ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ‘ಇಂಡಿಯಾ ಒಕ್ಕೂಟ’ದ ಅಭ್ಯರ್ಥಿಯಾಗಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ನ ಹಲವು ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ 18 ನಿವೃತ್ತ ನ್ಯಾಯಾಧೀಶರ ಗುಂಪು ಖಂಡಿಸಿದೆ.
ಅಮಿತ್ ಶಾ ಅವರ ಹೇಳಿಕೆ ‘ದುರದೃಷ್ಟಕರ’ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ‘ಪೂರ್ವಾಗ್ರಹ ಪೀಡಿತ ತಪ್ಪು ವ್ಯಾಖ್ಯಾನ’ ಎಂದು ಎಂದು ನ್ಯಾಯಾಧೀಶರ ಗುಂಪು ಹೇಳಿದೆ.
“2011ರ ಸಲ್ವಾ ಜುಡುಂ ತೀರ್ಪಿನ ಮೂಲಕ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ‘ನಕ್ಸಲಿಸಂ’ ಅನ್ನು ಬೆಂಬಲಿಸಿದ್ದಾರೆ” ಎಂದು ಅಮಿತ್ ಶಾ ಆರೋಪಿಸಿದ್ದರು. “ನ್ಯಾಯಾಲಯವು ಜಾಗೃತ ಚಳವಳಿಯ ವಿರುದ್ಧ ತೀರ್ಪು ನೀಡದಿದ್ದರೆ 2020ರ ವೇಳೆಗೆ ಎಡಪಂಥೀಯ ಉಗ್ರವಾದ ಕೊನೆಗೊಳ್ಳುತ್ತಿತ್ತು” ಎಂದಿದ್ದರು.
ಕೇರಳದಲ್ಲಿ ಮಾತನಾಡಿದ್ದ ಅಮಿತ್ ಶಾ, “ನಕ್ಸಲ್ ವಿರೋಧಿ ಪ್ರಯತ್ನಗಳಿಗೆ ಅಡ್ಡಿಯಾಗುವ ಸಿದ್ಧಾಂತದಿಂದ ಸುದರ್ಶನ್ ರೆಡ್ಡಿ ಪ್ರೇರಿತರಾಗಿದ್ದಾರೆ” ಎಂದು ಆರೋಪಿಸಿದ್ದರು.
ನಿವೃತ್ತ ನ್ಯಾಯಾಧೀಶರ ಜಂಟಿ ಹೇಳಿಕೆಯಲ್ಲಿ, “ಸಲ್ವಾ ಜುಡುಂ ತೀರ್ಪು ಯಾವುದೇ ರೀತಿಯಲ್ಲೂ ನಕ್ಸಲಿಸಂ ಅನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಲಾಗಿದೆ. ಅಮಿತ್ ಶಾ ಅವರ ಹೇಳಿಕೆಗಳನ್ನು ‘ನ್ಯಾಯಾಂಗದ ತಾರ್ಕಿಕತೆಯ ವಿರೂಪಗೊಳಿಸುವ ಪ್ರಯತ್ನ” ಎಂದು ಖಂಡಿಸಲಾಗಿದೆ.
“ಹಿರಿಯ ರಾಜಕೀಯ ನಾಯಕರೊಬ್ಬರು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ನಿರೂಪಿಸುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಮದನ್ ಬಿ ಲೋಕೂರ್, ಜೆ ಚೆಲಮೇಶ್ವರ್, ಎ.ಕೆ ಪಟ್ನಾಯಕ್, ಅಭಯ್ ಓಕಾ, ವಿಕ್ರಮಜಿತ್ ಸೇನ್, ಗೋಪಾಲ ಗೌಡ, ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ಎಸ್. ಮುರಳೀಧರ್, ಗೋವಿಂದ್ ಮಾಥುರ್, ಸಂಜೀವ್ ಬ್ಯಾನರ್ಜಿ ಮತ್ತು ಅಂಜನಾ ಪ್ರಕಾಶ್ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.
ರಾಜಕೀಯ ಚರ್ಚೆಯಲ್ಲಿ, ವಿಶೇಷವಾಗಿ ಉನ್ನತ ಸಾಂವಿಧಾನಿಕ ಚುನಾವಣೆಗಳ ಸಮಯದಲ್ಲಿ ಸಂಯಮ ಮತ್ತು ನಾಗರಿಕತೆ ಕಾಪಾಡಿಕೊಳ್ಳಬೇಕು ಎಂದು ಹೇಳಿಕೆಯು ಒತ್ತಾಯಿಸಿದೆ. “ಸೈದ್ಧಾಂತಿಕ ಹೋರಾಟಗಳು ಪ್ರಚಾರಗಳ ಭಾಗವಾಗಿರಬಹುದು. ಆದರೆ, ಅವುಗಳನ್ನು ಘನತೆಯಿಂದ ನಡೆಸಬೇಕು. ಅಶ್ಲೀಲ ಪದಗಳಿಂದ ನಿಂದಿಸುವುದು ಸ್ಪರ್ಧಿಸುತ್ತಿರುವ ಹುದ್ದೆಗಳನ್ನು ಅವಮಾನಿಸುತ್ತದೆ” ಎಂದು ಹೇಳಿಕೆ ಅಭಿಪ್ರಾಯಪಟ್ಟಿದೆ.
ಅಮಿತ್ ಶಾ ಹೇಳಿಕೆಗೆ ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ರೆಡ್ಡಿ ಅವರು, ರಾಜಕೀಯ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. “ಸಲ್ವಾ ಜುಡುಂ ಕುರಿತ ತೀರ್ಪು ಸುಪ್ರೀಂ ಕೋರ್ಟ್‌ನದ್ದು, ನನ್ನೊಬ್ಬನದ್ದೇ ಅಲ್ಲ” ಎಂದು ಹೇಳಿದ್ದಾರೆ. ಅಮಿತ್ ಶಾ ಅವರು ಹೇಳಿಕೆ ನೀಡುವ ಮೊದಲು ಪೂರ್ಣ ತೀರ್ಪನ್ನು ಓದಿಲ್ಲ ಎಂದನಿಸುತ್ತದೆ” ಎಂದಿದ್ದಾರೆ.
ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್ ನಿಜ್ಜರ್ ಅವರು ನೀಡಿದ್ದ 2011ರ ಸುಪ್ರೀಂ ಕೋರ್ಟ್ ತೀರ್ಪು, ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಬುಡಕಟ್ಟು ಯುವಕರು ಮತ್ತು ಮಾಜಿ ನಕ್ಸಲರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸುವುದು ಅಸಾಂವಿಧಾನಿಕ ಎಂದು ಘೋಷಿಸಿತ್ತು. ಛತ್ತೀಸ್‌ಗಢ ಸರ್ಕಾರದಿಂದ ಬೆಂಬಲಿತವಾದ ವಿವಾದಾತ್ಮಕ ನಕ್ಸಲ್ ವಿರೋಧಿ ಪಡೆಯಾದ ಸಲ್ವಾ ಜುಡುಂ ಅನ್ನು ವಿಸರ್ಜಿಸುವಂತೆ ಆದೇಶಿಸಿತ್ತು.
ನರಮೇಧಕ್ಕೆ ಪ್ರತಿಕ್ರಿಯೆ: ಜೆಎನ್‌ಯುನಲ್ಲಿ ಗಾಜಾ ಪರ ದನಿ, ಇಸ್ರೇಲ್ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ


