ನವರಾತ್ರಿಯ ‘ಗಾರ್ಬಾ’ ಕಾರ್ಯಕ್ರಮಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಫರ್ಮಾನುಗೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭಾನುವಾರ (ಸೆ.21) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಅಂತಹ ಕರೆಗಳು ‘ಹಿಂಸೆಯನ್ನು ಆಹ್ವಾನಿಸಿದಂತೆ” ಎಂದು ಹೇಳಿದ್ದಾರೆ.
ನವರಾತ್ರಿಯು ಸಾಂಪ್ರದಾಯಿಕ ಆಧ್ಯಾತ್ಮಿಕ ಗಾರ್ಬಾ ನೃತ್ಯದೊಂದಿಗೆ ದಾಂಡಿಯಾ (ವರ್ಣರಂಜಿತ ಕೋಲುಗಳ ಹೊಡೆತ) ಪ್ರದರ್ಶನದೊಂದಿಗೆ ಗುರುತಿಸಲ್ಪಟ್ಟಿದೆ. ಇದರಲ್ಲಿ ಜೋಡಿಗಳು ವೃತ್ತಾಕಾರವಾಗಿ ನೃತ್ಯ ಮಾಡುತ್ತಾರೆ, ಈ ವರ್ಷದ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ಇದನ್ನು ಆಚರಿಸಲಾಗುತ್ತದೆ.
‘ಗಾರ್ಬಾ’ ಕಾರ್ಯಕ್ರಮಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ಶನಿವಾರ (ಸೆ.20) ವಿಎಚ್‌ಪಿ ಹೇಳಿದೆ. ‘ಲವ್ ಜಿಹಾದ್’ ತಪ್ಪಿಸಲು ಪ್ರವೇಶ ಪಡೆಯುವವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸುವಂತೆ ಆಯೋಜಕರಿಗೆ ಸಲಹೆ ನೀಡಿದೆ.
ಗಾರ್ಬಾ ನೃತ್ಯದ ಸಮಯದಲ್ಲಿ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ವಿಎಚ್‌ಪಿ ನಾಯಕರೊಬ್ಬರು ಹೇಳಿದ್ದು, ಗಾರ್ಬಾ ಕೇವಲ ನೃತ್ಯವೋ, ಸಾಂಸ್ಕೃತಿಕ ಕಾರ್ಯಕ್ರಮವೋ ಅಲ್ಲ. ಅದೊಂದು ಪವಿತ್ರ ಪೂಜೆ ಎಂದಿದ್ದಾರೆ.
ವಿಎಚ್‌ಪಿಯ ಸಲಹೆಗೆ ಎಕ್ಸ್ ಪೋಸ್ಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ರಾಮದಾಸ್ ಅಠಾವಳೆ, “ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಗಾರ್ಬಾಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂದು ನಿರ್ಧರಿಸಲು ವಿಶ್ವ ಹಿಂದೂ ಪರಿಷತ್ ಯಾರು? ಈ ಸಲಹೆಯು ಕೇವಲ ಸಂಘಟಕರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಕೆಲವು ಮೂಲಭೂತವಾದಿ ಶಕ್ತಿಗಳಿಗೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಹಾಗೂ ಬಲವನ್ನು ಪ್ರಯೋಗಿಸಲು ನೀಡಿರುವ ಮುಕ್ತ ಆಹ್ವಾನವಾಗಿದೆ” ಎಂದು ಬರೆದುಕೊಂಡಿದ್ದಾರೆ.
“ಈ ಸಲಹೆಯಿಂದಾಗಿ ನವರಾತ್ರಿಯ ಸಮಯದಲ್ಲಿ ದೇಶದಲ್ಲಿ ಎಲ್ಲಿಯಾದರೂ ಯಾವುದಾದರು ಘರ್ಷಣೆಗಳು, ಹಲ್ಲೆಗಳು ಅಥವಾ ಧಾರ್ಮಿಕ ಸಂಘರ್ಷಗಳು ಸಂಭವಿಸಿದಲ್ಲಿ, ಸಂಪೂರ್ಣ ಜವಾಬ್ದಾರಿ ವಿಎಚ್‌ಪಿ ಮತ್ತು ಅದರ ಸಂಬಂಧಿತ ಸಂಸ್ಥೆಗಳ ಮೇಲಿರುತ್ತದೆ” ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ಹೇಳಿದ್ದಾರೆ.
मैं कड़ी निंदा करता हूँ! विश्व हिंदू परिषद कौन होती है तय करने वाली कि गरबा में कौन जाएगा और कौन नहीं?#SayNoToDiscrimination #Navratri2025 #VHPControversy #GarbaForAll
— Dr.Ramdas Athawale (@RamdasAthawale) September 21, 2025
ಇಂತಹ ನಡೆಗಳು ಭಾರತದ ಏಕತೆ, ವೈವಿಧ್ಯತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಹೃದಯಭಾಗಕ್ಕೆ ಹೊಡೆತ ನೀಡುತ್ತವೆ ಎಂದಿದ್ದಾರೆ.
“ನವರಾತ್ರಿ ಪೂಜೆ ಮತ್ತು ಸಂತೋಷದ ಹಬ್ಬವಾಗಿದ್ದು, ಅದನ್ನು ದ್ವೇಷ ಮತ್ತು ಅನುಮಾನದ ವೇದಿಕೆಯನ್ನಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ, ಇದು ಅತ್ಯಂತ ಖಂಡನೀಯ” ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಮುಖ್ಯಸ್ಥ ಕಿಡಿಕಾರಿದ್ದಾರೆ.
ಸಂವಿಧಾನವು 14, 15 ಮತ್ತು 25 ನೇ ವಿಧಿಗಳ ಅಡಿಯಲ್ಲಿ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
“ಯಾರು ಹಬ್ಬವನ್ನು ಆಚರಿಸಬೇಕೆಂದು ಯಾವುದೇ ಸಂಸ್ಥೆ ನಿರ್ಧರಿಸಲು ಸಾಧ್ಯವಿಲ್ಲ. ಗಾರ್ಬಾ ಕೇವಲ ಧಾರ್ಮಿಕ ಸಂಪ್ರದಾಯವಲ್ಲ, ಸಂಗೀತ, ನೃತ್ಯ ಮತ್ತು ಸಾಮಾಜಿಕ ಸಾಮರಸ್ಯದ ಆಚರಣೆಯೂ ಆಗಿದೆ. ಒಂದು ಸಿದ್ಧಾಂತದೊಂದಿಗೆ ಅದನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುವುದು ಅನ್ಯಾಯ ಮತ್ತು ಪ್ರತಿಗಾಮಿ” ಎಂದು ಕೇಂದ್ರ ಸಚಿವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವರಾತ್ರಿಯ ಸಮಯದಲ್ಲಿ ಆಯೋಜಕರು ಮತ್ತು ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅಠಾವಳೆ ಸರ್ಕಾರ ಮತ್ತು ಆಡಳಿತವನ್ನು ಒತ್ತಾಯಿಸಿದ್ದಾರೆ.
“ಬಲವಂತ, ಗುರುತಿನ ಪರಿಶೀಲನೆ ಅಥವಾ ಧಾರ್ಮಿಕ ತಾರತಮ್ಯದ ಯಾವುದೇ ಪ್ರಯತ್ನಗಳನ್ನು ಕಾನೂನಿನ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ನವರಾತ್ರಿ ಎಲ್ಲರಿಗೂ ಸೇರಿದ್ದು – ಅದರ ಸಾರವು ಭಾಗವಹಿಸುವಿಕೆ ಮತ್ತು ಶಾಂತಿಯಲ್ಲಿದೆ, ಹೊರಗಿಡುವಿಕೆಯಲ್ಲಿ ಅಲ್ಲ” ಎಂದು ತಿಳಿಸಿದ್ದಾರೆ.
ಇಂದಿನ ಯುವ ಪೀಳಿಗೆ ಪ್ರಗತಿ, ಒಳಗೊಳ್ಳುವಿಕೆ ಮತ್ತು ಆಚರಣೆಯನ್ನು ಬಯಸುತ್ತಿದೆಯೇ ಹೊರತು “ದ್ವೇಷ ಅಥವಾ ಬೆದರಿಕೆಯ ರಾಜಕೀಯವಲ್ಲ” ಎಂದು ಅವರು ಹೇಳಿದ್ದಾರೆ.


