ಧರ್ಮಸ್ಥಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಬಿಜೆಪಿಯಿಂದ ಹೆಚ್ಚುತ್ತಿರುವ ಒತ್ತಡದ ಮಧ್ಯೆ, “ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ, ಎನ್‌ಐಎ ಅಗತ್ಯವಿಲ್ಲ” ಎಂದು ಗೃಹ ಸಚಿವ ಜಿ.ಪರಮೇಶ್ವರ ಗುರುವಾರ ಹೇಳಿದ್ದಾರೆ.
“ನಾವು ಧರ್ಮಸ್ಥಳ ಪ್ರಕರಣ ತನಿಖೆಗಾಗಿ ಎಸ್‌ಐಟಿ ರಚಿಸಿದ್ದೇವೆ. ಈ ಹಿಂದೆ, ಅವರು ಎಸ್‌ಐಟಿ ತನಿಖೆಯೇ ಸರಿಯಾಗಿಲ್ಲ ಎಂದು ಹೇಳುತ್ತಿದ್ದರು. ಈಗ ಅವರು ಈ ವಿಷಯವನ್ನು ಎನ್‌ಐಎಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ; ಈಗ ನಡೆಯುತ್ತಿರುವುದೂ ಕೂಡ ತನಿಖೆಯಲ್ಲವೇ” ಎಂದು ಅವರು ಸುದ್ದಿಗಾರರನ್ನು ಕೇಳಿದರು.
ವಿದೇಶಿ ನಿಧಿಯ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಕೇಂದ್ರ ಸರ್ಕಾರದ ತನಿಖಾ ತಂಡ ಪರಿಶೀಲಿಸಬಹುದು. ಸ್ವಾಭಾವಿಕವಾಗಿ, ಕೇಂದ್ರ ಸರ್ಕಾರವು ಆ ಅಂಶವನ್ನು ತನಿಖೆ ಮಾಡಬೇಕು. ಏಕೆಂದರೆ, ರಾಜ್ಯ ಸರ್ಕಾರ ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಉದಯ್ ಜೈನ್‌ರಂತಹ ವ್ಯಕ್ತಿಗಳಿಗೆ ಸಮನ್ಸ್ ನೀಡಿವುದು ಸೇರಿದಂತೆ ಎಲ್ಲ ಕೋನಗಳಲ್ಲಿ, ತಾವು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. 2012 ರಲ್ಲಿ ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ ಸೌಜನ್ಯ ಪ್ರಕರಣದ ‘ಮರುತನಿಖೆ’ಯ ಹೇಳಿಕೆಗಳನ್ನು ನಿರಾಕರಿಸಿದ ಅವರು, “ನಾನು ಅದನ್ನು ಮರುತನಿಖೆ ಎಂದು ಕರೆಯುವುದಿಲ್ಲ. ಅವರು (ಎಸ್‌ಐಟಿ) ಯಾವ ಉದ್ದೇಶ ಮತ್ತು ಲಿಂಕ್‌ನೊಂದಿಗೆ ತನಿಖೆ ನಡೆಸುತ್ತಿದ್ದಾರೆಂದು ನಮಗೆ ತಿಳಿಯುತ್ತದೆ” ಎಂದು ಹೇಳಿದರು.
ಎನ್‌ಐಎ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರೆ ಕರ್ನಾಟಕ ಸಹಕರಿಸುತ್ತದೆಯೇ ಎಂದು ಕೇಳಿದಾಗ, “ಎನ್‌ಐಎ ಅದನ್ನು ಏಕೆ ತನಿಖೆ ಮಾಡಲು ಬಯಸುತ್ತದೆ ಎಂಬುದನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಅವರು ಅದನ್ನು ಸಮರ್ಥಿಸಿಕೊಂಡರೆ ರಾಜ್ಯ ಸರ್ಕಾರಕ್ಕೆ ಯಾವುದೇ ಆಯ್ಕೆಗಳಿರುವುದಿಲ್ಲ” ಎಂದು ಉತ್ತರಿಸಿದರು.
ಧರ್ಮಸ್ಥಳಕ್ಕೆ ರಾಜಕೀಯ ಮೆರವಣಿಗೆಗಳ ಕುರಿತು ಮಾತನಾಡಿದ ಪರಮೇಶ್ವರ್, ದೇವಸ್ಥಾನಕ್ಕೆ ಭೇಟಿ ನೀಡುವ ಪಕ್ಷಗಳಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಸಮಯದ ಹಿಂದೆ ರಾಜಕೀಯವಿದೆ ಎಂದು ಆರೋಪಿಸಿದರು. “ಮಂಜುನಾಥ ಸ್ವಾಮಿ ಯಾವುದೇ ವ್ಯಕ್ತಿಗೆ ಸೇರಿದವರಲ್ಲ. ಧರ್ಮಸ್ಥಳ ವಿಷಯ ಬೆಳಕಿಗೆ ಬಂದ ನಂತರ ಅವರು (ಬಿಜೆಪಿ) ಅಲ್ಲಿಗೆ ಏಕೆ ಹೋದರು ಎಂಬುದನ್ನು ಮಾತ್ರ ನಾವು ಪ್ರಶ್ನಿಸುತ್ತಿದ್ದೇವೆ. ಅದರ ಹಿಂದೆ ರಾಜಕೀಯವಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿಗೆ ಪ್ರತಿಕ್ರಿಯೆಯಾಗಿ ಮಾತ್ರ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಮೆರವಣಿಗೆ ನಡೆಸಿದರು” ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ನೂರಾರು ಕೊಲೆಗಳು, ಅಕ್ರಮವಾಗಿ ಹೂತಿಟ್ಟ ಆರೋಪಗಳ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕೆಂದು ಹಲವು ಮಠಾಧೀಶರು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಸುಳ್ಳು ಆರೋಪದ ಮೇಲೆ ಇದೀಗ ಬಂಧಿಸಲ್ಪಟ್ಟ ದೂರುದಾರ ಸಿ.ಎನ್. ಚಿನ್ನಯ್ಯ, ಲೈಂಗಿಕ ದೌರ್ಜನ್ಯದ ಗುರುತುಗಳನ್ನು ಹೊಂದಿರುವ ಮಹಿಳೆಯರ ಶವಗಳು ಸೇರಿದಂತೆ ಹಲವಾರು ಶವಗಳನ್ನು ಧರ್ಮಸ್ಥಳದಲ್ಲಿ ದೀರ್ಘಕಾಲದವರೆಗೆ ಹೂಳಲಾಗಿದೆ ಎಂದು ಆರೋಪಿಸಿದ ನಂತರ ವಿವಾದ ಭುಗಿಲೆದ್ದಿತು. ದೇವಾಲಯವನ್ನು ಗುರಿಯಾಗಿಸಿಕೊಂಡಿದ್ದಾಗಿ ಬಿಜೆಪಿ ಕರೆದಿದ್ದರ ವಿರುದ್ಧ ಪ್ರತಿಭಟಿಸಿತ್ತು. ಆದರೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದರು.
‘ಸೌಜನ್ಯ ತಾಯಿ ಹೇಳಿದ ನೈಜ ಸಂಗತಿ ಜಗತ್ತಿಗೆ ತಿಳಿಸುವ ಧೈರ್ಯವಿದೆಯೇ..?’; ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಸವಾಲು


