಾಧ್ಯವಿಲ್ಲ. ಸ್ವಲ್ಪ ಸುಧಾರಿಸುವ ಹೆಸರಿನಲ್ಲಿ ಹಲವರಿಗೆ ಹಾನಿಯಾದರೆ, ಅದು ಗಂಭೀರ ತಪ್ಪಾಗುತ್ತದೆ” ಎಂದಿರುವ ಸೇನ್, “ಒಂದನ್ನು ಸರಿಪಡಿಸಲು ನೀವು ಏಳು ಹೊಸ ತಪ್ಪುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲದೆ ಮಾಡುವ ಎಸ್‌ಐಆರ್, ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಕಾರಣವಾಗಬಹುದು ಎಂಬ ಕಳವಳಿಗೆ ಸೇನ್ ಧ್ವನಿಗೂಡಿಸಿದ್ದು, ಇದು ಪ್ರಜಾಪ್ರಭುತ್ವ ಭಾಗವಹಿಸುವಿಕೆಯ ಅಡಿಪಾಯವನ್ನೇ ಅಲುಗಾಡಿಸುತ್ತದೆ ಎಂದಿದ್ದಾರೆ.
“ನ್ಯಾಯಯುತ ವ್ಯವಸ್ಥೆಯು ಯಾವಾಗಲೂ ಹೆಚ್ಚು ದುರ್ಬಲರಾಗಿರುವವರನ್ನು ರಕ್ಷಿಸಬೇಕು. ಜನರ ಹಕ್ಕುಗಳನ್ನು ಕಿತ್ತುಕೊಳ್ಳುವಂತಿರಬಾರದು” ಎಂದು ಸೇನ್ ಹೇಳಿದ್ದಾರೆ.
“ಭಾರತದ ಯುವಜನರು: ಅವರಿಗೆ ಇರಬೇಕಾದ ಸಾಮಾಜಿಕ ಅವಕಾಶಗಳು” ಎಂಬ ವಿಷಯದ ಕುರಿತು ಸಾರ್ವಜನಿಕ ಚರ್ಚೆಯಲ್ಲಿ ಸೇನ್ ಮಾತನಾಡಿದ್ದಿ, ಕಾರ್ಯಕ್ರಮದಲ್ಲಿ ಅವರು ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂವಾದ ನಡೆಸಿದ್ದಾರೆ.
ಸಂವಾದದಲ್ಲಿ 91 ವರ್ಷದ ಸೇನ್ ಅವರು ಭಾರತವು ನಿಷ್ಕ್ರಿಯ ಸಹಿಷ್ಣುತೆಯನ್ನು ಮೀರಿ ಸಕ್ರಿಯ ಕೋಮು ಸಹಕಾರದ ಕಡೆಗೆ ಸಾಗುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದನ್ನು ಅವರು “ಯುಕ್ತ ಸಾಧನ” ಅಥವಾ “ಜಂಟಿ ಅಭ್ಯಾಸ” ಎಂದು ಬಣ್ಣಿಸಿದ್ದಾರೆ.
ಐತಿಹಾಸಿಕ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ಅವರು, ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಹಿರಿಯ ಮಗ ದಾರಾ ಶಿಕೋಹ್ ಅವರ ಕೊಡುಗೆಗಳನ್ನು ಕೊಂಡಾಡಿದ್ದು, ಶಿಕೋಹ್ ಅವರು ಐವತ್ತು ಉಪನಿಷತ್ತುಗಳನ್ನು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾರೆ ಎಂದಿದ್ದಾರೆ.
ಈ ಮಹತ್ವದ ಕೃತಿಯು ಹಿಂದೂ ತತ್ವಶಾಸ್ತ್ರವನ್ನು ಜಾಗತೀಕರಣಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ಜರ್ಮನ್‌ನಂತಹ ಭಾಷೆಗಳಿಗೆ ನಂತರದ ಅನುವಾದಗಳಿಗೆ ಆಧಾರವಾಗಿದೆ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.
ರೂ. 2000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ದಾಳಿ


