“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನ ನೀಡಿದ ಐದು ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಲು ಒಪ್ಪಿಕೊಂಡರು” ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ (ಆ.27) ಹೇಳಿದ್ದಾರೆ.
ಬಿಹಾರದ ಮುಝಪ್ಪರ್‌ಪುರ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ‘ವೋಟರ್ ಅಧಿಕಾರ್’ ಯಾತ್ರೆಯ ಭಾಗವಾಗಿ ನಡೆದ ರ‍್ಯಾಲಿಯಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಾದ ಡಿಎಂಕೆಯ ಎಂ.ಕೆ ಸ್ಟಾಲಿನ್ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಇತರರು ಭಾಗವಹಿಸಿದ್ದರು.
“ಟ್ರಂಪ್ ಇವತ್ತು ಏನು ಹೇಳಿದ್ದಾರೆ ನಿಮಗೆ ಗೊತ್ತಾ? ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರಿದ್ದಾಗ, ಅವರು ಮೋದಿಯವರಿಗೆ ಕರೆ ಮಾಡಿ 24 ಗಂಟೆಗಳ ಒಳಗೆ ಯುದ್ದ ನಿಲ್ಲಿಸುವಂತೆ ಸ್ಪಷ್ಟವಾಗಿ ಹೇಳಿದ್ದರು ಮತ್ತು ಮೋದಿ ತಕ್ಷಣವೇ ಅದನ್ನು ಪಾಲಿಸಿದ್ದರು ಎಂದಿದ್ದಾರೆ. ಸಂಘರ್ಷ ನಿಲ್ಲಿಸಲು ಮೋದಿಯವರಿಗೆ ಟ್ರಂಪ್ 24 ಗಂಟೆಗಳ ಕಾಲಾವಕಾಶ ನೀಡಿದ್ದರು. ಆದರೆ, ಮೋದಿ ಅದನ್ನು 5 ಗಂಟೆಗಳಲ್ಲಿ ಪಾಲಿಸಿದರು” ಎಂದಿದ್ದಾರೆ.
ಟ್ರಂಪ್ ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿಡಿಯೋ ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಅಮೆರಿಕದ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ನೇರ ಮಾತುಕತೆ ನಡೆದ ನಂತರ ಮೇ ತಿಂಗಳಲ್ಲಿ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
“ಟ್ರಂಪ್ ಹೇಳಿದ್ದನ್ನು ಮಾಧ್ಯಮಗಳು ನಿಮಗೆ ತೋರಿಸುವುದಿಲ್ಲ. ಏಕೆಂದರೆ, ಅವರು ಮೋದಿ ಮತ್ತು ಅವರ ಸ್ನೇಹಪರ ವ್ಯವಹಾರ ಉದ್ಯಮಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಹೊರತು, ನನ್ನಂತಹ ಜನರು, ಸ್ಟಾಲಿನ್ ಅಥವಾ ತೇಜಸ್ವಿಯವರ ಬಗ್ಗೆ ಅಲ್ಲ” ಎಂದು ರಾಹುಲ್ ಗಾಂಧಿ ಮಾಧ್ಯಮಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
“ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ‘ಗುಜರಾತ್ ಮಾದರಿ’ ಎಂದು ಹೇಳುತ್ತಿದ್ದರು. ಮತಗಳ್ಳತನವನ್ನೇ ಅವರು ಗುಜರಾತ್ ಮಾದರಿ ಎಂದಿರುವುದು. ಗುಜರಾತ್‌ನಿಂದಲೇ ಬಿಜೆಪಿ ಮತಗಳನ್ನು ಕದಿಯಲು ಶುರು ಮಾಡಿದೆ. ಮೋದಿ-ಅಮಿತ್ ಶಾ ಚುನಾವಣಾ ಆಯೋಗದ ಸಹಾಯದಿಂದ ಮತಗಳನ್ನು ಕದಿಯುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದ ಮತದಾರರ ಪಟ್ಟಿಯಿಂದ ‘ಸಾವನ್ನಪ್ಪಿದವರು, ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಗೊಂಡವರು’ ಎಂದು ಕಾರಣಗಳನ್ನು ನೀಡಿ 65 ಲಕ್ಷ ಹೆಸರುಗಳನ್ನು ಕೈಬಿಟ್ಟಿದ್ದಕ್ಕೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಬಿಹಾರದಲ್ಲಿ ಸಾವಿರಾರು ಜನರು ತಮ್ಮ ಹೆಸರುಗಳನ್ನು ತಪ್ಪಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ನಮಗೆ ದೂರು ನೀಡಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಅನೇಕ ಜೀವಂತ ಜನರನ್ನು ಸತ್ತಂತೆ ತೋರಿಸಲಾಗಿದೆ (ಕರಡು ಪಟ್ಟಿಯಲ್ಲಿ)” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಚುನಾವಣಾ ಆಯೋಗವು ಶ್ರೀಮಂತರಲ್ಲದ ದಲಿತರು, ಒಬಿಸಿಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಅಳಿಸುತ್ತಿದೆ. ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸಾಮಾನ್ಯ ಜನರ ಧ್ವನಿಯನ್ನು ಕೇಳಲು ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಆಪಾದಿತ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ 15 ದಿನಗಳ ‘ವೋಟರ್ ಅಧಿಕಾರ್’ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆ ಇನ್ನೂ ಮೂರು ದಿನಗಳ ಕಾಲ ಮುಂದುವರಿಯಲಿದೆ.
ಗಾಝಾದಲ್ಲಿ ಪತ್ರಕರ್ತರ ಹತ್ಯೆ ‘ಆಘಾತಕಾರಿ’ ಎಂದ ಭಾರತ: ನಾಗರಿಕರ ನರಮೇಧಕ್ಕೆ ಖಂಡನೆ


