ವಿವಿಧ ಜಾತಿಗಳ ಮುಂದೆ ‘ಕ್ರಿಶ್ಚಿಯನ್’ ಎಂಬ ಪದ ಸೇರಿಸಿದ್ದ ವಿಚಾರ ವಿವಾದ ಸ್ವರೂಪ ಪಡೆದ ಹಿನ್ನೆಲೆ,
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಿಂದ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ 33 ಜಾತಿಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಬಿಟ್ಟಿದೆ.
ಭಾನುವಾರ (ಸೆ.21) ದೇವರಾಜು ಅರಸು ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್, “ಸೆ.22ರಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯದಾದ್ಯಂತ ಪ್ರಾರಂಭಗೊಳ್ಳಲಿದೆ. ಇದರಲ್ಲಿ ಪಟ್ಟಿ ಮಾಡಿರುವ 1,561 ಜಾತಿಗಳ ಪೈಕಿ 33 ಜಾತಿಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಈ ಹಿಂದಿನ ಕಾಂತರಾಜು ಆಯೋಗದ ಸಮೀಕ್ಷೆಯಲ್ಲಿ ಇದ್ದ ಮಾಹಿತಿ, ಕಲಂಗಳನ್ನೇ ಉಪಯೋಗಿಸಿಕೊಂಡು ಸಮೀಕ್ಷೆ ಮಾಡಲಾಗುತ್ತಿದೆ. ಇದರಿಂದ ಕಾನೂನು ಉಲ್ಲಂಘನೆ ಆಗಿಲ್ಲ. ಈ ಮಾಹಿತಿಯನ್ನು ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳನ್ನು ಬಗ್ಗೆ ತಿಳಿಯಲು ಸಂಗ್ರಹಿಸಿತ್ತಿದ್ದೇವೆಯೇ ಹೊರತು, ಬೇರೆ ಉದ್ದೇಶಕ್ಕಾಗಿ ಉಪಯೋಗ ಮಾಡುವುದಿಲ್ಲ ಎಂದರು.
ಈ ಹಿಂದೆಯೇ ಆಯೋಗ ಸಮೀಕ್ಷೆ ನಡೆಸುವ ಮೊದಲೇ ಬಿಟ್ಟು ಹೋದ ಜಾತಿಗಳನ್ನು ಗಮನಕ್ಕೆ ತನ್ನಿ ಎಂದು ಜಾಗೃತಿ ಮೂಡಿಸುವ ಪ್ರಕಟಣೆಯೊಂದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಇದಾದ ಬಳಿಕ ಅನೇಕರು ತಮ್ಮ ಜಾತಿಗಳನ್ನು ಪರಿಗಣಿಸುವಂತೆ ಕೋರಿದ್ದರು. ಅದರಂತೆ 148 ಜಾತಿಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.
33 ಜಾತಿಗಳನ್ನು ಕೈಬಿಡಲಾಗಿದೆ ಎಂದರೆ ಅದನ್ನು ತೆಗೆದು ಹಾಕಿದ್ದೇವೆ ಎಂದಲ್ಲ. ಅರ್ಹ ಜಾತಿಯವರು ತಮ್ಮ ಮೂಲವನ್ನು ಸಮೀಕ್ಷೆದಾರರಿಗೆ ತಿಳಿಸಿ ಉಲ್ಲೇಖ ಮಾಡಬಹುದು ಎಂದೂ ಹೇಳಿದರು.
ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿರುತ್ತವೆ. ಅದನ್ನು ಸಮೀಕ್ಷೆ ಮಾಡುವವರ ಮೊಬೈಲ್‌ಗೆ ಅಪ್ಲೋಡ್ ಮಾಡಲಾಗಿದೆ. ಅವುಗಳ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ಏನು ಪ್ರಶ್ನೆಗಳಿರುತ್ತವೆ ಎಂದು ನಾವು ಜನರಿಗೆ ತಿಳಿವಳಿಕೆ ಕೊಟ್ಟಿದ್ದೇವೆ. ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿ ಮನೆ ಮನೆಗ ತಲುಪಿಸಲು ವ್ಯವಸ್ಥೆ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದರು.
ಏನಿದು ‘ಕ್ರಿಶ್ಚಿಯನ್’ ಜಾತಿ ವಿವಾದ
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ನಾನಾ ಕಾರಣಕ್ಕಾಗಿ ಮೂಲ ಜಾತಿಯನ್ನೂ ಸೇರಿಸಿಕೊಂಡು ಕ್ರಿಶ್ಚಿಯನ್ ಎಂಬುದಾಗಿ ಗುರುತಿಸಿಕೊಂಡಿರುವ ಜಾತಿಗಳ ಹೆಸರು ಆಯೋಗ ಪ್ರಕಟಿಸಿರುವ ಜಾತಿಗಳ ಪಟ್ಟಿಯಲ್ಲಿ ದಾಖಲಾಗಿತ್ತು.
ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್, ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್ ಸೇರಿದಂತೆ ಸುಮಾರು 46 ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್ ಎಂಬುದಾಗಿ ದಾಖಲಿಸಿರುವುದು ಕಂಡುಬಂದಿತ್ತು.
ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ನಾನಾ ಜಾತಿ- ಸಮುದಾಯಗಳ ನಾಯಕರು, ಸ್ವಾಮೀಜಿಗಳು ಕೂಡ ಮತಾಂತರದ ಬಳಿಕ ಹಿಂದೂ ಮೂಲ ಜಾತಿಯನ್ನು ಸೇರಿಸಿಕೊಂಡು ಕ್ರಿಶ್ಚಿಯನ್ ಎಂಬುದಾಗಿ ದಾಖಲಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಹಲವು ಸಚಿವರು, ಶಾಸಕರಿಂದಲೂ ಪರೋಕ್ಷವಾಗಿ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಸಚಿವ ಸಂಪುಟ ಸಭೆಯಲ್ಲೂಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಜನಾಭಿಪ್ರಾಯ, ಆಕ್ಷೇಪಗಳ ಬಗ್ಗೆ ಆಯೋಗದ ಗಮನಕ್ಕೆ ತಂದಿತ್ತು.
ಸೆ.22ರಿಂದ ಸಮೀಕ್ಷೆ
ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸೆ.22ರಿಂದ, ಅಂದರೆ ನಾಳೆಯಿಂದ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಅವರಿಗೆ ಈಗಾಗಲೇ ಈ ಬಗ್ಗೆ ತರಬೇತಿ ನೀಡಲಾಗಿದೆ. ಈ ಬಾರಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸಮೀಕ್ಷೆ ತಡ
ಬೆಂಗಳೂರಿನಲ್ಲಿ ಎರಡು ಮೂರು ದಿನ ಸಮೀಕ್ಷೆ ತಡವಾಗಿ ಆರಂಭ ಆಗಲಿದೆ. ತರಬೇತಿ ನೀಡುವುದಕ್ಕೆ ಒಂದು ವಾರ ತಡವಾಗಿದೆ. ಜೊತೆಗೆ ಜಿಬಿಎ ನೊಟಿಫಿಕೇಷನ್ ತಡ ಆಗಿದ್ದರಿಂದ ಇಲ್ಲಿ ತಡ ಆಗಿದೆ. ಬೆಂಗಳೂರು ನಗರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ. ಬೇರೆ ಇಲಾಖೆಯಿಂದಲೂ ನೇಮಕ ಮಾಡಲಾಗಿದೆ ಎಂದು ಮಧುಸೂದನ್ ನಾಯ್ಕ್ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಕಡ್ಡಾಯ
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಮಾತ್ರ ಸಮೀಕ್ಷೆಯಲ್ಲಿ ಪರಿಗಣಿಸಲಾಗುವುದು ಎಂದು ಮಧುಸೂದನ್ ನಾಯ್ಕ್ ತಿಳಿಸಿದ್ದಾರೆ.
ಆಳಂದ ಸೇರಿ ರಾಜ್ಯದ ಎಲ್ಲಾ ‘ಮತಗಳ್ಳತನ’ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರ


