ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ‘ಜಾತಿ ಸಮೀಕ್ಷೆ’ಯು ಸೆಪ್ಟೆಂಬರ್ 22 ರಂದು ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಸಮೀಕ್ಷೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಸಮೀಕ್ಷೆಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಉಂಟಾಗಿರುವ ಗೊಂದಲಗಳು ಮತ್ತು ಸಮೀಕ್ಷೆ ಮುಂದೂಡುವ ವದಂತಿಗಳ ಬಗ್ಗೆ ಉತ್ತರಿಸಿದರು. ಹಿಂದುಳಿದ ವರ್ಗಗಳ ಆಯೋಗವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದಕ್ಕೆ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಮೀಕ್ಷೆಯ ಕುರಿತು ಸರ್ಕಾರದ ಅಭಿಪ್ರಾಯಗಳನ್ನು ಆಯೋಗಕ್ಕೆ ತಿಳಿಸಲಾಗಿದ್ದು, ಅಂತಿಮ ನಿರ್ಧಾರವನ್ನು ಆಯೋಗವೇ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಸಮೀಕ್ಷೆಯ ವಿಷಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಈ ಸುಳ್ಳು ಆರೋಪವನ್ನು ಸಾಮೂಹಿಕವಾಗಿ ತಿರಸ್ಕರಿಸುವಂತೆ ತಮ್ಮ ಎಲ್ಲಾ ಸಚಿವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲರಿಗೂ ನ್ಯಾಯ: ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಜಾತಿ ಸಮೀಕ್ಷೆಯನ್ನು ಸಮರ್ಥಿಸಿಕೊಂಡರು. “ಎಲ್ಲಾ ಗೊಂದಲಗಳನ್ನು ನಿವಾರಿಸಿ, ಕಾನೂನು ಚೌಕಟ್ಟಿನೊಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತೇವೆ” ಎಂದು ರಾಮನಗರದಲ್ಲಿ ಮಾತನಾಡಿದ ಅವರು ಹೇಳಿದರು. ಬಿಜೆಪಿ ಮತ್ತು ಇತರ ಪಕ್ಷಗಳು ಸುಳ್ಳು ಪ್ರಚಾರ ಹರಡುತ್ತಿವೆ ಎಂದು ಆರೋಪಿಸಿದ ಅವರು, ಪ್ರತಿಯೊಬ್ಬರ ಮನೆಯನ್ನೂ ಸಂದರ್ಶಿಸಿ, ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಮತಾಂತರಗೊಂಡರೆ ಜಾತಿ ಸೇರಿಸುವಂತಿಲ್ಲ: ಸತೀಶ್ ಜಾರಕಿಹೊಳಿ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಒಬ್ಬ ವ್ಯಕ್ತಿ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡರೆ, ಅವನ ಜಾತಿಯನ್ನು ಆ ಧರ್ಮದ ಜೊತೆಗೆ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ, ಜನಗಣತಿಯಲ್ಲಿ ಕೇವಲ ಆ ಧರ್ಮವನ್ನು ಮಾತ್ರ ದಾಖಲಿಸಬೇಕು, ಜಾತಿಯನ್ನು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಗೊಂದಲವು ಹೆಚ್ಚುವರಿ ಜಾತಿಗಳನ್ನು ಸೇರಿಸಿದ್ದರಿಂದ ಉಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ ಕೂಡ ಹೆಚ್ಚುವರಿ ಜಾತಿಗಳನ್ನು ಕೈಬಿಡಲು ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಏಳು-ಎಂಟು ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಹಿಂದೂ ವಿಭಜನೆಗೆ ಹುನ್ನಾರ: ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಜಾತಿ ಸಮೀಕ್ಷೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ವಿವಿಧ ಗುಂಪುಗಳಾಗಿ ವಿಭಜಿಸಲು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. “ಸಿದ್ದರಾಮಯ್ಯನವರು ವೈಫಲ್ಯ ಎದುರಿಸಿದಾಗಲೆಲ್ಲಾ ಜಾತಿಗಳನ್ನು ವಿಭಜಿಸುವ ತಂತ್ರ ಬಳಸುತ್ತಾರೆ” ಎಂದು ಶೋಭಾ ಹೇಳಿದರು.
‘ಒಕ್ಕಲಿಗ-ಕ್ರಿಶ್ಚಿಯನ್’, ‘ಲಿಂಗಾಯತ-ಕ್ರಿಶ್ಚಿಯನ್’ ಮತ್ತು ‘ನೇಕಾರ-ಕ್ರಿಶ್ಚಿಯನ್’ ನಂತಹ ಉಪಜಾತಿಗಳನ್ನು ಸೃಷ್ಟಿಸಿರುವ ಸರ್ಕಾರದ ಉದ್ದೇಶವನ್ನು ಅವರು ಪ್ರಶ್ನಿಸಿದರು. ಮತಾಂತರಗೊಂಡವರು ಅಲ್ಪಸಂಖ್ಯಾತರಾಗಿ ಸೌಲಭ್ಯ ಪಡೆಯುತ್ತಾರೆ, ಆದರೆ ಮೂಲ ಜಾತಿಗಳ ಮೀಸಲಾತಿಯನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ಶೋಭಾ ವಾದಿಸಿದರು.
‘ದಸರಾವನ್ನು ಧಾರ್ಮಿಕ ನೆಲೆಗಟ್ಟಿಗೆ ಸೀಮಿತವಾಗಿಸಲು ಸಾಧ್ಯವಿಲ್ಲ..’; ಸುಪ್ರೀಂ ತೀರ್ಪು ಸ್ವಾಗತಿಸಿದ ಸಿದ್ದರಾಮಯ್ಯ


