Homeಅಂಕಣಗಳು9 ವರ್ಷದಲ್ಲಿ ಅಸ್ಸಾಂನಲ್ಲಿ 17,600 ಕುಟುಂಬಗಳ ತೆರವು: ಪ್ರಧಾನಿಯಿಂದ ಈಗ 'ಒಳನುಸುಳುಕೋರರು' ಎಂಬ ಹಣೆಪಟ್ಟಿ

9 ವರ್ಷದಲ್ಲಿ ಅಸ್ಸಾಂನಲ್ಲಿ 17,600 ಕುಟುಂಬಗಳ ತೆರವು: ಪ್ರಧಾನಿಯಿಂದ ಈಗ ‘ಒಳನುಸುಳುಕೋರರು’ ಎಂಬ ಹಣೆಪಟ್ಟಿ

- Advertisement -
- Advertisement -

ಸೆಪ್ಟೆಂಬರ್ 14ರಂದು ಅಸ್ಸಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ನಲ್ಲಿ “ಲಕ್ಷಾಂತರ ಬಿಘಾಗಳಷ್ಟು ಭೂಮಿಯನ್ನು ಒಳನುಸುಳುಕೋರರಿಂದ ಮುಕ್ತಗೊಳಿಸಿದ” ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅವರು ದರ್ರಾಂಗ್ ಜಿಲ್ಲೆಯ ಗರುಖುಟಿಯನ್ನು ವಿಶೇಷವಾಗಿ ಉಲ್ಲೇಖಿಸಿದರು.

2021ರ ಸೆಪ್ಟೆಂಬರ್‌ನಲ್ಲಿ, ಬಿಜೆಪಿ ಸರ್ಕಾರವು ಈ ಪ್ರದೇಶದಲ್ಲಿನ ಸುಮಾರು 2,000 ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿ ಹಾಕಿತು. ಅವರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಕಾರಣವನ್ನು ನೀಡಲಾಗಿತ್ತು.

ಅಸ್ಸಾಂನ “ಸ್ಥಳೀಯರು” ಎಂದು ಪರಿಗಣಿಸಲಾದವರಿಗೆ ಮಾತ್ರ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾದ ಸಾವಯವ ಕೃಷಿ ಕಾರ್ಯಕ್ರಮಕ್ಕಾಗಿ ಅವರಿಗೆ ಜಾಗ ಮಾಡಿಕೊಡಲು ಈ ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು.

ಇದು ಅಸ್ಸಾಂನಲ್ಲಿನ ಈ ಒಕ್ಕಲೆಬ್ಬಿಸುವಿಕೆಯು ಅತ್ಯಂತ ಹಿಂಸಾತ್ಮಕವಾದ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು. ಇಲ್ಲಿನ ಮನೆಗಳ ನೆಲಸಮಕ್ಕೆ ಪ್ರತಿರೋಧ ಎದುರಾದಾಗ ಪೊಲೀಸರು ಗುಂಡು ಹಾರಿಸಿದರು. ಆ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಕೊಲ್ಲಲ್ಪಟ್ಟರು, ಅವರಲ್ಲಿ 12 ವರ್ಷದ ಬಾಲಕನೂ ಸೇರಿದ್ದನು.

ಗರುಖುಟಿ ಘಟನೆಯು ಹಿಮಂತ ಬಿಸ್ವಾ ಶರ್ಮಾ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಒಕ್ಕಲೆಬ್ಬಿಸುವ ಕಾರ್ಯಾಚರಣೆಗಳಿಗೆ ಒಂದು ಮಾದರಿಯನ್ನು ರೂಪಿಸಿತು, ಇದು ಆಗಾಗ್ಗೆ ಪೊಲೀಸರ ಅತಿಯಾದ ಬಲ ಪ್ರಯೋಗಕ್ಕೆ ಒಳಗಾಗಿತ್ತು.

ಕಳೆದ ಒಂಬತ್ತು ವರ್ಷಗಳ ರಾಜ್ಯದಲ್ಲಿನ ಬಿಜೆಪಿಯ ಆಡಳಿತದಲ್ಲಿ, ಸುಮಾರು 17,600 ಕುಟುಂಬಗಳನ್ನು, ಅವರಲ್ಲಿ ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರನ್ನು ಸರ್ಕಾರಿ ಭೂಮಿಯಿಂದ ಒಕ್ಕಲೆಬ್ಬಿಸಲಾಗಿದೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿಗಳು ಒದಗಿಸಿದ ದತ್ತಾಂಶಗಳು ಹೇಳುತ್ತವೆ. ಒಕ್ಕಲೆಬ್ಬಿಸುವಿಕೆಯ ಸಮಯದಲ್ಲಿ ಕನಿಷ್ಠ ಎಂಟು ಮುಸ್ಲಿಮರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಬಂಗಾಳಿ ಮೂಲದ ಮುಸ್ಲಿಮರ ವಿರುದ್ಧದ ಈ ಕ್ರಮಕ್ಕೆ ರಾಜ್ಯದಲ್ಲಿ ಸಾಕಷ್ಟು ಬೆಂಬಲವಿದೆ, ಇವರನ್ನು ಅಸ್ಸಾಂನಲ್ಲಿ “ಕಾನೂನುಬಾಹಿರ ವಲಸಿಗರು” ಎಂದು ನೋಡಲಾಗುತ್ತದೆ. ಇವರು “ಸ್ಥಳೀಯರ” ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಭಾವಿಸಲಾಗುತ್ತದೆ, ಆದರೂ ಈ ಪ್ರದೇಶದಲ್ಲಿ ಅವರ ಉಪಸ್ಥಿತಿ 1947ಕ್ಕಿಂತ ಹಿಂದಿನದು ಎಂಬುದನ್ನು ನಾವು ಮರೆಯಬಾರದು.

ತಮ್ಮ ಭಾಷಣದಲ್ಲಿ, ಮೋದಿ ಅವರು “ಒಮ್ಮೆ ಒಳನುಸುಳುಕೋರರ ನಿಯಂತ್ರಣದಲ್ಲಿದ್ದ ಗರುಖುಟಿ ಪ್ರದೇಶವನ್ನು… ಈಗ ಮರಳಿ ಪಡೆಯಲಾಗಿದೆ” ಎಂದು ಹೇಳಿಕೊಂಡರು.

“ಮರಳಿ ಪಡೆದ ಭೂಮಿಯು ಈಗ ಗರುಖುಟಿ ಕೃಷಿ ಯೋಜನೆಯ ನೆಲೆಯಾಗಿದೆ, ಅಲ್ಲಿ ಸ್ಥಳೀಯ ಯುವಕರು ‘ಕೃಷಿ ಸೈನಿಕರಾಗಿ’ ಕೆಲಸ ಮಾಡುತ್ತಿದ್ದಾರೆ ಮತ್ತು ಸಾಸಿವೆ, ಮೆಕ್ಕೆಜೋಳ, ಉದ್ದು, ಎಳ್ಳು ಮತ್ತು ಕುಂಬಳಕಾಯಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ” ಎಂದು ಅವರು ಹೇಳಿದರು. “ಒಮ್ಮೆ ಒಳನುಸುಳುಕೋರರು ಆಕ್ರಮಿಸಿಕೊಂಡಿದ್ದ ಭೂಮಿ ಈಗ ಅಸ್ಸಾಂನಲ್ಲಿ ಕೃಷಿ ಅಭಿವೃದ್ಧಿಯ ಹೊಸ ಕೇಂದ್ರವಾಗಿದೆ” ಎಂದರು. ಆದರೆ ಗರುಖುಟಿಯಲ್ಲಿ ಪ್ರಧಾನಿಯ ಯಾವ ಹೇಳಿಕೆಗಳಿಗೂ ವಿರೋಧವಿಲ್ಲ ಎಂದು ಹೇಳಲಾಗದು.

ತಮ್ಮ ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡು ಇನ್ನೂ ಚೇತರಿಸಿಕೊಳ್ಳಲು ಹೆಣಗುತ್ತಿರುವ ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳು ತಾವು ಅಕ್ರಮ ವಲಸಿಗರು ಎಂಬುದನ್ನು ಬಲವಾಗಿ ನಿರಾಕರಿಸುತ್ತಾರೆ. ಒಕ್ಕಲೆಬ್ಬಿಸುವಿಕೆಯ ಸಮಯದಲ್ಲಿ ತಮ್ಮ ಮನೆಯನ್ನು ಕಳೆದುಕೊಂಡಿದ್ದ ಶಾಹಜಹಾನ್ ಅಲಿ, “ನಾವು ಬಾಂಗ್ಲಾದೇಶದ ಒಳನುಸುಳುಕೋರರಾಗಿದ್ದರೆ, ಜಿಲ್ಲಾಡಳಿತವು ಪ್ರತಿ ಕುಟುಂಬಕ್ಕೆ ಒಂದು ಬಿಘಾ ಭೂಮಿಯನ್ನು ಏಕೆ ನೀಡಿ ಪುನರ್ವಸತಿ ಕಲ್ಪಿಸಿತು?” ಎಂದು ಪ್ರಶ್ನಿಸಿದರು.

ಹಾಗೆಯೇ ಅಲಿ ಅವರು, ತಮ್ಮ ಕುಟುಂಬದ ಹಲವರ ಹೆಸರುಗಳು “1951ರ NRCಯಲ್ಲಿವೆ” ಎಂದು ಹೇಳಿದರು.

ಅವರು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಬಗ್ಗೆ ಉಲ್ಲೇಖಿಸುತ್ತಿದ್ದರು. ಇದು ರಾಜ್ಯದ ಕಾನೂನುಬದ್ಧ ನಾಗರಿಕರ ಪಟ್ಟಿ. ಇದನ್ನು ಅಸ್ಸಾಂನಲ್ಲಿ 1951ರಲ್ಲಿ ಸಿದ್ಧಪಡಿಸಲಾಗಿತ್ತು ಮತ್ತು ನಂತರ ಒಂದು ದೊಡ್ಡ ಅಧಿಕಾರಶಾಹಿ ಪ್ರಕ್ರಿಯೆಯ ನಂತರ 2019ರಲ್ಲಿ ನವೀಕರಿಸಲಾಯಿತು. ಬಹುಕೋಟಿ ಕೃಷಿ ಯೋಜನೆ ಯಶಸ್ವಿಯಾಗಿದೆ ಎಂಬ ಮೋದಿ ಅವರ ಹೇಳಿಕೆಯೂ ಸಹ ಸತ್ಯದಿಂದ ದೂರವಿದೆ.

“ಪ್ರಧಾನಿಯವರು ಇದರ ಒಳಗಡೆ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸಲಿಲ್ಲ” ಎಂದು ಯೋಜನೆಯಲ್ಲಿ ಕೆಲಸ ಮಾಡುವ 40 ವರ್ಷದ ಧಂಜಿತ್ ನಾಥ್ ಹೇಳಿದರು. “ನಮಗೆ ಸಾಕಷ್ಟು ಹಣವನ್ನು ಪಾವತಿಸುತ್ತಿಲ್ಲ ಎಂದು ಅವರಿಗೆ ತಿಳಿದಿಲ್ಲ” ಎಂದು ಆರೋಪಿಸುತ್ತಾರೆ.

ಅಸ್ಸಾಂ ಸರ್ಕಾರದ ಸ್ವಂತ ಅಂಕಿಅಂಶಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಲಾಭ ಗಳಿಸಿಲ್ಲ. ಕೆಲವು ತಿಂಗಳ ಹಿಂದೆ, ಹಿಮಂತ ಬಿಸ್ವಾ ಶರ್ಮಾ ಸರ್ಕಾರದ ಸಚಿವರು ಮತ್ತು ಬಿಜೆಪಿ ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು – ನಿರ್ದಿಷ್ಟವಾಗಿ ಯೋಜನೆಗಾಗಿ ಸರ್ಕಾರ ಖರೀದಿಸಿದ ಹಸುಗಳನ್ನು ವೈಯಕ್ತಿಕ ಉಪಯೋಗಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಕೃಷಿ ಯೋಜನೆ ಯಶಸ್ವಿಯಾಗಿರುವುದರ ಮತ್ತೊಂದು ಭಾಗವೆಂದರೆ, ಇದು ಹಲವಾರು ಮಿಯಾ ಮುಸ್ಲಿಂ ಕುಟುಂಬಗಳನ್ನು ಕೃಷಿಯಿಂದ ದೂರ ತಳ್ಳಿದೆ. ಅವರಲ್ಲಿ ಹಲವರು ಈಗ ಅಸ್ಸಾಂನ ಹೊರಗೆ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಹತ್ಯೆಗಳು ಮತ್ತು ನಂತರದ ಘಟನೆಗಳು

ದರ್ರಾಂಗ್ ಒಕ್ಕಲೆಬ್ಬಿಸುವಿಕೆಯ ಸಮಯದಲ್ಲಿನ ಅತ್ಯಂತ ಆಘಾತಕಾರಿ ಚಿತ್ರಗಳಲ್ಲಿ ಒಂದು, ಜಿಲ್ಲಾಡಳಿತದೊಂದಿಗೆ ಇದ್ದ ಒಬ್ಬ ಛಾಯಾಗ್ರಾಹಕನು ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ತುಳಿಯುತ್ತಿರುವ ದೃಶ್ಯವಾಗಿತ್ತು.  ಮುಮ್ತಾಜ್ ಬೇಗಂ ಆ ಚಿತ್ರವನ್ನು ಮರೆಯಲು ಸಾಧ್ಯವಾಗಿಲ್ಲ. ಈ ಮುಮ್ತಾಜ್ ಅವರ ಪತಿ, 28 ವರ್ಷದ ಮೊಯಿನ್-ಉಲ್ ಹಕ್, ಎದೆಗೆ ಗುಂಡು ತಗುಲಿ ಕೊಲ್ಲಲ್ಪಟ್ಟಿದ್ದರು ಮತ್ತು ಅವರ ದೇಹವನ್ನು ಹೀನಾಯಗೊಳಿಸಲಾಗಿತ್ತು.

36 ವರ್ಷದ ಬೇಗಂ, ಸ್ಕ್ರಾಲ್ ಜೊತೆ ಮಾತನಾಡುತ್ತಾ, “ಆ ದೃಶ್ಯ ನೆನಪಿಗೆ ಬಂದಾಗಲೆಲ್ಲಾ ನನ್ನ ಹೃದಯ ಒಡೆದುಹೋಗುತ್ತದೆ. ಮಲಗುವ ಮೊದಲು ನಾನು ಅಳುತ್ತೇನೆ ಮತ್ತು ನ್ಯಾಯಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳುತ್ತಾರೆ.

ಒಕ್ಕಲೆಬ್ಬಿಸುವಿಕೆಯ ನಂತರ, ಬೇಗಂ ಅವರು ಧಾಲ್ಪುರದಲ್ಲಿ ತಮ್ಮ ಹಳೆಯ ಮನೆಯ ಉಳಿದ ಭಾಗಗಳಿಂದ ನಿರ್ಮಿಸಿದ ತಾತ್ಕಾಲಿಕ ಆಶ್ರಯದಲ್ಲಿ, ಹತ್ತಿರದ ತೊರೆಯ ದಂಡೆಯಲ್ಲಿ ಮೂರು ವರ್ಷಗಳ ಕಾಲ ವಾಸಿಸುತ್ತಿದ್ದರು. ಕೆಲವು ತಿಂಗಳ ಹಿಂದೆ, ಇತರರು ದಾನ ಮಾಡಿದ ಹಣದಿಂದ ಅವರು ಒಂದು ಕಥಾ ಅಥವಾ ಒಂದು ಬಿಘಾದ ಐದನೇ ಒಂದು ಭಾಗದಷ್ಟು ಸಣ್ಣ ಜಾಗವನ್ನು ಖರೀದಿಸಿ, ಅದರ ಮೇಲೆ ತಗಡಿನ ಶೆಡ್ ಅನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಪಡೆಯುವ ತಿಂಗಳಿಗೆ 3,000 ರೂ.ಗಳ ಸಂಬಳದಿಂದ ತಮ್ಮ ಮನೆಯನ್ನು ನಡೆಸುತ್ತಿದ್ದಾರೆ.

ಧಾಲ್ಪುರದಲ್ಲಿ ವಾಸಿಸುತ್ತಿದ್ದ ಮತ್ತು ಒಕ್ಕಲೆಬ್ಬಿಸುವಿಕೆಯಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡವರನ್ನು ಮೋದಿ “ಘುಸ್ ಪೆಟಿಯೆ” (ಒಳನುಸುಳುಕೋರರು) ಎಂದು ಕರೆದಿದ್ದಾರೆ ಎಂದು ಬೇಗಂ ಕೇಳಿದಾಗ, ಅವರಿಗೆ ತೀವ್ರ ಆಕ್ರೋಶ ಉಂಟಾಯಿತು. “ಅವರು ನನ್ನ ಪತಿಯನ್ನು ಹತ್ಯೆ ಮಾಡಿದರು, ಅವರ ಕುಟುಂಬಕ್ಕೆ ಕಿರುಕುಳ ನೀಡಿದರು ಮತ್ತು ಶಿಕ್ಷಿಸಿದರು, ಈಗ ಮೋದಿ ನಮ್ಮನ್ನು ಬಾಂಗ್ಲಾದೇಶಿಗಳು ಎಂದು ಕರೆಯುತ್ತಾರೆ” ಎಂದು ಹೇಳಿದರು. ಮುಂದುವರಿದು ಅವರು,  “ಈ ಸರ್ಕಾರಕ್ಕೆ ದಯೆ ಇಲ್ಲ. ಅದು ನಮ್ಮನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ” ಎಂದು ಆರೋಪಿಸಿದರು.

