ಉಪರಾಷ್ಟ್ರಪತಿ ಚುನಾವಣೆಯಲ್ಲೂ ಬಿಜೆಪಿ ‘ಮತಗಳ್ಳತನ’ ಮಾಡಿದೆ ಎಂದು ಕಾಂಗ್ರೆಸ್ ಸಂಸದ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿರುವ ಮಾಣಿಕಂ ಟ್ಯಾಗೋರ್ ಆರೋಪಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನದ ಊಹಾಪೋಹಗಳು ಹರಡಿದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಎರಡೂ ಸದನಗಳಲ್ಲಿರುವ ತನ್ನ ಸಾಮೂಹಿಕ ಸಾಮರ್ಥ್ಯಕ್ಕಿಂತ ಕಡಿಮೆ ಮತ ಪಡೆಯುವಂತಾಗಲು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಶಿವಸೇನೆ (ಉದ್ಧವ್ ಬಣ) ಹಾಗೂ ಎಎಪಿಯ ಕೆಲ ಸಂಸದರು ಎನ್‌ಡಿಎ ಅಭ್ಯರ್ಥಿ ಪರ ಮತ ಚಲಾಯಿಸಿರುವುದು ಕಾರಣ ಎಂಬ ಅನುಮಾನಗಳು ವ್ಯಕ್ತವಾಗಿದೆ. ಈ ಬೆನ್ನಿಗೇ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ ಎಂಬ ಗಂಭೀರ ಆರೋಪವನ್ನು ಮಾಣಿಕಂ ಟ್ಯಾಗೋರ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಅಭ್ಯರ್ಥಿ ಪರ ಬಿದ್ದ ಮತಗಳ ಸಂಖ್ಯೆ ಹೇಗೆ ಕಡಿಮೆ ಆದವು ಎಂಬುದರ ಕುರಿತು ವಿಪಕ್ಷಗಳ ನಾಯಕರು ಅನೌಪಚಾರಿಕ ತನಿಖೆಗಳನ್ನು ಪ್ರಾರಂಭಿಸಿದ್ದಾರೆ. ಅವರ ಸ್ವಂತ ಅಂದಾಜಿನ ಪ್ರಕಾರ, ಬಹುತೇಕ ಪರಿಪೂರ್ಣ ಹಾಜರಾತಿಯನ್ನು ಹೊಂದಿದ್ದರೂ, ಇಂಡಿಯಾ ಅಭ್ಯರ್ಥಿಯು ಅಂದಾಜು ಮಾಡಿದ ಸಂಖ್ಯೆಗಿಂತ ಕನಿಷ್ಠ 15 ಮತಗಳನ್ನು ಕಡಿಮೆ ಪಡೆದಿದ್ದಾರೆ. ಒಂದು ಅಂದಾಜಿನ ಪ್ರಕಾರ, ಆರು ಪಕ್ಷಗಳ ಸದಸ್ಯರು ಅಡ್ಡ-ಮತದಾನ ಮಾಡಿದ್ದಾರೆ ಅಥವಾ ಅವರ ಮತಗಳು ಅಮಾನ್ಯಗೊಂಡಿವೆ.
“ಎನ್‌ಡಿಎ ಅಭ್ಯರ್ಥಿಗೆ ಅವರ ಸಂಖ್ಯಾಬಲಕ್ಕಿಂತ ಹೆಚ್ಚು ಮತಗಳು ಹೇಗೆ ಬಿದ್ದವು ಎಂಬುದರ ಕುರಿತು ನಾವು ಮಾತನಾಡುವುದಿಲ್ಲ. ನಮಗೆ ದೊರೆತ 300 ಮತಗಳನ್ನು ನಾವು ವಿಶ್ಲೇಷಿಸಿದ್ದೇವೆ. ಮೂರು ಶಿವಸೇನೆ (ಯುಬಿಟಿ) ಮತಗಳು, ನಾಲ್ಕು ಆಮ್ ಆದ್ಮಿ ಪಕ್ಷದ (ಎಎಪಿ) ಮತಗಳು, ಎರಡು ಎನ್‌ಸಿಪಿ (ಶರದ್ ಪವಾರ್) ಮತಗಳು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಒಂದು ಅಥವಾ ಎರಡು ಮತಗಳು ನಮಗೆ ಲೆಕ್ಕಕ್ಕೆ ಸಿಕ್ಕಿಲ್ಲ. ಈ ಮತಗಳು ಅಮಾನ್ಯಗೊಂಡಿವೆಯೇ? ಇಲ್ಲ, ಸಂಸದರು ಎನ್‌ಡಿಎ ಅಭ್ಯರ್ಥಿ ಪರ ಮತಚಲಾಯಿಸಿದ್ದಾರೆಯೇ? ಎಂಬುವುದನ್ನು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಒಂದು ಮತ ಮತ್ತು ಸಮಾಜವಾದಿ ಪಕ್ಷಕ್ಕೆ ಎರಡು ಮತಗಳ ಲೆಕ್ಕ ಸಿಕ್ಕಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ವಿರೋಧ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಈ ಕುರಿತು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್, “ಶಿವಸೇನೆಯ ಸಂಸದ ಶ್ರೀಕಾಂತ್ ಶಿಂದೆಯೇಕೆ ಇಂಡಿಯಾ ಸಂಸದರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ? ಸಚಿವ ಕಿರಣ್ ರಿಜಿಜು ಏಕೆ ವಿರೋಧ ಪಕ್ಷಗಳ ಆತ್ಮಸಾಕ್ಷಿಯ ಮತದಾನವನ್ನು ಸಂಭ್ರಮಿಸುತ್ತಿದ್ದಾರೆ? ಇದು ನಿಜಕ್ಕೂ ಆತ್ಮಸಾಕ್ಷಿಯದ್ದೆ? ಅಥವಾ ಸಿಬಿಐ/ಈಡಿ ಒತ್ತಡ ಹಾಗೂ ಕುದುರೆ ವ್ಯಾಪಾರವನ್ನು ಆತ್ಮಸಾಕ್ಷಿ ಎಂದು ಸಮರ್ಥಿಸಿಕೊಳ್ಳಾಲಾಗುತ್ತಿದೆಯೆ?” ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ಮತಗಳು ಎನ್‌ಡಿಎಗೆ ಹೋಗಿವೆ ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿರುವಾಗ, ಇದು ಸಂಸತ್ತಿನೊಳಗೆ ‘ಮತಗಳ್ಳತನ’ ನಡೆದಿದೆ ಎಂಬುವುದಕ್ಕೆ ಪುರಾವೆಯಲ್ಲವೇ ಟ್ಯಾಗೋರ್ ಕೇಳಿದ್ದಾರೆ.
“ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಆಧಾರ್ ಲಿಂಕ್ ಮಾಡಲಾದ ಮತದಾರರ ನಿಗ್ರಹದಿಂದ, ಈಗ ಉಪರಾಷ್ಟ್ರಪತಿ ಚುನಾವಣೆಗಳವರೆಗೆ. ಮೋದಿ-ಶಾ ಮಾದರಿ ಎಂದರೆ ಕೇವಲ ಮತಗಳ್ಳತನ ಮೂಲಕ ಗೆಲ್ಲುವುದೇ? ಸಚಿವರು ಜನಾದೇಶವನ್ನು ಗೌರವಿಸುವ ಬದಲು ಮತಗಳನ್ನು ಕದಿಯುವ ಬಗ್ಗೆ ಹೆಮ್ಮೆಪಡುತ್ತಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಅಥವಾ 2029ರಲ್ಲಿ ಬಿಜೆಪಿಯ ಮತಗಳ್ಳತನ ರಾಜಕೀಯಕ್ಕೆ ಜನರು ಉತ್ತರಿಸುತ್ತಾರೆಯೇ?” ಎಂದು ಟ್ಯಾಗೋರ್ ಪ್ರಶ್ನಿಸಿದ್ದಾರೆ.
ಬಿಹಾರದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ಪರಿಷ್ಕರಣೆಗೆ ಮುಂದಾದ ಚು.ಆಯೋಗ


