ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದಾರೆ ಎಂದು 30 ವರ್ಷದ ಖಾಸಗಿ ಶಾಲಾ ವ್ಯಾನ್ ಚಾಲಕನನ್ನು ಬೆಂಗಳೂರಿನ ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದು, ಪ್ರಸ್ತುತ ಅವರನ್ನು ನೆಲಮಂಗಲದ ವಿದೇಶಿಯರ ಬಂಧನ ಕೇಂದ್ರದಲ್ಲಿ ಇರಿಸಿದ್ದಾರೆ. ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲು ಕಾಯುತ್ತಿದ್ದಾರೆ ಎಂದು ದಿ ಹಿಂದೂ ಆಗಸ್ಟ್ 30ರಂದು ವರದಿ ಮಾಡಿದೆ.
ಆದರೆ, ಬಂಧಿತನ ಕುಟುಂಬಸ್ಥರು ಅವರು ಪಶ್ಚಿಮ ಬಂಗಾಳದ ನಿವಾಸಿ ಎಂದು ಹೇಳಿಕೊಂಡಿದ್ದು, ಕಾನೂನುಬಾಹಿರ ಬಂಧನ ಮತ್ತು ಪೊಲೀಸರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಕೆಎಸ್‌ಎಚ್‌ಆರ್‌ಸಿ) ದೂರು ಸಲ್ಲಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಫಿಕುಲ್ ಬಿಸ್ವಾಸ್ ಎಂದು ಗುರುತಿಸಲಾಗಿದ್ದು, ಇವರು ಪಶ್ಚಿಮ ಬಂಗಾಳದ ಧನಂಜಯ್‌ಪುರದವರೆಂದು ಕುಟುಂಬ ಹೇಳಿಕೊಂಡಿದೆ. ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಖಾಸಗಿ ಶಾಲಾ ವ್ಯಾನ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿ ಹೇಳಿದೆ.
ಮಾವನ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ಬಂಧಿತ ರಫಿಕುಲ್ ಅವರ ಪತ್ನಿ, ರಫಿಕುಲ್ ಅವರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೊತೆಗೆ, ಪಶ್ಚಿಮ ಬಂಗಾಳದ ಧನಂಜಯ್‌ಪುರದ ನಿವಾಸಿ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ ಪ್ರಮಾಣಪತ್ರವನ್ನೂ ನೀಡಿರುವುದಾಗಿ ಹೇಳಿದ್ದಾರೆ.
ಆದರೆ, ಪೊಲೀಸರು ಅವರು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ನಕಲಿ ಎಂದು ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.
ರಫಿಕುಲ್ ಅವರ ವೈದ್ಯಕೀಯ ಮತ್ತು ಸಾರಿಗೆ ವೆಚ್ಚಗಳಿಗಾಗಿ ಪೊಲೀಸರು 10,000 ರೂಪಾಯಿ ಲಂಚ ಕೇಳಿದ್ದಾರೆ ಎಂದೂ ಪತ್ನಿ ಆರೋಪಿಸಿದ್ದು, ಆ ಹಣವನ್ನು ಪಾವತಿಸಿರುವುದಾಗಿ ಹೇಳಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ, ಆಯೋಗವು ಈ ವಿಷಯವನ್ನು ತಕ್ಷಣವೇ ಪರಿಗಣನೆಗೆ ತೆಗೆದುಕೊಂಡು, ಅಕ್ರಮ ಬಂಧನ ಮತ್ತು ಸುಲಿಗೆಯ ಬಗ್ಗೆ ನ್ಯಾಯಯುತ ಹಾಗೂ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಮತ್ತು ಬಂಧಿತ ರಫಿಕುಲ್ ಅವರ ತಕ್ಷಣ ಬಿಡುಗಡೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ವರದಿಯ ಆಧಾರದ ಮೇಲೆ ಸಂಶಯಾಸ್ಪದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸದಸ್ಯರು ತಮ್ಮಲ್ಲಿರುವ ದಾಖಲೆಗಳೊಂದಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಮುಂದೆ ಇದನ್ನು ಪ್ರಶ್ನಿಸಬಹುದು ಎಂದಿದ್ದಾರೆ.
ದಿ ಹಿಂದೂ ಜೊತೆ ಮಾತನಾಡಿರುವ ಬಂಧಿತನ ಕುಟುಂಬದೊಂದಿಗೆ ಕೆಲಸ ಮಾಡುತ್ತಿರುವ ಬೆಂಗಳೂರಿನ ಹೋರಾಟಗಾರ ಆರ್. ಕಲೀಮುಲ್ಲಾ, “ಇತ್ತೀಚೆಗೆ ಪೊಲೀಸರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಅವರನ್ನು ‘ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು’ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಈ ವಲಸೆ ಕಾರ್ಮಿಕರು ಕೆಲವು ಸಂದರ್ಭಗಳಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್, ಪಾಸ್‌ಪೋರ್ಟ್ ಮಾತ್ರವಲ್ಲದೆ, ಅವರ ಊರಿನ ಪೊಲೀಸರಿಂದ ಪ್ರಮಾಣಪತ್ರಗಳನ್ನು ಕೂಡ ಹೊಂದಿರುತ್ತಾರೆ. ಆದರೆ, ಅವುಗಳನ್ನು ಪರಿಗಣಿಸುತ್ತಿಲ್ಲ. ಇಂತಹ ಕಿರುಕುಳ ನಿಲ್ಲಬೇಕು” ಎಂದು ಒತ್ತಾಯಿಸಿದ್ದಾರೆ.
ಟಿಎಂಸಿ ಪ್ರತಿಭಟನಾ ವೇದಿಕೆ ತೆರವುಗೊಳಿಸಿದ ಸೇನೆ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ


