ಬಜರಂಗದಳದ ಮತಾಂತರ ಮತ್ತು ಮಾನವ ಕಳ್ಳ ಸಾಗಣಿಕೆ ಆರೋಪದ ಬಳಿಕ, ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಪೊಲೀಸರು ಬಂಧಿಸಿದ ಪ್ರಕರಣ ಕಳೆದ ಜುಲೈ ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ ನಡೆದಿತ್ತು. ಇದು ದೇಶದಾದ್ಯಂತ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು.
ಅದೇ ರೀತಿ, ಬಜರಂಗದಳ ಸದಸ್ಯರು ಮತಾಂತರದ ಆರೋಪ ಮಾಡಿದ ಹಿನ್ನೆಲೆ, ಕ್ಯಾಥೋಲಿಕ್ ಸನ್ಯಾಸಿನಿ ಮತ್ತು 19 ಆದಿವಾಸಿ ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆದ ಪೊಲೀಸರು, ಸುಮಾರು ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಘಟನೆ ಶುಕ್ರವಾರ (ಸೆ.19) ರಾತ್ರಿ ಜಾರ್ಖಂಡ್‌ನ ಟಾಟಾ ನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಪ್ರಕರಣದ ಚರ್ಚೆಯೂ ದಿನಕಳೆದಂತೆ ಕಾವು ಪಡೆದುಕೊಳ್ಳುತ್ತಿದೆ.
ವಿಚಾರಣೆಯ ಬಳಿಕ ಬಜರಂಗದಳದ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಾಲ್ವರು ಹುಡುಗರು ಮತ್ತು 15 ಹುಡುಗಿಯರನ್ನು ಒಳಗೊಂಡ, ಒಟ್ಟು 19 ಜನರ ಗುಂಪು ಎರಡು ದಿನಗಳ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕಾಗಿ ದಕ್ಷಿಣ ಬಿಹಾರ ಎಕ್ಸ್‌ಪ್ರೆಸ್ ಮೂಲಕ ಜಾರ್ಖಂಡ್‌ನ ಜಮ್ಶೆಡ್‌ಪುರಕ್ಕೆ ತೆರಳಿದ್ದರು. ಜಾರ್ಖಂಡ್‌ನ ಸರೈಕೇಲಾ-ಖರ್ಸವಾನ್ ಜಿಲ್ಲೆಯಲ್ಲಿ ಹದಿಹರೆಯದ ಜಾಗೃತಿ ಯೋಜನೆಗಳಲ್ಲಿ ಕೆಲಸ ಮಾಡುವ ಕ್ರೈಸ್ತ ಸನ್ಯಾಸಿನಿ ತಂಡದ ನೇತೃತ್ವ ವಹಿಸಿದ್ದರು.
“ರೈಲು ಪ್ರಯಾಣದ ಸಮಯದಲ್ಲಿ ಒಂದಷ್ಟು ಜನರು ತನ್ನನ್ನು ಮತ್ತು ಮಕ್ಕಳನ್ನು ಹಿಂಬಾಲಿಸುತ್ತಿದ್ದರು. ಈ ನಡುವೆ ಟಿಟಿಇ ಬಂದು ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಅದಾದ, ಬಳಿಕ ಒಂದು ಗುಂಪು ಜಮಾಯಿಸಿತು. ನಂತರ ಆ ಗುಂಪು ಮತ್ತು ಟಿಟಿಇ ಮಕ್ಕಳಲ್ಲಿ ಅವರ ಧರ್ಮ ಕೇಳಲು ಪ್ರಾರಂಭಿಸಿದರು” ಎಂದು ಸನ್ಯಾಸಿನಿ ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
“ಹದಿಹರೆಯದವರ ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಕ್ಕಳನ್ನು ಆಹ್ವಾನಿಸಲಾಗಿತ್ತು. ಸೆಪ್ಟೆಂಬರ್ 20-21 ರಂದು ಸುಂದರನಗರದಲ್ಲಿರುವ ಎನ್‌ಜಿಒ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು.”
“ಪ್ರತಿ ಕೆಲವು ತಿಂಗಳಿಗೊಮ್ಮೆ ನಡೆಸುವ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಲು ಅನುಮತಿ ನೀಡುವ ಪೋಷಕರು ಮತ್ತು ಗ್ರಾಮದ ಮುಖ್ಯಸ್ಥರು (ಮುಖ್ಯಸ್ಥ) ಸಹಿ ಮಾಡಿದ ಅನುಮತಿ ಪತ್ರಗಳನ್ನು ತೋರಿಸಿರುವುದಾಗಿ ನಾನು ನಮ್ಮನ್ನು ಸುತ್ತುವರಿದಿದ್ದ ಗುಂಪಿಗೆ ಹೇಳಿದೆ” ಎಂದು ಸನ್ಯಾಸಿನಿ ವಿವರಿಸಿದ್ದಾರೆ.
“ನನ್ನ ಜೊತೆಗಿದ್ದ ಮಕ್ಕಳಲ್ಲಿ ಕೆಲವರು ಹಲವು ವರ್ಷಗಳಿಂದ ನಮ್ಮೊಂದಿಗಿದ್ದಾರೆ. ಅನೇಕರು ತಮ್ಮದೇ ಆದ ಧರ್ಮವನ್ನು ಅನುಸರಿಸುತ್ತಿರುವ ಕ್ರೈಸ್ತೇತರ ಕುಟುಂಬಗಳಿಂದ ಬಂದವರು. ಕೆಲವು ಮಕ್ಕಳು ಕೊನೆಯ ಕ್ಷಣದಲ್ಲಿ ಸೇರಿಕೊಂಡ ಕಾರಣ ಅವರ ಆಧಾರ್ ಕಾರ್ಡ್‌ಗಳನ್ನು ಹೊಂದಿರಲಿಲ್ಲ” ಎಂದಿದ್ದಾರೆ.
“ಪರಿಸ್ಥಿತಿ ಉಲ್ಬಣಗೊಳ್ಳುವ ಭಯದಿಂದ ನಾನು ಕಾರ್ಯಕ್ರಮದ ನಿರ್ದೇಶಕ ಮತ್ತು ಪಾದ್ರಿ ಬೀರೇಂದ್ರ ಟೆಟೆ ಅವರಿಗೆ ಕರೆ ಮಾಡಿದೆ. ಅವರು ಬಂದಾಗ, ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ರಾಪ್ತ ವಯಸ್ಕರು ಕುಳಿತಿರುವುದನ್ನು ಮತ್ತು ಬಜರಂಗದಳ ಸದಸ್ಯರು ಹುಡುಗಿಯರ ಛಾಯಾಚಿತ್ರ ತೆಗೆಯುತ್ತಿದ್ದುದನ್ನು ಕಂಡರು” ಎಂದು ಸನ್ಯಾಸಿನಿ ಹೇಳಿದ್ದಾರೆ.
“ಮಕ್ಕಳನ್ನು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ರೈಲು ನಿಲ್ದಾಣದಲ್ಲಿ ಇರಿಸಲಾಗಿತ್ತು. ಮೊದಲು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ನಂತರ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಡಿಯಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ತರಬೇತಿ ಅವಧಿಗೆ ಹಾಜರಾಗಲು ಅವಕಾಶ ನೀಡಲಾಯಿತು” ಎಂದು ಸನ್ಯಾಸಿನಿ ತಿಳಿಸಿದ್ದಾರೆ.
ಶನಿವಾರ ಬೆಳಗಿನ ಜಾವ 3 ಗಂಟೆಯವರೆಗೆ ಸನ್ಯಾಸಿನಿಯನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಲಾಗಿತ್ತು. ನಂತರ ಪೊಲೀಸರು ಅವರನ್ನು ಜೆಮ್ಶೆಡ್‌ಪುರದ ಸುಂದರ್‌ನಗರದಲ್ಲಿರುವ ಕ್ಯಾಥೋಲಿಕ್ ದತ್ತಿ ಕೇಂದ್ರಕ್ಕೆ ಕರೆದೊಯ್ದರು ವರದಿಗಳು ಹೇಳಿವೆ.
ಮಕ್ಕಳ ಸಹಾಯವಾಣಿ 1098ರ ಪಂಕಜ್ ಗುಪ್ತಾ ಅವರು ಅಧಿಕಾರಿಗಳಿಗೆ ‘ಯಾವುದೇ ಅನುಮಾನಾಸ್ಪದ ಚಟುವಟಿಕೆ’ ಕಂಡುಬಂದಿಲ್ಲ ಎಂದು ದೃಢಪಡಿಸಿದ್ದಾರೆ. ಸನ್ಯಾಸಿನಿಯ ಉದ್ದೇಶ ಮಕ್ಕಳನ್ನು ಜಾಗೃತಿ ಕಾರ್ಯಕ್ರಮಕ್ಕೆ ಕರೆದೊಯ್ಯುವುದೇ ಆಗಿತ್ತು ಎಂದು ಒತ್ತಿ ಹೇಳಿದ್ದಾರೆ.
ಜಿಆರ್‌ಪಿ ಉಪ ಅಧೀಕ್ಷಕಿ ಜಯಶ್ರೀ ಕುಜೂರ್ ಅವರು “ಇಲ್ಲಿಯವರೆಗೆ ಯಾವುದೇ ದೃಢೀಕೃತ ಧಾರ್ಮಿಕ ಮತಾಂತರ ಪ್ರಕರಣ ನಡೆದಿಲ್ಲ” ಎಂದು ಹೇಳಿದ್ದಾರೆ. ಆದರೆ, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಬಜರಂಗದಳದ ಸ್ಥಳೀಯ ಮುಖ್ಯಸ್ಥ ಅರುಣ್ ಸಿಂಗ್ ತಮ್ಮ ಹಸ್ತಕ್ಷೇಪವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ, ಬಜರಂಗದಳದ ಒಬ್ಬ ಕಾರ್ಯಕರ್ತ ಚಿಕ್ಕ ಮಕ್ಕಳ ಕೈಯಲ್ಲಿ ಕ್ರೈಸ್ತರ “ರಕ್ಷಾ ದಾರ” (ಪವಿತ್ರ ದಾರ) ಇರುವುದನ್ನು ಗಮನಿಸಿ ಸಂದೇಹ ವ್ಯಕ್ತಪಡಿಸಿದ್ದರು. ಆ ಬಳಿಕ ಸನ್ಯಾಸಿನಿ ಮತ್ತು ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ.
“ಮಕ್ಕಳಿಗೆ ಸ್ಪಷ್ಟ ಉತ್ತರಗಳನ್ನು ನೀಡಲು ಸಾಧ್ಯವಾಗಿಲ್ಲ. ಆದರೆ, ಸನ್ಯಾಸಿನಿ ಮತ್ತು ಪಾದ್ರಿಯವರು ಮಕ್ಕಳ ಪೋಷಕರಿಂದ ಅನುಮತಿ ಇದೆ ಎಂದು ಹೇಳಿದ್ದಾರೆ. ನಮಗೆ ಆ ಮಕ್ಕಳು ಈ ಕಾರ್ಯಕ್ರಮವನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರು ಎನಿಸಿದ್ದಾರೆ” ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಅಪ್ರಾಪ್ತ ಹುಡುಗಿಯ ಪೋಟೋಗಳನ್ನು ಸಾಕ್ಷ್ಯ ಸಂಗ್ರಹಕ್ಕೆ ತೆಗೆದುಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಡೆತಡೆಗಳ ಹೊರತಾಗಿಯೂ, ಅಪ್ರಾಪ್ತ ವಯಸ್ಕರು ಅಂತಿಮವಾಗಿ ಮನೆಗೆ ಮರಳುವ ಮೊದಲು ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಮಕ್ಕಳ ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಕ್ರಿಶ್ಚಿಯನ್ ಹಕ್ಕುಗಳ ಗುಂಪುಗಳು ಬಜರಂಗದಳದ ವಿರುದ್ದ ಆರೋಪ ಮಾಡಿದೆ. ಆಲ್ ಇಂಡಿಯಾ ಕ್ರಿಶ್ಚಿಯನ್ ಮೈನಾರಿಟಿ ಫ್ರಂಟ್ ಉಪಾಧ್ಯಕ್ಷ ಅಜಿತ್ ಟಿರ್ಕಿ, ಈ ವಿಷಯವನ್ನು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಘೋಷಿತ ದೇವಮಾನವನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು


