ಬೆಂಗಳೂರು: ಮಧ್ಯ ಭಾರತದ ಬಸ್ತಾರ್ ಪ್ರದೇಶವು ಕಳೆದ ಕೆಲವು ತಿಂಗಳುಗಳಿಂದ ಸರ್ಕಾರದ ಸಶಸ್ತ್ರ ಪಡೆಗಳು ಮತ್ತು ಆದಿವಾಸಿಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ‘ಆಪರೇಷನ್ ಕಾಗರ್’ ಎಂಬ ಕಾರ್ಯಾಚರಣೆಯು ನಕ್ಸಲರ ನಿಗ್ರಹದ ಹೆಸರಿನಲ್ಲಿ ಬುಡಕಟ್ಟು ಸಮುದಾಯಗಳ ಮೇಲೆ ನಡೆಸುತ್ತಿರುವ ದಮನಕಾರಿ ಕ್ರಮವಾಗಿದೆ. ಇದು ಸಂವಿಧಾನದ ಆಶಯಗಳನ್ನು ಬದಿಗಿಟ್ಟು ನಡೆಯುತ್ತಿರುವ ಯುದ್ಧವಿದ್ದಂತೆ. ಈ ಪರಿಸ್ಥಿತಿಯು ಮೂಲನಿವಾಸಿಗಳ ಬದುಕು ಮತ್ತು ಸಂವಿಧಾನದ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ,” ಎಂದು ಛತ್ತೀಸ್‌ಗಡದ ಆದಿವಾಸಿಗಳ ಪರ ಹೋರಾಟಗಾರ್ತಿ ಸೋನಿ ಸೋರಿ ಹೇಳಿದರು.
ಶನಿವಾರ ಬೆಂಗಳೂರಿನ ಆಶೀರ್ವದ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆದಿವಾಸಿಗಳ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಲಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಘರ್ಷದ ಮೂಲ ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತಾಸಕ್ತಿ ಎಂದು ಬಲವಾಗಿ ಪ್ರತಿಪಾದಿಸಿದರು. “ದಂಡಕಾರಣ್ಯದಲ್ಲಿ ಅಡಗಿರುವ ರೂ.70 ಲಕ್ಷ ಕೋಟಿ ಮೌಲ್ಯದ ಖನಿಜ ಸಂಪತ್ತೇ ಈ ಯುದ್ಧಕ್ಕೆ ಮೂಲ ಕಾರಣ. ಈ ಸಂಪತ್ತನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಉದ್ದೇಶದಿಂದಲೇ ಆಪರೇಷನ್ ಕಾಗರ್ ಜಾರಿಗೊಳಿಸಲಾಗಿದೆ ಎಂಬುದು ಮಾನವ ಹಕ್ಕುಗಳ ಕಾರ್ಯಕರ್ತರ ದೃಢವಾದ ನಂಬಿಕೆ,” ಎಂದರು.
ಸೋನಿ ಸೋರಿ ಅವರ ಪ್ರಕಾರ, ಅಭಿವೃದ್ಧಿಯ ಹೆಸರಿನಲ್ಲಿ ಬುಡಕಟ್ಟು ಜನಾಂಗದವರು ಶತಮಾನಗಳಿಂದ ವಾಸಿಸುತ್ತಿರುವ ಪ್ರದೇಶಗಳನ್ನು ನಾಶ ಮಾಡಲಾಗುತ್ತಿದೆ. ಇದು ಅವರ ಸಾಂಸ್ಕೃತಿಕ ಪರಂಪರೆ, ಸ್ವಯಂ ಆಡಳಿತ ಮತ್ತು ಸ್ವ-ನಿರ್ಣಯದ ಹಕ್ಕುಗಳಿಗೆ ಗಂಭೀರ ಅಪಾಯ ತಂದೊಡ್ಡಿದೆ. “ಬುಡಕಟ್ಟು ಜನಾಂಗದವರ ಬದುಕುವ ಹಕ್ಕನ್ನು ಹರಣ ಮಾಡಲಾಗುತ್ತಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನೇ ಕಡೆಗಣಿಸಿದಂತಾಗಿದೆ,” ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಎನ್‌ಕೌಂಟರ್‌ಗಳು ಮತ್ತು ಸತ್ಯಶೋಧನೆಗೆ ನಿರಾಕರಣೆ
