ಕಾಶಿ-ಮಥುರಾ ಅಭಿಯಾನಗಳನ್ನು ಮತ್ತೆ ಪ್ರಚೋದಿಸಲು ಪ್ರಯತ್ನಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತೀವ್ರವಾಗಿ ಖಂಡಿಸಿದೆ. ಭಾಗವತ್ ಅವರ ಹೇಳಿಕೆಗಳು ‘ಭಾರತದ ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ನ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತವೆ ಮತ್ತು ನೆಲದ ಕಾನೂನನ್ನು ಉಲ್ಲಂಘಿಸುತ್ತವೆ’ ಎಂದು ಹೇಳಿದೆ.
ಗುರುವಾರ (ಆ.28) ದೆಹಲಿಯ ವಿಜ್ಞಾನ ಭವನದಲ್ಲಿ ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ನಡೆದ ಮೂರು ದಿನಗಳ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, “ನಮ್ಮ ಸ್ವಯಂಸೇವಕರು ಕಾಶಿ, ಮಥುರಾ ಚಳುವಳಿಗಳಿಗೆ ಸೇರಲು ಸ್ವತಂತ್ರರು. ಮುಸ್ಲಿಮರು ‘ಸಹೋದರತ್ವ’ ಕ್ಕಾಗಿ ಈ ಮೂರನ್ನು ತ್ಯಜಿಸಬೇಕು” ಎಂದು ಹೇಳಿಕೆ ಕೊಟ್ಟಿದ್ದರು.
“ಆರ್‌ಎಸ್‌ಎಸ್ ದೇವಾಲಯ ಚಳುವಳಿಗಳಿಗೆ ಸೇರುವುದಿಲ್ಲ; ಆರ್‌ಎಸ್‌ಎಸ್ ಕೈ ಜೋಡಿಸಿದ ಏಕೈಕ ಚಳುವಳಿಯೆಂದರೆ ಅದು, ರಾಮ ಮಂದಿರ ಚಳುವಳಿ. ನಾವು ಅದನ್ನು ಕೊನೆಯವರೆಗೂ ಮುನ್ನಡೆಸಿದ್ದೇವೆ. ಸಂಘ ಇನ್ನು ಮುಂದೆ ಯಾವುದೇ (ದೇವಾಲಯ) ಚಳುವಳಿಗಳಿಗೆ ಸೇರುವುದಿಲ್ಲ. ಹಿಂದೂಗಳ ಭಾವನೆಯಲ್ಲಿ ಎರಡು ಜನ್ಮಸ್ಥಳಗಳಾಗಿ ಮತ್ತು ಒಂದು ವಾಸಸ್ಥಳವಾಗಿ ಕಾಶಿ-ಮಥುರಾ ಮತ್ತು ಅಯೋಧ್ಯೆ ಹೆಚ್ಚಿನ ಮಹತ್ವವನ್ನು ಹೊಂದಿವೆ. ಆದ್ದರಿಂದ, ಹಿಂದೂ ಸಮಾಜವು ಈ ಸ್ಥಳಗಳಿಗಾಗಿ ಆಗ್ರಹಿಸುತ್ತದೆ” ಎಂದು ಭಾಗವತ್ ಹೇಳಿದ್ದರು.
“ಆರ್‌ಎಸ್‌ಎಸ್ ಈ ಚಳುವಳಿಗಳ ಭಾಗವಾಗುವುದಿಲ್ಲ, ಆದರೆ ಸ್ವಯಂಸೇವಕರು ಸೇರಲು ಸ್ವತಂತ್ರರು” ಎಂದು ತಿಳಿಸಿದ್ದರು.
ಹಿಂದೂಗಳು ಎಲ್ಲಾ ಸ್ಥಳಗಳಲ್ಲಿ ದೇವಾಲಯಗಳನ್ನು ಹುಡುಕಬಾರದು. ಆದರೆ, ಮುಸ್ಲಿಮರು ಸಹೋದರತ್ವಕ್ಕಾಗಿ ಈ ಮೂರನ್ನು ತ್ಯಜಿಸಬೇಕು ಎಂದು ಎಂದಿದ್ದರು.
“ನಾವು ಎಲ್ಲಾ ಸ್ಥಳಗಳಲ್ಲಿ ಶಿವಲಿಂಗ ಅಥವಾ ಮಂದಿರವನ್ನು ಹುಡುಕಬಾರದು. ನಾನು ಹಿಂದೂ ಸಂಘಟನೆಯ ಮುಖ್ಯಸ್ಥನಾಗಿ ಈ ಘೋಷಣೆ ಮಾಡುತ್ತಿದ್ದರೆ, ಇನ್ನೊಂದು ಕಡೆಯವರು ಈ ಮೂರನ್ನು ಕೈಬಿಡಬೇಕು. ಇದು ಸಹೋದರತ್ವಕ್ಕೆ ಒಂದು ದೊಡ್ಡ ಹೆಜ್ಜೆಯಾಗಲಿದೆ” ಎಂದು ಭಾಗವತ್ ಹೇಳಿದ್ದರು.
ಆರೆಸ್ಸೆಸ್ ಭಾಗಿಯಾಗಿದ್ದ ಬಾಬರಿ ಮಸೀದಿ ಧ್ವಂಸ ಕೃತ್ಯದ ನಂತರ, 1947 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳವನ್ನು ಬದಲಾಯಿಸುವುದನ್ನು ನಿಷೇಧಿಸುವ ಕಾನೂನನ್ನು ಸಂಸತ್ತು ಅಂಗೀಕರಿಸಿತು ಎಂದು ಸಿಪಿಐ(ಎಂ) ಎತ್ತಿ ತೋರಿಸಿದೆ.
ಬಾಬರಿ ಧ್ವಂಸದ ನಂತರ, ವಿವಿಧ ಹಿಂದುತ್ವ ಶಕ್ತಿಗಳು ನಿರಂತರವಾಗಿ “ಅಯೋಧ್ಯಾ ತೋ ಸಿರ್ಫ್ ಜಾನ್ ಕಿ ಹೈ, ಕಾಶಿ-ಮಥುರಾ ಬಾಕಿ ಹೈ” ಎಂಬ ಘೋಷಣೆಯನ್ನು ಕೂಗುತ್ತಿವೆ. ಇದರ ಅರ್ಥ “ಅಯೋಧ್ಯಾ ಕೇವಲ ಟ್ರೇಲರ್, ಕಾಶಿ ಮತ್ತು ಮಥುರಾ ಇನ್ನೂ ಉಳಿದಿವೆ” ಎಂದಾಗಿದೆ. ಇದು ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಉಲ್ಲೇಖಿಸಿದ ಘೋಷಣೆಯಾಗಿದೆ.
“ಇಂತಹ ಬೇಡಿಕೆಗಳು ಕೋಮು ಭಾವನೆಗಳನ್ನು ಕೆರಳಿಸುವ, ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಧಾರ್ಮಿಕ ಆಧಾರದ ಮೇಲೆ ಸಮಾಜವನ್ನು ಧ್ರುವೀಕರಿಸುವ ಗುರಿಯನ್ನು ಹೊಂದಿವೆ” ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಪ್ರಕಟಣೆಯಲ್ಲಿ ಹೇಳಿದೆ.
“ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಜನಾಕ್ರೋಶದಿಂದ ಬಿಜೆಪಿ ಸರ್ಕಾರವನ್ನು ರಕ್ಷಿಸಲು ಆರ್‌ಎಸ್‌ಎಸ್ ಮುಖ್ಯಸ್ಥರು ವಿಭಜನಕಾರಿ ವಿಷಯಗಳನ್ನು ಮುನ್ನೆಲೆ ತರುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಕೋಮು ವಿಭಜನೆಯನ್ನು ಪ್ರಚೋದಿಸುತ್ತಿವೆ” ಎಂದು ಸಿಪಿಐ(ಎಂ) ಕಿಡಿಕಾರಿದೆ.

“ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆ, ದುರ್ಬಲಗೊಳ್ಳುತ್ತಿರುವ ಆರ್ಥಿಕತೆ, ರೈತರು ಮತ್ತು ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದಾಳಿಗಳು ಮತ್ತು ಚುನಾವಣಾ ದುರುಪಯೋಗಗಳಿಂದ ಜನರು ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆ ಹೆಚ್ಚು ಹೆಚ್ಚು ಭ್ರಮನಿರಸನಗೊಳ್ಳುತ್ತಿದ್ದಾರೆ. ಅದರ ವೈಫಲ್ಯಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡುತ್ತಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಆರೆಸ್ಸೆಸ್‌ನ ವಿಭಜಕ ನೀತಿಗಳ ವಿರುದ್ಧ ‘ಜಾಗರೂಕರಾಗಿರಿ’. ಭಾರತದ ಏಕತೆ ಮತ್ತು ಸಮಗ್ರತೆಯು ಅತ್ಯಂತ ಮಹತ್ವದ್ದಾಗಿದೆ. ಅದನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಬೇಕು” ಎಂದು ಸಿಪಿಐ(ಎಂ) ದೇಶದ ಜನರಿಗೆ ಒತ್ತಿ ಹೇಳಿದೆ.
ಇದನ್ನು ಸಾಧಿಸಲು, ‘ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಮೂಲಕ ವಿಶಾಲವಾದ ಪ್ರತಿರೋಧವನ್ನು ನಿರ್ಮಿಸುವುದು ತುರ್ತಾಗಿ ಅಗತ್ಯವಾಗಿದೆ’ ಎಂದಿದೆ.
‘ಭಾರತೀಯ ಮಹಿಳೆಯರ ಮೇಲೆ ಹೊರೆಯಾಕಬೇಡಿ..’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು


