ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹಿರಾ ಲಾಲ್ ನವಾಬ್‌ಗಂಜ್ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಕಸ್ಟಡಿ ಚಿತ್ರಹಿಂಸೆಯಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಆದರೆ, ಅವರಿಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಧಿವಕ್ತ ಮಂಚ್ ಮತ್ತು ಇತರ ಇಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಸಂತೋಷ್ ರೈ ಅವರ ವಿಭಾಗೀಯ ಪೀಠವು, ಬುಧವಾರ ಈ ಅರ್ಜಿಯನ್ನು ಸೂಕ್ತ ನ್ಯಾಯಾಲಯದ ಮುಂದೆ ಮುಂದಿನ ವಿಚಾರಣೆಗಾಗಿ ಅಕ್ಟೋಬರ್ 10 ರಂದು ಇಡುವಂತೆ ಆದೇಶಿಸಿದೆ. ಮೃತರ ಕುಟುಂಬ ಸದಸ್ಯರಿಗೆ ₹25 ಲಕ್ಷ ಪರಿಹಾರವನ್ನು ಅರ್ಜಿದಾರರು ಕೋರಿದ್ದಾರೆ.
ಅರ್ಜಿಯ ಪ್ರಕಾರ, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27 ರಂದು ಬುಡೌನಾದ ನರೇಪರ್ ಗ್ರಾಮದಲ್ಲಿರುವ ಅವರ ಮನೆಯಿಂದ ಕಾರ್ಮಿಕ ಹೀರಾ ಲಾಲ್ ಅವರನ್ನು ಪೊಲೀಸ್ ತಂಡ ಕರೆದೊಯ್ದಿದೆ.
ಹೀರಾ ಲಾಲ್ ಅವರನ್ನು ಭೇಟಿ ಮಾಡಲು ಅವರ ಕುಟುಂಬದ ಯಾರಿಗೂ ಅವಕಾಶ ನೀಡಲಾಗಿಲ್ಲ, ನಂತರ ಪೊಲೀಸರು ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ಆರೋಪಿಸಲಾಗಿದೆ. ನಂತರ ಕುಟುಂಬ ಸದಸ್ಯರನ್ನು ಮರಣೋತ್ತರ ಪರೀಕ್ಷೆ ಕೊಠಡಿಗೆ ತೆರಳುವಂತೆ ಸೂಚಿಲಾಯಿತು.
ಹೀರಾ ಲಾಲ್ ಅವರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿಲ್ಲ, ಇಲ್ಲಿನ ದಾರಗಂಜ್ ಘಾಟ್‌ನಲ್ಲಿ ಪೊಲೀಸರೇ ಸುಟ್ಟುಹಾಕಿದರು ಎಂದು ಪಿಐಎಲ್‌ನಲ್ಲಿ ಮತ್ತಷ್ಟು ಆರೋಪಿಸಲಾಗಿದೆ.
“ಇದು ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸರು ನಡೆಸಿದ ಕ್ರೂರ ಕಸ್ಟಡಿ ಸಾವು ಮತ್ತು ಕೊಲೆಯ ವಿಷಯವಾಗಿದೆ. ಇದು ಭಾರತದ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಹೀರಾ ಲಾಲ್ ಅವರ ಅಕ್ರಮ ಬಂಧನ, ಕಸ್ಟಡಿ ಹಿಂಸೆ ಮತ್ತು ಸಾವನ್ನಪ್ಪಿದ ಪ್ರಕರಣದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಮಿತಿಯನ್ನು ಅದು ಕೋರಿದೆ.
“ನಿರ್ದಿಷ್ಟ ಸಮಯದೊಳಗೆ ವರದಿಯನ್ನು ಸಲ್ಲಿಸಲು ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು” ಎಂದು ಮನವಿ ಮಾಡಲಾಗಿದೆ.
ಉತ್ತರ ಪ್ರದೇಶ| ಮನೆ ಮುಂದೆ ಮದ್ಯಪಾನ ಮಾಡದಂತೆ ವಿರೋಧಿಸಿದ ದಲಿತ ವ್ಯಕ್ತಿಯ ಕೈ ಕತ್ತರಿಸಿದ ಗುಂಪು


