ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ ದಲಿತ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಸೋಮವಾರ ಖಚಿತಪಡಿಸಿದ್ದಾರೆ.
ಭಾನುವಾರ ಸದಾಸರ್ ಗ್ರಾಮದಲ್ಲಿ ನಡೆದ ಈ ಘಟನೆಯು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆಗೆ ಕಾರಣವಾಯಿತು. ಕನರಾಮ್ ಮೇಘವಾಲ್ ದಾಖಲಿಸಿದ ಎಫ್‌ಐಆರ್ ಪ್ರಕಾರ, ‘ಭಗವತ್ ಕಥಾ’ ಮುಗಿದ ನಂತರ ನಡೆದ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಈ ಘಟನೆ ಭಾನುವಾರ ಸಂಜೆ ನಡೆದಿದೆ.
ಮೆರವಣಿಗೆಯನ್ನು ಪಠಣ ಸ್ಥಳದಿಂದ ಹತ್ತಿರದ ದೇವಾಲಯಕ್ಕೆ ಕರೆದೊಯ್ಯಲಾಯಿತು, ಮೇಘವಾಲ್ ಮತ್ತು ಇತರ ಕೆಲವರು ‘ದರ್ಶನ’ಕ್ಕಾಗಿ ದೇವಾಲಯಕ್ಕೆ ಪ್ರವೇಶಿಸುತ್ತಿದ್ದಾಗ, ಸೂರದಾಸ ಸ್ವಾಮಿ, ಶಂಕರ್‌ಲಾಲ್, ಹಿಮ್ಮತ್ ಕುಮಾರ್ ಮತ್ತು ಅನಿಲ್ ಸೇರಿದಂತೆ ಕೆಲವು ಹಳ್ಳಿ ಜನರು ಅವರನ್ನು ತಡೆದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ದಲಿತರು ಎಂಬ ಕಾರಣಕ್ಕಾಗಿ ಆರೋಪಿಗಳು ದೇವಾಲಯಕ್ಕೆ ಪ್ರವೇಶಿಸದಂತೆ ತಡೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೇವಾಲಯದ ಪ್ರವೇಶದ್ವಾರದಲ್ಲಿ ಜನದಟ್ಟಣೆ ಇತ್ತು, ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಾಗ ಮೇಘವಾಲ್ ಮತ್ತು ಇತರರನ್ನು ದೇವಾಲಯದ ಹೊರಗೆ ಕಾಯಲು ಹೇಳಲಾಯಿತು ಎಂದು ಡಿಎಸ್‌ಪಿ ಸತ್ಯನಾರಾಯಣ್ ಗೋದಾರ ಹೇಳಿದರು.
“ತಪ್ಪಿಸಿಕೊಂಡಿರುವ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪತ್ತೆಹಚ್ಚಲು ಶೋಧ ನಡೆಯುತ್ತಿದೆ” ಎಂದು ಡಿಎಸ್‌ಪಿ ಹೇಳಿದರು.
ತುಮಕೂರು ಹಾಲು ಒಕ್ಕೂಟದಲ್ಲಿ ದಲಿತ ಅಧಿಕಾರಿಗೆ ಕಿರುಕುಳ; ಗೃಹ ಸಚಿವರ ತವರಿನಲ್ಲೇ ಪರಿಶಿಷ್ಟರ ಮೇಲೆ ಸರಣಿ ದೌರ್ಜನ್ಯ