ಮಾತು ಮುಂದುವರೆಸಿದ ಸೋನಿ, ಈ ಕಾರ್ಯಾಚರಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು. “ಕಳೆದ ಒಂದು ವರ್ಷದಲ್ಲೇ ನಡೆದ 70ಕ್ಕೂ ಹೆಚ್ಚು ಎನ್‌ಕೌಂಟರ್‌ಗಳಲ್ಲಿ 600ಕ್ಕೂ ಹೆಚ್ಚು ಮಾವೋವಾದಿಗಳು ಮತ್ತು ಆದಿವಾಸಿಗಳನ್ನು ಕೊಲ್ಲಲಾಗಿದೆ ಎಂದು ಸರ್ಕಾರ ಹೇಳಿದರೂ, ಈ ಕುರಿತು ಯಾವುದೇ ತನಿಖೆ ನಡೆದಿಲ್ಲ. ಎನ್‌ಕೌಂಟರ್‌ಗಳು ನಕಲಿ ಎಂದು ನಮ್ಮ ಸಮುದಾಯದಲ್ಲಿ ಎಲ್ಲರಿಗೂ ಗೊತ್ತು. ಆಪರೇಷನ್ ಕಾಗರ್ ಪ್ರಾರಂಭವಾದಾಗಿನಿಂದ, ಯಾವುದೇ ಮಾನವ ಹಕ್ಕುಗಳ ಸಂಘಟನೆ ಅಥವಾ ಸ್ವತಂತ್ರ ಸತ್ಯಶೋಧನಾ ತಂಡಕ್ಕೆ ಬಸ್ತಾರ್‌ಗೆ ಭೇಟಿ ನೀಡಲು ಅವಕಾಶ ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಈ ರೀತಿಯ ನಿಯಂತ್ರಣವು ಅದರ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ಮಾನವ ಹಕ್ಕುಗಳ ಸಂಘಟನೆಗಳ ಕಾರ್ಯವೈಖರಿಗೆ ದೊಡ್ಡ ಅಡ್ಡಿಯಾಗಿದೆ,” ಎಂದು ಅವರು ವಿವರಿಸಿದರು.

ಶಾಂತಿ ಮಾತುಕತೆಗಳ ನಿರಾಕರಣೆ
ಸೋನಿ ಸೋರಿ ಅವರು, ಆದಿವಾಸಿಗಳು ದಶಕಗಳ ಕಾಲ ಹೋರಾಡಿ ಪಡೆದ ಕಾನೂನುಗಳಾದ 1996ರ ಪೆಸಾ ಕಾಯ್ದೆ ಮತ್ತು 2006ರ ಅರಣ್ಯ ಹಕ್ಕು ಕಾಯ್ದೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆಪಾದಿಸಿದರು. “ಈ ಕಾಯ್ದೆಗಳನ್ನು ತಿದ್ದುಪಡಿಗಳ ಹೆಸರಿನಲ್ಲಿ ದುರ್ಬಲಗೊಳಿಸಲಾಗುತ್ತಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ, ನಮ್ಮನ್ನು ನಕ್ಸಲೀಯರೆಂದು ಬಂಧಿಸಲಾಗುತ್ತದೆ ಅಥವಾ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಕಳೆದ 35 ವರ್ಷಗಳಲ್ಲಿ 8,000ಕ್ಕೂ ಹೆಚ್ಚು ಆದಿವಾಸಿ ಜನರನ್ನು ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲಾಗಿದೆ, ಆದರೆ ಯಾವುದೇ ತನಿಖೆ ನಡೆದಿಲ್ಲ. ರಾಜಕೀಯ ನಾಯಕರ ಪಾತ್ರವನ್ನು ಪೊಲೀಸರೇ ನಿರ್ವಹಿಸುತ್ತಿರುವ ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಸಂಪೂರ್ಣವಾಗಿ ನಶಿಸಿವೆ,” ಎಂದರು.
ಶಾಂತಿ ಮಾತುಕತೆಗಳ ಅಸಮರ್ಥತೆಯ ಕುರಿತು ಮಾತನಾಡಿದ ಅವರು, “ಒಂದೆಡೆ, ಮಾವೋವಾದಿ ಪಕ್ಷವು ಶಾಂತಿ ಮಾತುಕತೆಗಳಿಗೆ ಸಿದ್ಧವಿರುವುದಾಗಿ ಘೋಷಿಸಿ, ಅಖಿಲ ಭಾರತ ಮತ್ತು ರಾಜ್ಯ ಮಟ್ಟದಲ್ಲಿ ಶಾಂತಿ ಸಮಿತಿಗಳನ್ನು ರಚಿಸಲು ಪ್ರಯತ್ನಿಸುತ್ತಿದೆ. ಆದರೆ ಸರ್ಕಾರವು ‘ಹತ್ಯೆ ಮಾಡುತ್ತೇವೆ, ನಿರ್ಮೂಲನೆ ಮಾಡುತ್ತೇವೆ’ ಎಂಬ ಧೋರಣೆ ಹೊಂದಿದೆ. ಈ ನಿರ್ದಯಿ ನಿಲುವಿನಿಂದಾಗಿ ಶಾಂತಿಯುತ ಪರಿಹಾರದ ಅವಕಾಶಗಳು ಕಳೆದುಹೋಗುತ್ತಿವೆ,” ಎಂದು ವಿಷಾದ ವ್ಯಕ್ತಪಡಿಸಿದರು. ಹಲವಾರು ರಾಜಕೀಯ ವಿರೋಧ ಪಕ್ಷಗಳು ಮತ್ತು ಎಡಪಂಥೀಯ ಸಂಘಟನೆಗಳು ಶಾಂತಿ ಮಾತುಕತೆ ನಡೆಸುವಂತೆ ಒತ್ತಾಯಿಸಿದರೂ, ಹತ್ಯಾಕಾಂಡಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಜವಾಬ್ದಾರಿ
ಕೊನೆಯಲ್ಲಿ, ಸೋನಿ ಸೋರಿ ಅವರು ಎಲ್ಲರಿಗೂ ಒಂದು ಪ್ರಮುಖ ಕರೆ ನೀಡಿದರು. “ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್‌ಗಳ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮಾತ್ರ ಬುಡಕಟ್ಟು ಜನಾಂಗದವರ ಪರಿಸ್ಥಿತಿ ಸುಧಾರಿಸಬಹುದು. ಆದರೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಇರುವ ವಿಶೇಷ ಅಧಿಕಾರಗಳನ್ನು ಸರಿಯಾಗಿ ಬಳಸುತ್ತಿಲ್ಲ. ಈ ಎಲ್ಲಾ ಅಧಿಕಾರಗಳನ್ನು ಪ್ರಸ್ತುತ ಸರ್ಕಾರವು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದೆ,” ಎಂದರು.
“ಆಪರೇಷನ್ ಕಾಗರ್ ಅನ್ನು ತಕ್ಷಣವೇ ನಿಲ್ಲಿಸಿ, ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಈ ಯುದ್ಧವು ಬುಡಕಟ್ಟು ಜನರ ಬದುಕನ್ನು ಮಾತ್ರವಲ್ಲದೆ, ದೇಶದ ಪ್ರಜಾಪ್ರಭುತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನೂ ನಾಶ ಮಾಡುತ್ತಿದೆ. ಸರ್ಕಾರಗಳು ಸರ್ವಾಧಿಕಾರಿ ಪ್ರವೃತ್ತಿಗಳನ್ನು ಬಿಟ್ಟು, ಶಾಂತಿ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಅನುಸರಿಸಬೇಕು. ಆದಿವಾಸಿಗಳ ಹಕ್ಕುಗಳು ಮತ್ತು ಜೀವಗಳನ್ನು ರಕ್ಷಿಸಲು, ಶಾಂತಿ ಮಾತುಕತೆಯ ಮೂಲಕ ಕದನ ವಿರಾಮ ಘೋಷಿಸುವುದು ಪ್ರಜಾಪ್ರಭುತ್ವದ ಕರ್ತವ್ಯ. ಈ ಚಳುವಳಿಯನ್ನು ನಿರ್ಮಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ,” ಎಂದು ಸೋನಿ ಸೋರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಪ್ರತ್ಯೇಕ ಒಳಮೀಸಲಾತಿ ಇಲ್ಲ ಎಂದಿದ್ದಕ್ಕೆ ಫ್ರೀಡಂ ಪಾರ್ಕಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅಲೆಮಾರಿ ಸಮುದಾಯ


