ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಗುರುವಾರ (ಸೆ.4) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಕಳೆದ 7 ರಿಂದ 8 ತಿಂಗಳುಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆಯಲ್ಲಿ ಬಂದ ವರದಿಯ ಆಧಾರದ ಮೇಲೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಕ್ರಮ ಕೈಗೊಂಡಿದೆ.
“ದೈನಿಕ್ ಭಾಸ್ಕರ್ ವರದಿಯ ಆಧಾರದ ಮೇಲೆ ಕಳೆದ 7-8 ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂದು ತಿಳಿದು ಬಂದಿರುವುದರಿಂದ ‘ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳ ಕೊರತೆ’ ಎಂಬ ಶೀರ್ಷಿಕೆಯಡಿಯಲ್ಲಿ ನಾವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲು ನಿರ್ದೇಶಿಸುತ್ತಿದ್ದೇವೆ” ಎಂದು ನ್ಯಾಯಾಲಯ ತಿಳಿಸಿದೆ.
2020ರಲ್ಲಿ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್, ಕೆ.ಎಂ ಜೋಸೆಫ್ ಮತ್ತು ಅನಿರುದ್ಧ ಬೋಸ್ ಅವರ ಪೀಠವು ನೀಡಿದ ಮಹತ್ವದ ತೀರ್ಪಿನಲ್ಲಿ, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು.
ಆ ತೀರ್ಪಿನಲ್ಲಿ, ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ದೇಶದಾದ್ಯಂತ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ರಾತ್ರಿ ದೃಷ್ಟಿ ಕ್ಯಾಮರಾಗಳೊಂದಿಗೆ ಸಿಸಿಟಿವಿಗಳನ್ನು ಅಳವಡಿಸಲು ಆದೇಶಿಸಿತ್ತು.
ಕೇಂದ್ರೀಯ ತನಿಖಾ ದಳ (ಸಿಬಿಐ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ), ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ), ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಮತ್ತು ಜನರ ವಿಚಾರಣೆ ನಡೆಸುವ ಯಾವುದೇ ಕೇಂದ್ರೀಯ ಸಂಸ್ಥೆ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆಯೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ತನ್ನ ಆದೇಶದಂತೆ ಅಳವಡಿಸಲಾದ ಸಿಸಿಟಿವಿ ವ್ಯವಸ್ಥೆಗಳು ‘ರಾತ್ರಿ ದೃಷ್ಟಿಯನ್ನು ಹೊಂದಿರಬೇಕು ಮತ್ತು ಅಗತ್ಯವಾಗಿ ಆಡಿಯೋ ಮತ್ತು ವಿಡಿಯೋ ದೃಶ್ಯಗಳನ್ನು ಒಳಗೊಂಡಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ವಿದ್ಯುತ್ ಮತ್ತು/ಅಥವಾ ಇಂಟರ್ನೆಟ್ ಇಲ್ಲದ ಪ್ರದೇಶಗಳಲ್ಲಿ, ಸೌರ/ಪವನ ವಿದ್ಯುತ್ ಸೇರಿದಂತೆ ಯಾವುದೇ ವಿದ್ಯುತ್ ಒದಗಿಸುವ ವಿಧಾನವನ್ನು ಬಳಸಿಕೊಂಡು ಸಾಧ್ಯವಾದಷ್ಟು ಬೇಗ ಅದನ್ನು ಸಿಸಿಟಿವಿ ಅಳವಡಿಸುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಾಲಯವು ತಿಳಿಸಿತ್ತು.
ಪೊಲೀಸ್ ಠಾಣೆಯಲ್ಲಿ ಗಂಭೀರ ಗಾಯ ಅಥವಾ ಕಸ್ಟಡಿ ಸಾವಿನ ಘಟನೆ ನಡೆದಾಗ, ವ್ಯಕ್ತಿಯು ಮಾನವ ಹಕ್ಕುಗಳ ನ್ಯಾಯಾಲಯಗಳಿಗೆ ದೂರು ನೀಡಬಹುದು. ನಂತರ, ನ್ಯಾಯಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿಡಲು ಸೂಚಿಸಬಹುದು. ಮಾನವ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಿಸಿಟಿವಿ ದೃಶ್ಯಗಳು ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.
ನ್ಯಾಯಾಲಯದ ಈ ನಿರ್ದೇಶನಗಳ ಹೊರತಾಗಿಯೂ, ಕಸ್ಟಡಿ ಹಿಂಸೆ/ಸಾವಿನಂತಹ ಘಟನೆಗಳು ನಡೆದಾಗ ಸಿಸಿಟಿವಿ ದೃಶ್ಯಗಳನ್ನು ಕೇಳಿದಾಗ, ಅವು ಕಾಣೆಯಾಗಿವೆ ಅಥವಾ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂಬ ಸಬೂಬುಗಳನ್ನು ಪೊಲೀಸರು ನೀಡುತ್ತಿರುವುದು ಹೆಚ್ಚಾಗುತ್ತಿದೆ. ಹಾಗಾಗಿ, ಸಿಸಿಟಿವಿಯ ವಿಚಾರವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.