ಮುಮ್ತಾಜ್ ಬೇಗಂ ಅವರಂತೆ, ಒಕ್ಕಲೆಬ್ಬಿಸುವ ಸಮಯದಲ್ಲಿ ಗುಂಡೇಟಿಗೆ ಬಲಿಯಾದ 12 ವರ್ಷದ ಶೇಖ್ ಫರೀದ್ ಅವರ ಕುಟುಂಬವೂ ದುರಂತದಿಂದ ಭಾರಿ ನೋವಿಗೆ ಒಳಗಾಗಿದೆ. “ನಮ್ಮ ತಂದೆ ದುಃಖದಿಂದಲೇ ನಿಧನರಾದರು” ಎಂದು ಫರೀದ್ ಅವರ ಸಹೋದರ, 29 ವರ್ಷದ ಅಮೀರ್ ಹುಸೇನ್ ಹೇಳಿದರು. “ನಮ್ಮ ಕುಟುಂಬ 1980ರ ದಶಕದಲ್ಲಿ ಧಾಲ್ಪುರಕ್ಕೆ ಸ್ಥಳಾಂತರಗೊಂಡ ಕಾಮರೂಪ್‌ಗೆ ನನ್ನ ತಾಯಿ ಹಿಂದಿರುಗಿದರು. ಫರೀದ್ ಅನ್ನು ಇಲ್ಲಿಯೇ ಹೊರಗೆ ಸಮಾಧಿ ಮಾಡಲಾಗಿರುವುದರಿಂದ ಅವರು ಈ ಮನೆಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅವರು ಇಲ್ಲಿಗೆ ಬಂದಾಗಲೆಲ್ಲಾ, ಸಮಾಧಿಯ ಬಳಿ ಹೋಗಿ ಅಳುತ್ತಾರೆ.”

ಹುಸೇನ್ ಮತ್ತು ಮುಮ್ತಾಜ್ ಬೇಗಂ ಇಬ್ಬರಿಗೂ ತಮ್ಮ ಸಂಬಂಧಿಗಳ ಸಾವಿಗೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಘಟನೆಯ ನಂತರ ಒಂದು ವಿಚಾರಣಾ ಆಯೋಗವನ್ನು ರಚಿಸಿತ್ತು. ಆಯೋಗದ ವರದಿಯು, ಒಕ್ಕಲೆಬ್ಬಿಸುವ ಮೊದಲು ಸ್ಥಳಾಂತರಗೊಂಡವರಿಗೆ ಸಾಕಷ್ಟು ನೋಟಿಸ್ ನೀಡಿಲ್ಲ ಮತ್ತು ಪೊಲೀಸರು ಸಂಯಮ ವಹಿಸಬೇಕಿತ್ತು ಎಂದು ಹೇಳಿದೆ. ಆದರೆ, ಮೃತರ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ಶಿಫಾರಸು ಮಾಡಿಲ್ಲ ಎಂದು ಕೂಡ ಹೇಳಿದೆ.

“ನಮಗೆ ವಿಚಾರಣೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಹೇಳಿಕೆ ನೀಡಲು ಒಮ್ಮೆ ಗುವಾಹಟಿಗೆ ಭೇಟಿ ನೀಡಿದ್ದೆ. ಯಾರೂ ನಮಗೆ ಮಾಹಿತಿಯೊಂದಿಗೆ ಭೇಟಿ ನೀಡುವುದಿಲ್ಲ” ಎಂದು ಮುಮ್ತಾಜ್ ಬೇಗಂ ಹೇಳಿದರು.

ಚದುರಿಹೋದ ಒಂದು ಸಮುದಾಯ

ಧಾಲ್ಪುರವು ಮೂರು ಕಡೆಯಿಂದ ಬ್ರಹ್ಮಪುತ್ರ ನದಿಯಿಂದ ಸುತ್ತುವರಿದಿದೆ ಮತ್ತು ಅನೇಕ ತೊರೆಗಳಿಂದ ದಾಟಿದೆ. ರಾಜ್ಯದ ಹೆಚ್ಚಿನ ಚಾರ್ (ತಾತ್ಕಾಲಿಕ ನದಿದ್ವೀಪಗಳು) ಪ್ರದೇಶಗಳಂತೆ, ಇಲ್ಲಿಯ ಭೂಮಿ ಫಲವತ್ತಾಗಿದೆ.  ಆದರೆ ಈ ಫಲವತ್ತಾದ ಭೂಮಿಯು ನದಿಯ ಸವೆತಕ್ಕೆ ಒಳಗಾಗುತ್ತದೆ. 2021ರಲ್ಲಿ ಒಕ್ಕಲೆಬ್ಬಿಸಲ್ಪಟ್ಟ ಮಿಯಾ ಮುಸ್ಲಿಮರ ಸಮುದಾಯವು 1980ರ ದಶಕದಿಂದ ಅಲ್ಲಿ ವಾಸಿಸುತ್ತಿತ್ತು. ಅವರು ಋತುಗಳಿಗೆ ಸಂಬಂಧಿಸಿದ  ತರಕಾರಿಗಳು, ಭತ್ತ, ಮೆಕ್ಕೆಜೋಳ ಮತ್ತು ಸೆಣಬನ್ನು ಬೆಳೆದು ಗುವಾಹಟಿಯ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದರು.

ಮನೆಗಳನ್ನು ಕೆಡವಿದ ನಂತರ, ಅಸ್ಸಾಂ ಸರ್ಕಾರವು ಅವರಲ್ಲಿ ಹೆಚ್ಚಿನವರನ್ನು 50 ಕಿ.ಮೀ ದೂರದಲ್ಲಿರುವ ದಾಲ್‌ಗಾಂವ್‌ಗೆ ಸ್ಥಳಾಂತರಿಸಿತು, ಅಲ್ಲಿ ಅವರಿಗೆ ತಲಾ ಒಂದು ಬಿಘಾ ಭೂಮಿಯನ್ನು ನೀಡಲಾಯಿತು – ಆದರೂ ಅವರಿಗೆ ಯಾವುದೇ ಭೂ ದಾಖಲೆಗಳನ್ನು ನೀಡಲಾಗಿಲ್ಲ. ಸುಮಾರು 300 ಕುಟುಂಬಗಳಿಗೆ ಒಂದು ಬಿಘಾ ಭೂಮಿಯೂ ಸಿಕ್ಕಿಲ್ಲ ಮತ್ತು ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸ್ಥಳಾಂತರಗೊಂಡವರು, ದಾಲ್‌ಗಾಂವ್‌ನಲ್ಲಿನ ಪುನರ್ವಸತಿ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆಗಳು, ವಿದ್ಯುತ್ ಮತ್ತು ಶೌಚಾಲಯಗಳ ಕೊರತೆಯಿದೆ ಎಂದು ಹೇಳಿದರು. ಈ ಪ್ರದೇಶವು ಪ್ರವಾಹಕ್ಕೆ ಸಹ ಒಳಗಾಗುತ್ತದೆ. ಹಲವಾರು ನಿವಾಸಿಗಳು ಸ್ಕ್ರಾಲ್ ಜೊತೆ ಮಾತನಾಡುತ್ತಾ, ಸಾಕಷ್ಟು ಭೂಮಿ ಇಲ್ಲದ ಕಾರಣ ತಾವು ಕೃಷಿಯನ್ನು ಬಿಟ್ಟುಬಿಟ್ಟಿದ್ದೇವೆ ಎಂದು ಹೇಳಿದರು. ಸುಮಾರು 70-80% ಪುರುಷರು ಗುವಾಹಟಿಗೆ ಅಥವಾ ಅದಕ್ಕಿಂತ ದೂರದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳಕ್ಕೆ ಹೋಗಿದ್ದಾರೆ ಎಂದು ಅವರು ಹೇಳಿದರು.

“ಅವರಲ್ಲಿ ಹೆಚ್ಚಿನವರು ಈಗ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ದರ್ರಾಂಗ್ ಮೂಲದ ಅಲ್ಪಸಂಖ್ಯಾತ ನಾಯಕ ಮತ್ತು ಖರುಪೇಟಿಯಾ ಕಾಲೇಜಿನ ನಿವೃತ್ತ ಶಿಕ್ಷಕ ನಜೀರ್ ಸರ್ಕಾರ್ ಸ್ಕ್ರಾಲ್ ಜೊತೆ ಮಾತನಾಡುತ್ತಾ ತಿಳಿಸಿದರು.

28 ವರ್ಷದ ರೈತ ಜಹುರುಲ್ ಇಸ್ಲಾಂ, ತಮ್ಮ ಮನೆಗಳನ್ನು ನೆಲಸಮಗೊಳಿಸಿ ಭೂಮಿಯನ್ನು ವಶಪಡಿಸಿಕೊಳ್ಳುವ ಮೊದಲು, ಅವರ ಕುಟುಂಬವು 26 ಬಿಘಾ ಭೂಮಿಯನ್ನು ಸಾಗುವಳಿ ಮಾಡುತ್ತಿತ್ತು ಎಂದು ಹೇಳಿದರು. “ಈಗ ನಾನು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ಇಸ್ಲಾಂ ಹೇಳಿದರು. “ಅದೂ ಸಹ ನಿಯಮಿತವಾಗಿ ಈ ಕೂಲಿ ಕೆಲಸ ಸಿಗುವುದಿಲ್ಲ. ವಾರದಲ್ಲಿ ನಾಲ್ಕೈದು ದಿನ ಕೆಲಸ ಸಿಗಬಹುದು” ಎಂದು ಹೇಳುತ್ತಾರೆ.

ಅವರ ಮೂವರು ಸಹೋದರರು ಕೆಲಸ ಹುಡುಕಿಕೊಂಡು ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ತೆರಳಿದ್ದಾರೆ. “ಅವರು ಮೀನು ಫಾರ್ಮ್‌ನಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಭೂಮಿ ಅಥವಾ ಕೆಲಸ ಇಲ್ಲ. ನಾವು ಏನು ಮಾಡಲು ಸಾಧ್ಯ?” ಎಂದು ಪ್ರಶ್ನಿಸುತ್ತಾರೆ.

“ಸರ್ಕಾರ ನಮಗೆ ಭೂಮಿಯನ್ನು ಒದಗಿಸಿದ್ದರೆ, ನಾವು ಇಲ್ಲಿಗೆ ಬರಬೇಕಾಗಿರಲಿಲ್ಲ” ಎಂದು ಜೈನುದ್ದೀನ್ ಅಹ್ಮದ್ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಿಂದ ಫೋನ್‌ನಲ್ಲಿ ಸ್ಕ್ರಾಲ್ ಜೊತೆ ಮಾತನಾಡುತ್ತಾ ಹೇಳಿದರು. ಮನೆಗಳನ್ನು ಕೆಡವುವ ಮೊದಲು, 28 ವರ್ಷದ ಈ ರೈತ ಧಾಲ್ಪುರದಲ್ಲಿ ಏಳು ಬಿಘಾ ಭೂಮಿಯಲ್ಲಿ ತರಕಾರಿ ಮತ್ತು ಮೆಕ್ಕೆಜೋಳ ಬೆಳೆಯುತ್ತಿದ್ದರು. ಅದು ಅವರ ಕುಟುಂಬವನ್ನು ಪೋಷಿಸಲು ಸಾಕಾಗಿತ್ತು.

ಒಕ್ಕಲೆಬ್ಬಿಸುವಿಕೆಯ ನಂತರ ತಕ್ಷಣವೇ ಅವರು ಆಂಧ್ರಪ್ರದೇಶಕ್ಕೆ ತೆರಳಿದರು ಮತ್ತು ಈಗ ಅವರ ಪತ್ನಿಯೂ ಸಹ ಮೀನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

“ಅಸ್ಸಾಂನಲ್ಲಿ, ನಾವು ವಾರ್ಷಿಕವಾಗಿ 1 ಲಕ್ಷ ರೂ. ಉಳಿಸಬಹುದಾಗಿತ್ತು. ಇಲ್ಲಿ, ನನ್ನ ಪತ್ನಿ ಮತ್ತು ನಾನು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಗಲು ರಾತ್ರಿ ದುಡಿಯುತ್ತಿದ್ದೇವೆ. ಆದರೂ, ನಾವು ದಿನಕ್ಕೆ 800 ರೂ.ಗಿಂತ ಹೆಚ್ಚು ಗಳಿಸಲು ಸಾಧ್ಯವಿಲ್ಲ” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಅಲ್ಪಸಂಖ್ಯಾತ ನಾಯಕ ಸರ್ಕಾರ್ ಅವರು, “ಸರ್ಕಾರ ಅವರಿಗೆ ಏಳು ಬಿಘಾ ಭೂಮಿ – ವಾಸಕ್ಕೆ ಒಂದು ಬಿಘಾ ಮತ್ತು ಕೃಷಿಗೆ ಆರು ಬಿಘಾ – ಹಂಚಿದ್ದರೆ, ಅವರು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗಿರಲಿಲ್ಲ” ಎನ್ನುತ್ತಾರೆ ಅವರು.

ಅಸ್ಸಾಂನ ಭೂ ನೀತಿಯ ಅಡಿಯಲ್ಲಿ, ಸರ್ಕಾರವು ಒಬ್ಬ ಭೂಹೀನ ವ್ಯಕ್ತಿಗೆ ಏಳು ಬಿಘಾ ಭೂಮಿಯನ್ನು ನೀಡಬಹುದು. ಆದರೆ ಹಿಮಂತ ಶರ್ಮಾ ಸರ್ಕಾರದ ಅಡಿಯಲ್ಲಿ, “ಸ್ಥಳೀಯ” ರೈತರಿಗೆ ಮಾತ್ರ ಇಂತಹ ಪರಿಹಾರಕ್ಕೆ ಅರ್ಹತೆ ಇದೆ. ಅಸ್ಸಾಂನಲ್ಲಿ ‘ಸ್ಥಳೀಯತೆ’ಗೆ ಯಾವುದೇ ಕಾನೂನು ವ್ಯಾಖ್ಯಾನವಿಲ್ಲದಿದ್ದರೂ, ಈ ಕಾನೂನು ಬಹುತೇಕ ಸಂದರ್ಭಗಳಲ್ಲಿ ಮಿಯಾ ಮುಸ್ಲಿಮರನ್ನು ಹೊರಗಿಡುತ್ತದೆ.

ಗರುಖುಟಿಯಲ್ಲಿ ಏನಾಯಿತು?

ಒಕ್ಕಲೆಬ್ಬಿಸುವಿಕೆಯು ಬಂಗಾಳಿ ಮೂಲದ ಮುಸ್ಲಿಮರನ್ನು ಕೃಷಿಯಿಂದ ಹೊರಗೆ ತಳ್ಳಿ ಅನಿಶ್ಚಿತ ಕೂಲಿ ಕೆಲಸಕ್ಕೆ ತಳ್ಳಿದರೂ, ಇದು ಸುಮಾರು 300 “ಸ್ಥಳೀಯ” ಜನರಿಗೆ, ಅವರಲ್ಲಿ 50 ಮಹಿಳೆಯರೂ ಸೇರಿದ್ದು, ಗರುಖುಟಿ ಕೃಷಿ ಯೋಜನೆಯಲ್ಲಿ ಉದ್ಯೋಗ ನೀಡಿದೆ.

ಈ ಯೋಜನೆಯ ಮುಖ್ಯಸ್ಥರು ಸೊಟಿಯಾ ಕ್ಷೇತ್ರದ ಶಾಸಕ ಪದ್ಮ ಹಜಾರಿಕಾ ಅವರಾಗಿದ್ದಾರೆ. ಹೆಚ್ಚಿನ ಭೂಮಿಯನ್ನು ಕೃಷಿಗೆ ಬಳಸಲಾಗಿದ್ದರೆ, ಕೆಲಸಗಾರರು ವಾಸಿಸಲು ಸ್ಥಳದಲ್ಲಿ ಆರು ಶಿಬಿರಗಳನ್ನು ನಿರ್ಮಿಸಲಾಗಿದೆ. ಸೆಪ್ಟೆಂಬರ್ 16ರ ಒಂದು ಮಳೆಯ ಬೆಳಿಗ್ಗೆ, ಸ್ಕ್ರಾಲ್‌ನ ವರದಿಗಾರರು ಯೋಜನೆಯಲ್ಲಿ ಕೆಲಸ ಮಾಡುವ ನಾಲ್ಕು ಕಾರ್ಮಿಕರನ್ನು ಭೇಟಿ ಮಾಡಿದರು. “ನಾವು ಭೂಮಿಯನ್ನು ಕೊಚ್ಚುವುದರಿಂದ ಹಿಡಿದು, ಮಣ್ಣನ್ನು ತಿರುಗಿಸುವುದು ಮತ್ತು ಅದನ್ನು ಕೃಷಿಗಾಗಿ ಸಡಿಲಗೊಳಿಸುವುದು ಎಲ್ಲವನ್ನೂ ಮಾಡುತ್ತೇವೆ” ಎಂದು ನೆರೆಯ ಉದಲ್‌ಗುರಿ ಜಿಲ್ಲೆಯ 40 ವರ್ಷದ ಧಂಜಿತ್ ನಾಥ್ ಹೇಳಿದರು.

ಸುಮಾರು ಎರಡು ವರ್ಷಗಳ ಹಿಂದೆ, ನಾಥ್ ಪಂಜಾಬ್‌ನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು 15,000-18,000 ರೂ. ಗಳಿಸುತ್ತಿದ್ದರು. ಇಲ್ಲಿ, ಅವರಿಗೆ ತಿಂಗಳಿಗೆ 9,000 ರೂ. ನೀಡಲಾಗುತ್ತದೆ. “ಇದು ಕಡಿಮೆ ಹಣ, ಆದರೆ ನನಗೆ ಬೇರೆ ಆಯ್ಕೆಗಳಿಲ್ಲ” ಎಂದು ನಾಥ್ ಹೇಳಿದರು.

ಸಂಬಳವೂ ಸಹ ನಿಯಮಿತವಾಗಿ ಸಿಗುವುದಿಲ್ಲ. “ಇದು ತಿಂಗಳ 16ನೇ ತಾರೀಕು, ಇನ್ನೂ ನಮಗೆ ವೇತನ ಸಿಕ್ಕಿಲ್ಲ” ಎಂದು ನಾಥ್ ಹೇಳಿದರು. “ವೇತನವನ್ನು ತಿಂಗಳಿಗೆ 15,000 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರೂ, ಅವರು ಇನ್ನೂ ಅದನ್ನು ಮಾಡಿಲ್ಲ. ಅವರು ಹಾಗೆ ಮಾಡದಿದ್ದರೆ, ನಾವು ಪುನರ್ವಿಮರ್ಶಿಸಬೇಕಾಗುತ್ತದೆ. ಈಗಾಗಲೇ ಅನೇಕ ಜನರು ಯೋಜನೆಯನ್ನು ತೊರೆದಿದ್ದಾರೆ” ಎಂದು ಹೇಳುತ್ತಾರೆ.

ಅವರ ಸಹೋದ್ಯೋಗಿಗಳೂ ಕಡಿಮೆ ವೇತನದ ಬಗ್ಗೆ ದೂರಿದರು. “ನಾವು ನುರಿತ ಕಾರ್ಮಿಕರು, ಆದರೆ ನಮಗೆ ದಿನಗೂಲಿಯಾಗಿ 500 ರೂ. ಕೂಡ ಸಿಗುತ್ತಿಲ್ಲ” ಎಂದು ಇನ್ನೊಬ್ಬ ಕಾರ್ಮಿಕ ಪ್ರಶಾಂತ ಬೋರೋ ಹೇಳಿದರು.

ಗರುಖುಟಿ ಮತ್ತು ರಾಜಪುಖುರಿ ಗ್ರಾಮಗಳಲ್ಲಿ, ಈ ಯೋಜನೆಯ ಬಗ್ಗೆ ಮಿಶ್ರ ಭಾವನೆಗಳಿವೆ, ಮಿಯಾ ಮುಸ್ಲಿಮರನ್ನು ಒಕ್ಕಲೆಬ್ಬಿಸುವಿಕೆಯನ್ನು ಬೆಂಬಲಿಸಿದ ಜನಾಂಗೀಯ ಅಸ್ಸಾಮಿ ನಿವಾಸಿಗಳಲ್ಲೂ ಸಹ. “ಭೂಮಿ ಸರ್ಕಾರಕ್ಕೆ ಸೇರಿದ್ದು, ಮತ್ತು ಸರ್ಕಾರ ಅದನ್ನು ಹಿಂದಕ್ಕೆ ಪಡೆದುಕೊಂಡಿದೆ” ಎಂದು ರಾಜಪುಖುರಿಯ ನಿವಾಸಿ ಮತ್ತು 66 ವರ್ಷದ ಜಾನುವಾರು ಮೇಯಿಸುವ ಹೇಮಚಂದ್ರ ನಾಥ್ ಸ್ಕ್ರಾಲ್ ಜೊತೆ ಹೇಳಿದರು. “ಸುಮಾರು 50-100 ಜನರು ಅಲ್ಲಿ ಕೆಲಸ ಕಂಡುಕೊಂಡಿರಬಹುದು, ಆದರೆ ಈ ಯೋಜನೆಯು ನಮ್ಮ ಗ್ರಾಮಕ್ಕೆ ಸಹಾಯ ಮಾಡುತ್ತಿಲ್ಲ” ಎಂದು ಆರೋಪಿಸುತ್ತಾರೆ.

1960ರ ದಶಕದಲ್ಲಿ, ಅವರ ಕುಟುಂಬವು ನೇರವಾಗಿ ಭೂಮಿಯನ್ನು ಸಾಗುವಳಿ ಮಾಡುತ್ತಿತ್ತು ಮತ್ತು ಇಳುವರಿಯನ್ನು ಪಡೆಯುತ್ತಿತ್ತು ಎಂದು ನಾಥ್ ಹೇಳಿದರು. “ಆದರೆ ಈಗ ಅದು ಸರ್ಕಾರ ಮತ್ತು ಅವರ ನಾಯಕರಿಗೆ ಸೇರುತ್ತದೆ” ಎಂದರು. “ಯೋಜನೆಯು ಸ್ಥಳೀಯ ನಿವಾಸಿಗಳ ನಿಯಂತ್ರಣದಲ್ಲಿದ್ದರೆ, ಅದು ಬೇರೆ ರೀತಿ ಇರುತ್ತಿತ್ತು” ಎಂದು ಅವರು ಹೇಳಿದರು.

