ಮದ್ದೂರು, ಮಂಡ್ಯ: ಕಳೆದ ಕೆಲವು ದಿನಗಳ ಹಿಂದೆ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಘಟನೆಯ ನಂತರ, ಕೋಮು ದ್ವೇಷವನ್ನು ಪ್ರಚೋದಿಸುವಂತಹ ಹೇಳಿಕೆಗಳು ಮತ್ತು ಘಟನೆಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಪುನಃ ಸ್ಥಾಪಿಸುವ ಉದ್ದೇಶದಿಂದ, ಮಂಡ್ಯ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು “ಸೌಹಾರ್ದ-ಸಾಮರಸ್ಯ ನಡಿಗೆ ಮದ್ದೂರು ಕಡೆಗೆ” ಎಂಬ ಬೃಹತ್ ಜಾಥಾವನ್ನು ಆಯೋಜಿಸಿದ್ದವು. ಈ ನಡಿಗೆಯು ಐತಿಹಾಸಿಕ ಶಿವಪುರ ಸತ್ಯಾಗ್ರಹ ಸೌಧವನ್ನು ತಲುಪಬೇಕಿತ್ತು. ಆದರೆ, ಈ ಶಾಂತಿ ನಡಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದರು. ಪೊಲೀಸರ ಈ ನಡೆ ಸರ್ಕಾರದ ಧೋರಣೆ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಯ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಸರ್ಕಾರ ಮತ್ತು ಪೊಲೀಸರ ವಿರುದ್ಧ ಸಿಪಿಐಎಂ ಮುಖಂಡ ಕೃಷ್ಣೇಗೌಡರ ತೀವ್ರ ಆರೋಪ
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಮುಖಂಡ ಕೃಷ್ಣೇಗೌಡ ಅವರು, ಸರ್ಕಾರದ ಕೋಮುವಾದಿ ಶಕ್ತಿಗಳ ಮೇಲಿನ ಮೃದು ಧೋರಣೆಯೇ ಇಂತಹ ಗಲಭೆಗಳಿಗೆ ಮೂಲ ಕಾರಣ ಎಂದು ತೀವ್ರವಾಗಿ ಆರೋಪಿಸಿದರು. ಮದ್ದೂರಿನಲ್ಲಿನ ಪೊಲೀಸ್ ಕಾರ್ಯವೈಖರಿಯನ್ನು ಆರಂಭದಲ್ಲಿ ಸ್ವಾಗತಿಸಿದ್ದರೂ, ಒಟ್ಟಾರೆ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಹೇಳಿದರು.
“ದ್ವೇಷ ಭಾಷಣ ಮಾಡುವ ಯತ್ನಾಳ್, ಸಿ.ಟಿ. ರವಿ, ಪ್ರತಾಪ್ ಸಿಂಹನಂತಹ ಕೋಮುವಾದಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಆದರೆ, ಸೌಹಾರ್ದತೆ ಮತ್ತು ಶಾಂತಿಗಾಗಿ ನಡೆಯುವ ಜನಸಾಮಾನ್ಯರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗುತ್ತದೆ. ಇದು ಪೊಲೀಸ್ ಇಲಾಖೆಗೆ ಅಪರಾಧಿಗಳು ಯಾರು ಮತ್ತು ಸಜ್ಜನರು ಯಾರು ಎಂಬ ವ್ಯತ್ಯಾಸವೇ ಗೊತ್ತಿಲ್ಲದಿರುವುದನ್ನು ಸಾಬೀತುಪಡಿಸುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸೌಹಾರ್ದ ಕೂಟಗಳು, ಜಾತ್ರೆಗಳು ಹಾಗೂ ಸಮಾರಂಭಗಳನ್ನು ಆಯೋಜಿಸುತ್ತೇವೆ. ಮದ್ದೂರಿನ ಗಡಿಭಾಗದಲ್ಲಾದರೂ ತಮ್ಮ ನಡಿಗೆ ಯಶಸ್ವಿಯಾಗಿದೆ, ಪೊಲೀಸರ ನಿರ್ಬಂಧ ತಮ್ಮ ಸಂಕಲ್ಪವನ್ನು ತಡೆಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದರು.
ಸೌಹಾರ್ದ ನಡಿಗೆಗೆ ನಿರ್ಬಂಧ: ಡಿಎಸ್‌ಎಸ್ ಮುಖಂಡರ ಆಕ್ರೋಶ
ಡಿಎಸ್‌ಎಸ್ ಮುಖಂಡ ಶಿವು ಮರಳಿಗ ಮಾತನಾಡಿ, ಜಿಲ್ಲಾಡಳಿತವು ಹಿಂದೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು. “ಮದ್ದೂರಿನಲ್ಲಿ ಶಾಂತಿ ಹದಗೆಟ್ಟಾಗ, ಶಾಂತಿ ಮೂಡಿಸಲು ಮುಂದೆ ಬರುವವರಿಗೆ ಅವಕಾಶ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದರು. ಆದರೆ, ಇಂದು ನಮ್ಮ ಸೌಹಾರ್ದ ನಡಿಗೆಯನ್ನು ಬ್ಯಾರಿಕೇಡ್ ಹಾಕಿ ತಡೆಯುವ ಮೂಲಕ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದ್ದಾರೆ. ನಾವು ಗುಲಾಬಿ ಹೂ ಹಂಚಿ ಪ್ರೀತಿ ಮತ್ತು ಸಹಬಾಳ್ವೆಯನ್ನು ಸಾರುತ್ತಿದ್ದೇವೆ, ಆದರೆ ಪೊಲೀಸರು ನಮ್ಮನ್ನು ರಸ್ತೆಗೆ ಇಳಿಯಲು ಬಿಡುತ್ತಿಲ್ಲ. ಇದು ಪೊಲೀಸ್ ಇಲಾಖೆಯ ವಿಫಲತೆಗೆ ಸಾಕ್ಷಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಹೆಸರಿನಲ್ಲಿ ಕೋಮು ಶಕ್ತಿಗಳು ತಮ್ಮ ತಂತ್ರಗಳನ್ನು ಹರಡುತ್ತಿವೆ ಎಂದು ಅವರು ಎಚ್ಚರಿಸಿದರು.
“ಮೊದಲು ಶ್ರೀರಂಗಪಟ್ಟಣ, ನಂತರ ಕೆರಗೋಡು ಬಾವುಟ ವಿಚಾರ, ಆನಂತರ ನಾಗಮಂಗಲ ಮತ್ತು ಈಗ ಮದ್ದೂರನ್ನು ಗುರಿಯಾಗಿಸಿಕೊಂಡು ಮಂಡ್ಯದ ಸಾಮರಸ್ಯ ಕೆಡಿಸಲು ಮುಂದಾಗಿದ್ದಾರೆ. ಇಂತಹ ಕೆಡುಕುಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ” ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಸ್ವಾರ್ಥ ರಾಜಕೀಯದ ವಿರುದ್ಧ ವಾಗ್ದಾಳಿ
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಅವರು ಮಾತನಾಡಿ, ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ಜಾತ್ಯತೀತತೆ ಎಂಬ ಪದಕ್ಕೆ ಅಪಮಾನ ಮಾಡಿದೆ ಎಂದು ಆರೋಪಿಸಿದರು.
“ರೈತ ಸಂಘಟನೆಗಳು ಯಾವಾಗಲೂ ಗಾಂಧಿ ಮತ್ತು ಬಸವಣ್ಣನವರ ತತ್ವಗಳ ಮೇಲೆ ಕೆಲಸ ಮಾಡುತ್ತವೆ. ಆದರೆ, ಕೋಮು ಪ್ರಚೋದನೆ ಮಾಡುವ ಸಿ.ಟಿ. ರವಿ, ಯತ್ನಾಳ್‌ಗೆ ಮದ್ದೂರಿಗೆ ಬರಲು ಅವಕಾಶ ಇದೆ. ಶಾಂತಿ ಬಯಸುವ ನಮ್ಮನ್ನು ನಿರ್ಬಂಧಿಸುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ. ಕುಮಾರಸ್ವಾಮಿ ಅವರು ಕೋಮುವಾದಿಗಳ ಜೊತೆ ಕೈಜೋಡಿಸಿರುವ ಕಾರಣ ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ಆದರೂ ನಾವು ನಮ್ಮ ದನಿ ಎತ್ತಿದ್ದೇವೆ. ಎಲ್ಲ ಜನಪರ ಸಂಘಟನೆಗಳು ಕೋಮು ದ್ವೇಷಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಮಂಡ್ಯ ಜಿಲ್ಲೆಯನ್ನು ಕೋಮುವಾದಿ ಶಕ್ತಿಗಳಿಂದ ರಕ್ಷಿಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.
“ನಮ್ಮ ಯುವಕರು ಜೈಲುಪಾಲಾಗುತ್ತಿದ್ದಾರೆ”: ಹಿರಿಯ ಸಾಹಿತಿ ಭೂಮಿಗೌಡ
ಹಿರಿಯ ಸಾಹಿತಿ ಭೂಮಿಗೌಡ ಅವರು, ಬಿಜೆಪಿ ಮತ್ತು ಸಂಘಪರಿವಾರಗಳು ಅಭಿವೃದ್ಧಿಯ ಬದಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆಪಾದಿಸಿದರು. “ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ನಮ್ಮ ಶೂದ್ರ ಸಮುದಾಯದ ಯುವಕರು ಗಲಭೆಗಳಲ್ಲಿ ಭಾಗಿಯಾಗಿ ಶಾಂತಿ ಕದಡಿ ಜೈಲು ಸೇರುತ್ತಿದ್ದಾರೆ. ಈ ಬಗ್ಗೆ ಜನರು ಮತ್ತು ಯುವಕರು ಆಳವಾಗಿ ಆಲೋಚಿಸಬೇಕು ಹಾಗೂ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ತಿಳಿಸಿದರು.
ಎಲ್ಲ ಸಮುದಾಯಗಳು ಒಗ್ಗೂಡಿ ಹೋರಾಟಕ್ಕೆ ಕರೆ
ಸಾಮಾಜಿಕ ಕಾರ್ಯಕರ್ತೆ ಕುಮಾರಿ ಅವರು ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಎಲ್ಲ ಧರ್ಮಗಳವರೂ ತಮ್ಮ ಪ್ರಾಣಗಳನ್ನು ಅರ್ಪಿಸಿದ ಫಲದಿಂದ. ಆದರೆ, ಈ ಇತಿಹಾಸವನ್ನು ಮರೆತಿರುವವರು ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
“ಯಾವುದೇ ಧರ್ಮವು ಮುಸಲ್ಮಾನರನ್ನು ಅಥವಾ ಮನುಷ್ಯರನ್ನು ದ್ವೇಷಿಸಲು ಹೇಳಿಲ್ಲ. ಆದರೆ, ಹಿಂದುತ್ವವಾದಿಗಳು ಮಾತ್ರ ಸಾಮರಸ್ಯಕ್ಕೆ ನಿರಾಕರಿಸಿ, ವಿಭಜನೆಗೆ ಹುನ್ನಾರ ನಡೆಸುತ್ತಿದ್ದಾರೆ. ಮಂಡ್ಯವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳುವ ಅವರ ಪ್ರಯತ್ನಕ್ಕೆ ನಮ್ಮ ಸಾಮರಸ್ಯದ ಹೋರಾಟದ ಮೂಲಕ ಹಿನ್ನಡೆಯನ್ನುಂಟು ಮಾಡುತ್ತೇವೆ” ಎಂದು ಅವರು ಹೇಳಿದರು. ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ. ಬಸವರಾಜು, ಜನವಾದಿ ಮಹಿಳಾ ಸಂಘಟನೆಯ ದೇವಿ ಮತ್ತು ದಲಿತ ಸಂಘಟನೆಗಳ ಮುಖಂಡ ಅಂದಾನಿ ಸೋಮನಹಳ್ಳಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿ, ಕೋಮುದ್ವೇಷವನ್ನು ಹರಡುವವರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಕರೆ ನೀಡಿದರು.
ಪೊಲೀಸ್ ಅನುಮತಿ ಸಿಗದಿದ್ದರೂ, ಮದ್ದೂರು ಎಪಿಎಂಸಿ ಆವರಣದಲ್ಲಿ ನೂರಾರು ಕಾರ್ಯಕರ್ತರು ಒಗ್ಗೂಡಿ, ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ಮೂಲಕ ಅವರು ಶಾಂತಿ ಮತ್ತು ಸಹಬಾಳ್ವೆಯನ್ನು ಎತ್ತಿಹಿಡಿದರು.
ಈ ಕಾರ್ಯಕ್ರಮದಲ್ಲಿ ಚಿಂತಕರುಗಳಾದ ಶಿವಸುಂದರ್, ಎಂ.ವಿ. ಕೃಷ್ಣ, ಜನಪರ ಸಂಘಟನೆಗಳ ಮುಖಂಡರುಗಳಾದ ಯಶ್ವಂತ್ ಟಿ., ಜಾಗೃತ ಕರ್ನಾಟಕದ ನಾಗೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ ಸಿ ಬಸವರಾಜು, ಜನಪರ ಸಂಘಟನೆಗಳ ಮುಖಂಡರುಗಳಾದ ಕೆಂಪು ಗೌಡ್ರು, ದೇವಿ, ಅಂದಾನಿ ಸೋಮನಹಳ್ಳಿ ಸೇರಿದಂತೆ ಯುವಜನ, ಮಹಿಳಾ, ದಲಿತ, ಕಾರ್ಮಿಕ, ರೈತ ಸಂಘಟನೆ ಹಾಗೂ ಎಲ್ಲ ಜನಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.
ನಕ್ಸಲರ ಕೇಂದ್ರ ಸಮಿತಿ ಸದಸ್ಯರಾದ ರಾಜು ದಾದಾ ಮತ್ತು ಕೋಸಾ ದಾದಾ ಎನ್‌ಕೌಂಟರ್‌ನಲ್ಲಿ ಸಾವು


