ಗಾಝಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ಎರಡು ದಾಳಿಗಳಲ್ಲಿ ಐವರು ಪತ್ರಕರ್ತರು ಹತ್ಯೆಯಾಗಿರುವುದನ್ನು ಭಾರತ ಬುಧವಾರ (ಆಗಸ್ಟ್ 27, 2025) ‘ಆಘಾತಕಾರಿ’ ಮತ್ತು ‘ತೀವ್ರ ವಿಷಾದಕರ’ ಎಂದು ಬಣ್ಣಿಸಿದೆ.
ಸೋಮವಾರ (ಆ.25) ಗಾಝಾದ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಕನಿಷ್ಠ 20 ಜನರಲ್ಲಿ ಐವರು ಪತ್ರಕರ್ತರೂ ಸೇರಿದ್ದಾರೆ.
‘ಪತ್ರಕರ್ತರ ಹತ್ಯೆ ಆಘಾತಕಾರಿ ಮತ್ತು ತೀವ್ರ ವಿಷಾದಕರ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
“ಭಾರತವು ಯಾವಾಗಲೂ ಸಂಘರ್ಷದಲ್ಲಿ ನಾಗರಿಕರ ಜೀವಹಾನಿಯನ್ನು ಖಂಡಿಸಿದೆ. ಇಸ್ರೇಲಿ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ ಎಂದು ನಮಗೆ ಗೊತ್ತಾಗಿದೆ” ಎಂದಿದ್ದಾರೆ.
Our response to media queries regarding loss of lives of journalists in Khan Younis, Gaza
🔗 https://t.co/he8LS9Kw35 pic.twitter.com/HT3s7gAkMw
— Randhir Jaiswal (@MEAIndia) August 27, 2025
ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ ಇಸ್ರೇಲ್‌ನ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಹುಸಾಮ್ ಅಲ್-ಮಸ್ರಿ, ಮರಿಯಂ ಅಬೂ ದಗ್ಗಾ, ಮೋಝ್ ಅಬೂ ತಾಹಾ, ಮೊಹಮ್ಮದ್ ಸಲಾಮಾ ಮತ್ತು ಅಹ್ಮದ್ ಅಬೂ ಅಝೀಝ್ ಕೊಲ್ಲಲ್ಪಟ್ಟ ಪತ್ರಕರ್ತರು. ಇವರು ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಇಸ್ರೇಲ್-ಹಮಾಸ್ ಯುದ್ಧವು ಮಾಧ್ಯಮ ಕಾರ್ಯಕರ್ತರಿಗೆ ಅತ್ಯಂತ ರಕ್ತಸಿಕ್ತ ಸಂಘರ್ಷಗಳಲ್ಲಿ ಒಂದಾಗಿದೆ. 22 ತಿಂಗಳ ಸಂಘರ್ಷದಲ್ಲಿ ಗಾಝಾದಲ್ಲಿ ಕನಿಷ್ಠ 192 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್'(ಸಿಪಿಜೆ) ತಿಳಿಸಿದೆ. ಅದೇ ರೀತಿ, ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇದುವರೆಗೆ 18 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಸಿಪಿಜೆ ಹೇಳಿದೆ.
ಶೇ.50ರಷ್ಟು ಸುಂಕ ಹೇರಿದ ಅಮೆರಿಕ: ಭಾರತದ 48 ಬಿಲಿಯನ್ ಡಾಲರ್ ರಫ್ತಿಗೆ ಹೊಡೆತ ಬೀಳುವ ಸಾಧ್ಯತೆ; ವರದಿ


