ದೆಹಲಿ ಗಲಭೆಗೆ (2020) ‘ದೊಡ್ಡ ಮಟ್ಟದ ಪಿತೂರಿ’ ರೂಪಿಸಿದ ಆರೋಪ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರ ಏಳು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಸೆ.2) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ವಿಭಾಗೀಯ ಪೀಠವು ಜಾಮೀನು ನಿರಾಕರಿಸಿ ತೀರ್ಪು ಪ್ರಕಟಿಸಿದೆ.
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಅಥರ್ ಖಾನ್, ಖಾಲಿದ್ ಸೈಫಿ, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಶಾದಾಬ್ ಅಹ್ಮದ್ ಅವರು ಜಾಮೀನು ನಿರಾಕರಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆಯ ಸಮಯದಲ್ಲಿ, ಉಮರ್ ಖಾಲಿದ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ತ್ರಿದೀಪ್ ಪೈಸ್ “ಯಾವುದೇ ಸಂದೇಶವನ್ನು ಕಳುಹಿಸದೆ ಕೇವಲ ವಾಟ್ಸಾಪ್ ಗುಂಪುಗಳಲ್ಲಿ ಇರುವುದು ಅಪರಾಧವಲ್ಲ” ಎಂದು ವಾದಿಸಿದ್ದಾರೆ.
ಖಾಲಿದ್ ಅವರಿಂದ ಹಣ ಅಥವಾ ಇತರ ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. 2020ರ ಫೆಬ್ರವರಿ 23-24ರ ರಾತ್ರಿ ನಡೆದ ಸಭೆಯು ಪ್ರಾಸಿಕ್ಯೂಷನ್ ಹೇಳಿದಂತೆ ರಹಸ್ಯವಾಗಿರಲಿಲ್ಲ ಎಂದು ಪೈಸ್ ಹೇಳಿದ್ದಾರೆ.
ಖಾಲಿದ್ ಸೈಫಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ರೆಬೆಕ್ಕಾ ಜಾನ್ ಅವರು, “ನಿರುಪದ್ರವಿ’ ಸಂದೇಶಗಳ ಆಧಾರದ ಮೇಲೆ ಯುಎಪಿಎ ಅಥವಾ ಅವರ (ಪ್ರಾಸಿಕ್ಯೂಷನ್) ಅಂತಹ ಸಂದೇಶಗಳಿಂದ ಕಥೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದೇ, ಅದು ಜಾಮೀನು ನಿರಾಕರಿಸಲು ಒಂದು ಕಾರಣವಾಗಬಹುದೇ ಅಥವಾ ಯುಎಪಿಎ ಅಡಿಯಲ್ಲಿ ಮೊಕದ್ದಮೆ ಹೂಡಲು ಒಂದು ಕಾರಣವೇ?” ಎಂದು ವಾದಿಸಿದ್ದಾರೆ.
ಜೂನ್ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೂವರು ಸಹ-ಆರೋಪಿಗಳಂತೆಯೇ ಸೈಫಿ ಜಾಮೀನಿನ ಮೇಲೆ ಬಿಡುಗಡೆಗೆ ಅರ್ಹರು ಎಂದು ಹೇಳಿದ್ದಾರೆ.
ಶಾರ್ಜೀಲ್ ಇಮಾಮ್ ಅವರು ಎಲ್ಲಾ ಸಹ-ಆರೋಪಿಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದರು. ದೆಹಲಿ ಪೊಲೀಸರು ಆರೋಪಿಸಿದಂತೆ ಅವರು ಯಾವುದೇ ರೀತಿಯ ಪಿತೂರಿ ಸಭೆಗಳ ಭಾಗವಾಗಿರಲಿಲ್ಲ ಎಂದು ಶಾರ್ಜೀಲ್ ಪರ ವಕೀಲ ತಾಲಿಬ್ ಮುಸ್ತಫಾ ವಾದಿಸಿದ್ದಾರೆ.
ಇಮಾಮ್ ಗಲಭೆಯ ಹಿಂದಿನ ಪಿತೂರಿಯ ಭಾಗವಾಗಿದ್ದರು ಎಂದು ಜನವರಿ 23, 2023ರವರೆಗೆ ಪ್ರಾಸಿಕ್ಯೂಷನ್ ಹೇಳಿಕೊಂಡು ಬಂದಿತ್ತು. ಆದರೆ, ಕೊನೆಗೆ ಇಮಾಮ್ ಬಿಹಾರದಲ್ಲಿ ಮಾಡಿದ ಒಂದು ಭಾಷಣವನ್ನು ಮುಂದಿಟ್ಟು ಪೊಲೀಸರು ಆರೋಪ ಮಾಡಿದ್ದಾರೆ ಎಂದು ತಾಲಿಬ್ ಮುಸ್ತಫಾ ಹೇಳಿದ್ದಾರೆ.
ದೆಹಲಿ ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ, ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದು, “ಆರೋಪಿಗಳು ರಾಷ್ಟ್ರ ವಿರೋಧಿ ಕೃತ್ಯವೆಸಗಿರುವ ಆರೋಪ ಇರುವುದರಿಂದ ಅವರು ಖುಲಾಸೆಗೊಳ್ಳುವವರೆಗೆ ಅಥವಾ ಶಿಕ್ಷೆಗೊಳಗಾಗುವವರೆಗೆ ಜೈಲಿನಲ್ಲಿರುವುದು ಉತ್ತಮ” ಎಂದಿದ್ದಾರೆ.
“ಹೆಚ್ಚಿನ ಗಲಭೆ ಮತ್ತು ಬೆಂಕಿ ಹಚ್ಚುವಿಕೆಗೆ ನಿರ್ದಿಷ್ಟ ದಿನವನ್ನು ಆಯ್ಕೆ ಮಾಡುವ ಮೂಲಕ ಜಾಗತಿಕವಾಗಿ ರಾಷ್ಟ್ರದ ಹೆಸರು ಕೆಡಿಸುವುದು ಆರೋಪಿಗಳ ಉದ್ದೇಶವಾಗಿತ್ತು” ಎಂದು ಮೆಹ್ತಾ ಆರೋಪಿಸಿದ್ದಾರೆ.
ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಕೂಡ ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ್ದರು.
ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ಇನ್ನೊಂದು ಸಮನ್ವಯ ಪೀಠವು ಆರೋಪಿ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ.
ತಸ್ಲೀಮ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಮೆಹಮೂದ್ ಪ್ರಾಚಾ ಅವರು, ವಿಚಾರಣೆ ವಿಳಂಬವನ್ನು ಉಲ್ಲೇಖಿಸಿ ಜಾಮೀನು ನೀಡುವಂತೆ ಕೋರಿದ್ದರು.
2020ರಲ್ಲಿ ದೆಹಲಿ ಪೊಲೀಸರ ವಿಶೇಷ ವಿಭಾಗವು ಭಾರತೀಯ ದಂಡ ಸಂಹಿತೆ, 1860 (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967ರ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಸಂಖ್ಯೆ 59 ಅನ್ನು ದಾಖಲಿಸಿತ್ತು.
ಈ ಪ್ರಕರಣದಲ್ಲಿ ತಾಹಿರ್ ಹುಸೇನ್, ಉಮರ್ ಖಾಲಿದ್, ಖಾಲಿದ್ ಸೈಫಿ, ಇಶಾರತ್ ಜಹಾನ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ, ಶಿಫಾ-ಉರ್-ರೆಹಮಾನ್, ಆಸಿಫ್ ಇಕ್ಬಾಲ್ ತನ್ಹಾ, ಶಾದಾಬ್ ಅಹಮದ್, ತಸ್ಲೀಮ್ ಅಹಮದ್, ಸಲೀಂ ಮಲಿಕ್, ಮೊಹಮ್ಮದ್ ಸಲೀಮ್ ಖಾನ್, ಅಥರ್ ಖಾನ್, ಸಫೂರ ಝರ್ಗರ್, ಶಾರ್ಜೀಲ್ ಇಮಾಮ್, ಫೈಝಾನ್ ಖಾನ್ ಮತ್ತು ನತಾಶಾ ನರ್ವಾಲ್ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.
ಈ ಪೈಕಿ ಆಸಿಫ್ ಇಕ್ಬಾಲ್ ತನ್ಹಾ, ನತಾಶಾ ನರ್ವಾಲ್ ಮತ್ತು ಸಫೂರ ಝರ್ಗರ್ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ.
ಅಲ್ಪಸಂಖ್ಯಾತ ಶಾಲೆಗಳು ಮತ್ತು ಆರ್‌ಟಿಇ: 2014ರ ತೀರ್ಪಿನ ಕುರಿತು ವಿಸ್ತೃತ ಪೀಠದ ಪರಿಶೀಲನೆ ಕೋರಿದ ಸುಪ್ರೀಂ ಕೋರ್ಟ್


