ವಿಶೇಷ ಚೇತನರನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಸಮಯ್ ರೈನಾ ಸೇರಿದಂತೆ ಐವರು ಹಾಸ್ಯ ಕಲಾವಿದರಿಗೆ ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಮತ್ತು ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಬೇಷರತ್ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಆ.25) ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಸಮಯ್ ರೈನಾ, ವಿಪುನ್ ಗೋಯಲ್, ಬಲರಾಜ್ ಪರಮಜೀತ್ ಸಿಂಗ್ ಘಾಯ್, ಸೋನಾಲಿ ಥಕ್ಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಮತ್ತು ನಿಶಾಂತ್ ಜಗದೀಶ್ ತನ್ವರ್ ಅವರ ಹಾಸ್ಯಗಳ ವಿರುದ್ದ M/s ಕ್ಯೂರ್ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ. ವಿಶೇಷ ಚೇತನರ ಅವಹೇಳನ ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ಈ ಐವರು ವಿಶೇಷ ಚೇತನರು, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಮತ್ತು ದೃಷ್ಟಿಹೀನತೆಯಿಂದ ಬಳಲುತ್ತಿರುವವರನ್ನು ಅಪಹಾಸ್ಯ ಮಾಡಿದ ಆರೋಪ ಹೊರಿಸಲಾಗಿದೆ.
ಮುಂದಿನ ವಿಚಾರಣೆಯ ದಿನದಂದು ಹಾಸ್ಯ ಕಲಾವಿದರು ಪಾವತಿಸಬೇಕಾದ ದಂಡವನ್ನು ನಿರ್ಧರಿಸುವುದಾಗಿ ಪೀಠ ಹೇಳಿದೆ. “ಪಶ್ಚಾತ್ತಾಪದ ಪ್ರಮಾಣವು ಅಪರಾಧದ ಮಟ್ಟಕ್ಕಿಂತ ಹೆಚ್ಚಾಗಿರಬೇಕು, ಅದು ತಪ್ಪನ್ನು ತೊಳೆದಂತೆ” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದ್ದಾರೆ.
ತನ್ನ ಕಾರ್ಯಕ್ರಮದಲ್ಲಿ ಬೇಷರತ್ತಾದ ಕ್ಷಮೆಯಾಚನೆಯನ್ನು ಪ್ರಸಾರ ಮಾಡಲಾಗುವುದು ಎಂಬ ಪ್ರತಿಜ್ಞೆಗೆ ಒಳಪಟ್ಟು ದೈಹಿಕ ಹಾಜರಾತಿಯಿಂದ ವಿನಾಯಿತಿ ಪಡೆದ ಸೋನಾಲಿ ಥಕ್ಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಹೊರತುಪಡಿಸಿ, ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಹಾಸ್ಯಕ್ಕೆ ಸರ್ಕಾರ ಮಾರ್ಗಸೂಚಿ ರೂಪಿಸುವ ಬಗ್ಗೆ ನ್ಯಾಯಾಲಯಕ್ಕೆ ಹೇಳಿಕೆ ಕೊಟ್ಟಿದ್ದು, ಆದರೆ ಸಂಪೂರ್ಣ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.
“ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಿದೆ’ ಮತ್ತು ಹಾಸ್ಯ ಕಲಾವಿದರು ಕ್ಷಮೆಯಾಚಿಸಲಿದ್ದಾರೆ ಎಂದು ಹಿರಿಯ ವಕೀಲೆ ಅಪರತಿಜಾ ಸಿಂಗ್ ಪೀಠಕ್ಕೆ ತಿಳಿಸಿದ್ದಾರೆ. ಹಾಸ್ಯವು ಬೇರೆಯವರ ಗೌರವಕ್ಕೆ ಧಕ್ಕೆ ತರಬಾರದು ಎಂದು ಪೀಠ ಹೇಳಿದೆ.
ಐಟಿ ಕಾಯ್ದೆಯಡಿಯಲ್ಲಿ ಆರೋಪಿಗಳಿಗೆ ದಂಡ ವಿಧಿಸಲಾಗುವುದು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದ್ದು, ಕಲಾವಿದರು ತಪ್ಪ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ವಿಶೇಷ ಚೇತನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ವೇದಿಕೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಯೂಟ್ಯೂಬರ್‌ಗಳಾದ ರಣವೀರ್ ಅಲಹಾಬಾದಿಯಾ ಮತ್ತು ಆಶಿಶ್ ಚಂಚ್ಲಾನಿ ಸಲ್ಲಿಸಿದ ಎರಡು ಅರ್ಜಿಗಳು ಮತ್ತು ಹಾಸ್ಯ ಕಲಾವಿದರಾದ ಸಮಯ್ ರೈನಾ, ವಿಪುನ್ ಗೋಯಲ್, ಬಲರಾಜ್ ಪರಮಜೀತ್ ಸಿಂಗ್ ಘಾಯ್, ಸೋನಾಲಿ ಥಕ್ಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಮತ್ತು ನಿಶಾಂತ್ ಜಗದೀಶ್ ತನ್ವರ್ ಅವರು ವಿಶೇಷ ಚೇತನರ ವಿರುದ್ದ ಅಸಂವೇದನಾಶೀಲ ಹಾಸ್ಯ ಮಾಡರುವುದಾಗಿ ಆರೋಪಿಸಿ M/s ಕ್ಯೂರ್ ಫೌಂಡೇಶನ್ ಸಲ್ಲಿಸಿದ ಒಂದು ಅರ್ಜಿ ಸೇರಿದಂತೆ ಪೀಠವು 3 ಪ್ರಕರಣಗಳನ್ನು ವಿಚಾರಣೆ ನಡೆಸಿದೆ.
ದೇಶದೆಲ್ಲೆಡೆ ಸದ್ದು ಮಾಡಿದ ನೋಯ್ಡಾ ವರದಕ್ಷಿಣೆ ದುರಂತ: ಜೀವಂತ ಸುಟ್ಟು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನ


