ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ‘ಶೂನ್ಯ ದೂರುಗಳು’ ಬಂದಿವೆ ಎಂಬ ಚುನಾವಣಾ ಆಯೋಗದ ಹೇಳಿಕೆಗೆ ವಿರುದ್ಧವಾಗಿ, 89 ಲಕ್ಷ ದೂರುಗಳನ್ನು ಸಲ್ಲಿಸಿದ್ದೇವೆ. ಅದಕ್ಕೆ ಪುರಾವೆಯಾಗಿ ಸೀಲ್ ಹಾಕಿರುವ ರಶೀದಿಗಳು ನಮ್ಮ ಬಳಿ ಇವೆ ಎಂದು ಕಾಂಗ್ರೆಸ್ ಭಾನುವಾರ (ಆ.31) ಹೇಳಿದೆ.
ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಎಲ್ಲಾ ಹೆಸರುಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಪಕ್ಷ ಆಗ್ರಹಿಸಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಪಕ್ಷದ ಬಿಹಾರ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಅಖಿಲೇಶ್ ಪ್ರಸಾದ್, ಶಕೀಲ್ ಅಹ್ಮದ್ ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
“ಯಾವುದೇ ರಾಜಕೀಯ ಪಕ್ಷಗಳಿಂದ ಯಾವುದೇ ದೂರುಗಳು ಬರುತ್ತಿಲ್ಲ ಎಂಬ ಸುದ್ದಿಯನ್ನು ಚುನಾವಣಾ ಆಯೋಗ ತನ್ನ ಮೂಲಗಳ ಮೂಲಕ ಹರಡುತ್ತಲೇ ಇದೆ. ಸತ್ಯ ಏನೆಂದರೆ, ಕಾಂಗ್ರೆಸ್ ಎಸ್‌ಐಆರ್‌ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ 89 ಲಕ್ಷ ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ” ಎಂದು ಖೇರಾ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ಮತದಾರರನ್ನು ಕಾಂಗ್ರೆಸ್ ಬಯಸುವುದಿಲ್ಲ. ಆದರೆ, ಯಾವುದೇ ಹಕ್ಕುದಾರ ಮತದಾರರನ್ನು ಪಟ್ಟಿಯಿಂದ ಕೈಬಿಡಲೂ ಅನುಮತಿಸುವುದಿಲ್ಲ. ಉದ್ದೇಶಪೂರ್ವಕವಾಗಿಯೂ ಆಗಿರಬಹುದು ಅಥವಾ ಅಜಾಗರೂಕತೆಯಿಂದಲೂ ಆಗಿರಬಹುದು ಎಂದು ಪವನ್ ಖೇರಾ ಗುಡುಗಿದ್ದಾರೆ.
“ದೂರುಗಳಿಗೆ ಚುನಾವಣಾ ಆಯೋಗದ ಸ್ಪಷ್ಟ ಪ್ರತಿರೋಧದ ಹೊರತಾಗಿಯೂ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಸಹಿ ಮತ್ತು ಸೀಲ್ ಇರುವ ರಶೀದಿಗಳನ್ನು ಪಡೆದುಕೊಂಡಿದ್ದಾರೆ. ಬೂತ್ ಮಟ್ಟದ ಏಜೆಂಟ್‌ಗಳಿಂದ ದೂರುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಚುನಾವಣಾ ಆಯೋಗ ನಿರಾಕರಿಸಿದೆ. ದೂರುಗಳು ವೈಯಕ್ತಿಕ ದೂರುದಾರರಿಂದ ಆಗಿರಬೇಕು ಮತ್ತು ರಾಜಕೀಯ ಪಕ್ಷಗಳಿಂದ ಅಲ್ಲ ಎಂದು ಹೇಳಿದೆ” ಎಂದು ಖೇರಾ ತಿಳಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು ಚುನಾವಣಾ ಆಯೋಗವು ನಾಲ್ಕು ಕಾರಣಗಳನ್ನು ಉಲ್ಲೇಖಿಸಿದೆ. ವಲಸೆಯ ನೆಪದಲ್ಲಿ 25 ಲಕ್ಷ, ಸಾವನಪ್ಪಿದ್ದಾರೆ ಎಂದು 22 ಲಕ್ಷ ಮತ್ತು ವಿಳಾಸಗಳಲ್ಲಿ ಕಂಡುಬಂದಿಲ್ಲ ಎಂದು 9.7 ಲಕ್ಷ ಮತದಾರ ಹೆಸರುಗಳನ್ನು ಕೈ ಬಿಡಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸಲಾಗಿದೆ ಎಂದು ಏಳು ಲಕ್ಷ ಹೆಸರುಗಳನ್ನು ಕೈ ಬಿಟ್ಟಿದ್ದಾರೆ ಎಂದು ಖೇರಾ ವಿವರಿಸಿದ್ದಾರೆ.
ಒಬ್ಬರು ಮತದಾರರಿಗೆ ಎರಡು ಎಪಿಕ್ (ಮತದಾರರ ಫೋಟೋ ಗುರುತಿನ ಚೀಟಿ) ಸಂಖ್ಯೆಗಳನ್ನು ನೀಡಲಾದ ಪ್ರಕರಣಗಳು ಸಾಕಷ್ಟಿವೆ ಎಂದು ಖೇರಾ ಆರೋಪಿಸಿದ್ದಾರೆ.
ಎಸ್‌ಐಆರ್‌ನಲ್ಲಿ ಕೆಲವು ಕುತೂಹಲಕಾರಿ ಮಾದರಿಗಳನ್ನು ಗಮನಿಸಲಾಗಿದೆ. 20,638 ಬೂತ್‌ಗಳಲ್ಲಿ 100ಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. 1,988 ಬೂತ್‌ಗಳಲ್ಲಿ 200ಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. 7,613 ಬೂತ್‌ಗಳಲ್ಲಿ, ಅಳಿಸಲಾದ ಹೆಸರುಗಳಲ್ಲಿ 70% ಮಹಿಳಾ ಮತದಾರರಾಗಿದ್ದು, 635 ಬೂತ್‌ಗಳಲ್ಲಿ, ವಲಸೆ ವರ್ಗದ ಅಡಿಯಲ್ಲಿ ಅಳಿಸಲಾದ ಮತದಾರರಲ್ಲಿ 75% ಕ್ಕಿಂತ ಹೆಚ್ಚು ಮಹಿಳೆಯರು ಎಂದು ಖೇರಾ ಹೇಳಿದ್ದಾರೆ.
ಸಾಮಾನ್ಯವಾಗಿ ಪುರುಷರು ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದರಿಂದ ಇದು ವಿಚಿತ್ರವಾಗಿ ಕಾಣಿಸಿದೆ. ಮಹಿಳೆಯರ ಹೆಸರನ್ನು ನಿರ್ದಿಷ್ಟವಾಗಿ ಕೈಬಿಡಲಾಗಿದೆ ಎಂದು ಪವನ್ ಖೇರಾ ಆರೋಪಿಸಿದ್ದಾರೆ.
7,931 ಬೂತ್‌ಗಳಲ್ಲಿ, ಶೇ. 75 ರಷ್ಟು ಮತದಾರರನ್ನು ಕೈಬಿಡಲಾಗಿದೆ. ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಎಸ್‌ಐಆರ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲ್ಪಟ್ಟ ಅನೇಕ ಮತದಾರರು ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಆದ್ದರಿಂದ ಈ ವರ್ಗದಲ್ಲಿ ಗಂಭೀರ ವ್ಯತ್ಯಾಸಗಳಿವೆ ಎಂದು ಖೇರಾ ಹೇಳಿದ್ದಾರೆ.
ಈ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು, ಕೈಬಿಡಲಾದ ಎಲ್ಲಾ ಹೆಸರುಗಳನ್ನು ಚುನಾವಣಾ ಆಯೋಗವು ಮತ್ತೊಮ್ಮೆ ಪರಿಶೀಲಿಸಬೇಕು. ಆಯೋಗವು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಮೂಲಕ ಅಂತಹ ಪ್ರತಿಯೊಬ್ಬ ಮತದಾರರ ಸ್ಥಿತಿಯನ್ನು ದೃಢೀಕರಿಸಬೇಕು ಎಂದು ಖೇರಾ ಒತ್ತಾಯಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿ: ಮಸೂದೆ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ


