ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ನಿಯೋಜಿಸಿದ ಸ್ವತಂತ್ರ ತಜ್ಞರ ತಂಡವು ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿದ್ದು, ಮಂಗಳವಾರ (ಸೆ.16) ಈ ಕುರಿತು ವರದಿ ಬಿಡುಗಡೆ ಮಾಡಿದೆ. ಅಂತಾರಾಷ್ಟ್ರೀಯ ಸಮುದಾಯವು ನರಮೇಧವನ್ನು ಕೊನೆಗೊಳಿಸಬೇಕು ಮತ್ತು ಅದಕ್ಕೆ ಕಾರಣರಾದವರನ್ನು ಶಿಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಗಾಝಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ತನ್ನ ಯುದ್ಧವನ್ನು ಮುಂದುವರೆಸುತ್ತಿರುವಾಗ, ಹತ್ತಾರು ಸಾವಿರ ಜನರನ್ನು ಕೊಂದಿರುವಾಗ, ಮೂವರು ಸದಸ್ಯರ ತಂಡದಿಂದ ಆಳವಾಗಿ ದಾಖಲಿಸಲ್ಪಟ್ಟ ವಿಷಯಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಆರೋಪಗಳು ಇತ್ತೀಚಿನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ನಾಲ್ಕು ವರ್ಷಗಳ ಹಿಂದೆ ರಚಿಸಲಾದ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಮತ್ತು ಇಸ್ರೇಲ್ ಕುರಿತ ತಜ್ಞರ ತಂಡ, ಅಕ್ಟೋಬರ್ 7,2023ರಂದು ಹಮಾಸ್ ನೇತೃತ್ವದಲ್ಲಿ ಇಸ್ರೇಲ್ ಮತ್ತು ಇತರ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ನಡೆದ ದಾಳಿಯ ನಂತರ ಗಾಝಾದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಪದೇ ಪದೇ ದಾಖಲಿಸಿದೆ.
ಇಸ್ರೇಲ್ ವಿರುದ್ದದ ಆರೋಪಗಳು ಮತ್ತು ಗಾಝಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯಗಳನ್ನು ಆಧರಿಸಿ ತಜ್ಞರ ತಂಡವಾಗಲಿ ಅಥವಾ ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ 47 ಸದಸ್ಯ ರಾಷ್ಟ್ರಗಳ ಮಂಡಳಿಯಾಗಲಿ ಯಾವುದೇ ದೇಶದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವಾದರೂ, ಈ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅಥವಾ ಯುಎನ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್‌ಗಳು ಬಳಸಬಹುದು ಎಂದು ವರದಿಗಳು ಅಭಿಪ್ರಾಯಪಟ್ಟಿವೆ.
ಈ ವರದಿಯು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮುಖ್ಯಸ್ಥೆ ನವಿ ಪಿಳ್ಳೆ ನೇತೃತ್ವದ ತಂಡದ ಅಂತಿಮ ಸಂದೇಶವಾಗಿದೆ. ಅದರ, ಮೂವರು ಸದಸ್ಯರು ಜುಲೈನಲ್ಲಿ ವೈಯಕ್ತಿಕ ಕಾರಣಗಳು ಮತ್ತು ಬದಲಾವಣೆಯ ಅಗತ್ಯವನ್ನು ಉಲ್ಲೇಖಿಸಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಈ ತಂಡವನ್ನು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಸಂಸ್ಥೆಯಾದ ಮಾನವ ಹಕ್ಕುಗಳ ಮಂಡಳಿಯು ನಿಯೋಜಿಸಿತ್ತು. ಆದರೆ, ಅದು ವಿಶ್ವಸಂಸ್ಥೆಯ ಪರವಾಗಿ ಮಾತನಾಡಲು ಅಲ್ಲ.
ಇಸ್ರೇಲ್ ಈ ತಂಡದೊಂದಿಗೆ ಸಹಕರಿಸಲು ನಿರಾಕರಿಸಿದೆ ಮತ್ತು ವಿಶ್ವಸಂಸ್ಥೆಯ ಮಾನವ ಮಂಡಳಿ ಸಮಿತಿ ಇಸ್ರೇಲ್ ವಿರೋಧಿ ಪಕ್ಷಪಾತವನ್ನು ಹೊಂದಿದೆ ಎಂದು ಆರೋಪಿಸಿದೆ. ಈ ವರ್ಷದ ಆರಂಭದಲ್ಲಿ, ಇಸ್ರೇಲ್‌ನ ಪ್ರಮುಖ ಮಿತ್ರ ರಾಷ್ಟ್ರವಾದ ಅಮೆರಿಕ ಮಾನವ ಹಕ್ಕುಗಳ ಮಂಡಳಿಯಿಂದ ಹೊರನಡೆದಿತ್ತು.
ಎರಡನೇ ಮಹಾಯುದ್ಧ ಮತ್ತು ಹತ್ಯಾಕಾಂಡ ಅಂತ್ಯಗೊಂಡ ಮೂರು ವರ್ಷಗಳ ನಂತರ, ಅಂದರೆ, 1948 ರಲ್ಲಿ ನಡೆದ, ಆಡುಮಾತಿನಲ್ಲಿ ‘ಜನಾಂಗೀಯ ಹತ್ಯೆ ಸಮಾವೇಶ’ ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ಸಮಾವೇಶದಡಿಯಲ್ಲಿ ವ್ಯಾಖ್ಯಾನಿಸಲಾದ ಐದು ‘ಜನಾಂಗೀಯ ಹತ್ಯೆ ಕೃತ್ಯಗಳಲ್ಲಿ’ ನಾಲ್ಕನ್ನು ಇಸ್ರೇಲ್ ಮಾಡಿದೆ ಎಂದು ತಜ್ಞರ ತಂಡ ಹೇಳಿದೆ.
“ಗಾಝಾದಲ್ಲಿ ನಡೆದ ನರಮೇಧಕ್ಕೆ ಇಸ್ರೇಲ್ ಕಾರಣ ಎಂದು ತಂಡವು ಕಂಡುಕೊಂಡಿದೆ” ಎಂದು ತಂಡದ ಅಧ್ಯಕ್ಷೆ ಪಿಳ್ಳೈ ತಿಳಿಸಿದ್ದಾರೆ. ‘ಜನಾಂಗೀಯ ಹತ್ಯೆ ಸಮಾವೇಶ’ದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಕೃತ್ಯಗಳ ಮೂಲಕ ಗಾಝಾದಲ್ಲಿರುವ ಪ್ಯಾಲೆಸ್ತೀನಿಯರನ್ನು ನಾಶಮಾಡುವ ಉದ್ದೇಶ ಇಸ್ರೇಲ್‌ಗೆ ಇದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಪ್ಯಾಲೆಸ್ತೀನ್ ಪರ ವಿಶ್ವ ಸಂಸ್ಥೆ ನಿರ್ಣಯ: ಭಾರತ ಸೇರಿದಂತೆ 142 ರಾಷ್ಟ್ರಗಳ ಬೆಂಬಲ


