ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲ್ಪಟ್ಟ ಪಂಜಾಬ್ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಾಜ್ರಾ ಮಂಗಳವಾರ (ಸೆ.2) ಕರ್ನಾಲ್‌ನಲ್ಲಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸನೂರ್ ಕ್ಷೇತ್ರದ ಶಾಸಕರಾಗಿರುವ ಪಠಾಣಮಾಜ್ರಾ ಅವರನ್ನು ಸ್ಥಳೀಯ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಶಾಸಕ ಮತ್ತು ಅವರ ಸಹಾಯಕರು ಗುಂಡು ಹಾರಿಸಿದ್ದರಿಂದ ಒಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ವೇಳೆ ಪಠಾಣ್‌ಮಾಜ್ರಾ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಪರಾರಿಯಾಗಿದ್ದಾರೆ. ಅದಕ್ಕೂ ಮುನ್ನ ಮತ್ತೊಬ್ಬರು ಪೊಲೀಸ್ ಅಧಿಕಾರಿಯ ಮೇಲೆ ವಾಹನ ಹತ್ತಿಸಿದ್ದಾರೆ. ತಪ್ಪಿಸಿಕೊಳ್ಳಲು ಬಳಸಲಾದ ಫಾರ್ಚೂನರ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಶಾಸಕನನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ವರದಿಗಳು ಹೇಳಿವೆ.
ಪಠಾಣಮಾಜ್ರಾ ವಿರುದ್ಧ ಜಿರಾಕ್‌ಪುರದ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಬಳಿಕ ಅವರನ್ನು ಬಂಧಿಸಿದ್ದರು. ಶಾಸಕ ತನ್ನೊಂದಿಗೆ ಸಂಬಂಧ ಬೆಳೆಸುವ ಮೊದಲು ವಿಚ್ಛೇದಿತ ಎಂದು ಸುಳ್ಳು ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದರು. 2021ರಲ್ಲಿ ವಿವಾಹಿತರಾಗಿರುವಾಗಲೇ ಪಠಾಣಮಾಜ್ರಾ ತನ್ನನ್ನು ಮದುವೆಯಾಗಿದ್ದಾರೆ. ಆ ಬಳಿಕ ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ಅಶ್ಲೀಲ ವಸ್ತುಗಳನ್ನು ಕಳುಹಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಠಾಣಮಾಜ್ರಾ ವಿರುದ್ಧದ ಎಫ್‌ಐಆರ್‌ನಲ್ಲಿ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿವೆ.
ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಪಠಾಣಮಾಜ್ರಾ ಹೇಳಿದ್ದಾರೆ. ಎಫ್‌ಐಆರ್ ದಾಖಲಾದ ನಂತರ ಫೇಸ್‌ಬುಕ್ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಎಎಪಿಯ ದೆಹಲಿ ನಾಯಕತ್ವವು ‘ಪಂಜಾಬ್ ಅನ್ನು ಅಕ್ರಮವಾಗಿ ಆಳುತ್ತಿದೆ’. ಅದರ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ ಎಂದಿದ್ದಾರೆ.
“ಅವರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಬಹುದು, ನಾನು ಜೈಲು ಪಾಲಾಗಬಹುದು. ಆದರೆ, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ” ಎಂದು ಪಠಾಣಮಾಜ್ರಾ ಹೇಳಿದ್ದಾರೆ.
ಪಟಿಯಾಲದಲ್ಲಿ ಪ್ರವಾಹ ನಿರ್ವಹಣೆ ಕುರಿತು ಶಾಸಕ ಪಠಾಣಮಾಜ್ರಾ ಇತ್ತೀಚೆಗೆ ತಮ್ಮದೇ ಸರ್ಕಾರದೊಂದಿಗೆ ಜಟಾಪಟಿ ನಡೆಸಿದ್ದರು. ಟ್ಯಾಂಗ್ರಿಯಂತಹ ನದಿಗಳನ್ನು ಹೂಳೆತ್ತುವಂತೆ ಪದೇ ಪದೇ ಮಾಡಿದ ಮನವಿಗಳನ್ನು ಹಿರಿಯ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದಿದ್ದರು.
ಸರ್ಕಾರವನ್ನು ಟೀಕಿಸಿದ ಬಳಿಕ ತನ್ನ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಪ್ರತೀಕಾರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ಪಠಾಣಮಾಜ್ರಾ ಹೇಳಿಕೊಂಡಿದ್ದರು.
ಶೀಘ್ರದಲ್ಲೇ ಮತಗಳ್ಳತನ ಕುರಿತ ‘ಹೈಡ್ರೋಜನ್ ಬಾಂಬ್’ ಬರಲಿದೆ: ರಾಹುಲ್ ಗಾಂಧಿ