‘ಒಂದು ಫ್ಲಾಪ್ ಶೋ’

ರಾಜ್ಯದ ಕೃಷಿ ಸಚಿವ ಅತುಲ್ ಬೋರಾ ಅವರು ಈ ಯೋಜನೆಯು ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಯೋಜನೆಯಲ್ಲಿ ಆಧುನಿಕ ಕೃಷಿ ತಂತ್ರಗಳು ಮತ್ತು ವೈಜ್ಞಾನಿಕ ಪ್ರಾಣಿ ಸಾಕಣೆ ಪದ್ಧತಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಎರಡು ವರ್ಷಗಳಲ್ಲಿ 16.1 ಕೋಟಿ ರೂ. ಹೂಡಿಕೆ ಮಾಡಿದೆ. ಆದರೆ, ಸಚಿವರ ಸ್ವಂತ ಹೇಳಿಕೆಯ ಪ್ರಕಾರ, ಸರ್ಕಾರವು 1.51 ಕೋಟಿ ರೂ. ಗಳಿಸಿದೆ.

“ಈ ಯೋಜನೆ ಒಂದು ಫ್ಲಾಪ್ ಶೋ ಆಗಿದೆ” ಎಂದು ಧಾಲ್ಪುರ ಗ್ರಾಮದ ಮಾಜಿ ನಿವಾಸಿ ರಫೀಕುಲ್ ಇಸ್ಲಾಂ ಹೇಳಿದರು.

ಧಾಲ್ಪುರದಿಂದ ಒಕ್ಕಲೆಬ್ಬಿಸಲ್ಪಡುವ ಮೊದಲು ಇಸ್ಲಾಂ ತರಕಾರಿ ಬೆಳೆದು ದೈನಂದಿನ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಈಗ, ಅವರು ಬೇರೆಯವರಿಂದ ಉತ್ಪನ್ನಗಳನ್ನು ಖರೀದಿಸಿ, 50 ಕಿ.ಮೀ ದೂರದ ಖರುಪೇಟಿಯಾ ಮಾರುಕಟ್ಟೆಯಲ್ಲಿ ಮಾರುತ್ತಾರೆ.

ತಾವು ಕೃಷಿ ಮಾಡುತ್ತಿದ್ದಾಗ ಬಂಗಾಳಿ ಮೂಲದ ಮುಸ್ಲಿಂ ಕೃಷಿಕರು ಹೆಚ್ಚು ಉತ್ತಮ ಇಳುವರಿ ಪಡೆಯುತ್ತಿದ್ದರು ಎಂದು ಇಸ್ಲಾಂ ಹೇಳಿಕೊಂಡರು.

ಐತಿಹಾಸಿಕವಾಗಿ, ಬಂಗಾಳಿ ಮೂಲದ ಮುಸ್ಲಿಂ ರೈತರು ಕಷ್ಟಕರ ಪರಿಸ್ಥಿತಿಗಳಲ್ಲೂ ಕೃಷಿ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. 1900ರ ದಶಕದ ಆರಂಭದಲ್ಲಿ ಬ್ರಿಟಿಷರು ಅವರನ್ನು ಪೂರ್ವ ಬಂಗಾಳದಿಂದ ಅಸ್ಸಾಂಗೇ ವಲಸೆ ಹೋಗಲು ಪ್ರೋತ್ಸಾಹಿಸಲು ಇದು ಒಂದು ಕಾರಣವಾಗಿತ್ತು.

“ನಾವು ಒಂದು ಬಿಘಾದಲ್ಲಿ 20 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯಬಹುದಾಗಿತ್ತು” ಎಂದು ಇಸ್ಲಾಂ ಹೇಳಿದರು. ಆದರೆ ಸರ್ಕಾರದ ಕೃಷಿ ಯೋಜನೆ ಕೇವಲ 3-4 ಕ್ವಿಂಟಾಲ್ ಬೆಳೆಯುತ್ತದೆ ಎಂದು ಅವರು ಹೇಳಿದರು. “ಅವರು ತಮ್ಮ ವೆಚ್ಚವನ್ನು ಸಹ ವಸೂಲಿ ಮಾಡಲು ಸಾಧ್ಯವಾಗಿಲ್ಲ, ಲಾಭ ಗಳಿಸುವುದು ಮರೆತುಬಿಡಿ” ಎನ್ನುತ್ತಾರೆ.

ಆದಾಗ್ಯೂ, ಕಡಿಮೆ ಇಳುವರಿ ಇದ್ದರೂ, ಮುಖ್ಯಮಂತ್ರಿ ಶರ್ಮಾ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ನಾನು ಇಲ್ಲಿ ಲಾಭ ಅಥವಾ ನಷ್ಟವನ್ನು ಲೆಕ್ಕ ಹಾಕಲು ಇಲ್ಲ” ಎಂದು ಶರ್ಮಾ ಕೆಲವು ತಿಂಗಳ ಹಿಂದೆ ಹೇಳಿದರು. “ನಾವು ಬಾಂಗ್ಲಾದೇಶಿಯರ ಸ್ವಾಧೀನದಿಂದ 8,000 ಬಿಘಾ ಭೂಮಿಯನ್ನು ಮರಳಿ ಪಡೆದು ಮುಕ್ತಗೊಳಿಸಿದ್ದೇವೆ. ಅದು ಯಾವುದೇ ಹಣಕಾಸಿನ ಲಾಭಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ” ಎನ್ನುತ್ತಾರೆ.

ಮೂಲ: ರೋಕಿಬುಜ್ ಜಮಾನ್, ಸ್ಕ್ರಾಲ್‌.ಇನ್‌

‘ನಾನು ಮುಹಮ್ಮದ್‌ರನ್ನು ಪ್ರೀತಿಸುತ್ತೇನೆ’ ಅಭಿಯಾನದ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...