ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಬುಧವಾರ ಬೆಳಿಗ್ಗೆ (ಸೆ.24) ಲೇಹ್ ನಗರದಲ್ಲಿ ಆಕ್ರೋಶಿತ ಯುವಜನರ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು, ಪೊಲೀಸ್ ವಾಹನವನ್ನು ಸುಟ್ಟು ಹಾಕಿದ್ದಾರೆ. ಈ ಮೂಲಕ ರಾಜತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಇದೇ ಮೊದಲ ಬಾರಿಗೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಬುಧವಾರ ಬೆಳಿಗ್ಗೆ ಲೇಹ್‌ನ ಬೀದಿಗಿಳಿದಿದ್ದರು. ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಮ್ಮ ರಾಜ್ಯದ ಸ್ಥಾನಮಾನ ಬೇಡಿಕೆಯನ್ನು ಮುಂದಿಟ್ಟು ಇಂದು ಸಂಪೂರ್ಣ ಲಡಾಖ್ ಬಂದ್‌ಗೆ ಕರೆ ನೀಡಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಲೇಹ್‌ನಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಆಕ್ರೋಶಿತ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಿದ್ದು, ಅವರ ವಾಹನವನ್ನು ಸುಟ್ಟುಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ, ಪೊಲೀಸರು ಅಶ್ರುವಾಯು, ಶೆಲ್ ದಾಳಿ ಮತ್ತು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ವರದಿ ವಿವರಿಸಿದೆ.
ಇತ್ತೀಚಿನ ದಿನಗಳಲ್ಲಿ ಲಡಾಖ್‌ನಲ್ಲಿ ಇಂತಹ ಘರ್ಷಣೆ ನಡೆದಿರುವುದು ಇದೇ ಮೊದಲು. ಶೀಘ್ರದಲ್ಲೇ ಕೇಂದ್ರ ಸರ್ಕಾರೊಂದಿಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಹಿಂಸಾಚಾರ ಭುಗಿಲೆದ್ದಿದೆ. ಲಡಾಖ್ ಜನರ ಬೇಡಿಕೆಗಳ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಕೇಂದ್ರವು ಅಕ್ಟೋಬರ್ 6 ರಂದು ಲಡಾಖ್ ಪ್ರತಿನಿಧಿಗಳೊಂದಿಗೆ ಸಭೆ ಕರೆದಿದೆ.
ಕಳೆದ ಎರಡು ವಾರಗಳಿಂದ, ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಮತ್ತು ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ಈ ಪ್ರದೇಶವನ್ನು ಸೇರಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ, ಲಡಾಖ್‌ನಲ್ಲಿ ಕೇಂದ್ರದ ಆಡಳಿತದ ವಿರುದ್ಧ ಆಕ್ರೋಶ ಹೆಚ್ಚುತ್ತಿದೆ. ಜನರು ತಮ್ಮ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸಲು ರಾಜ್ಯತ್ವ ಮತ್ತು ಸಾಂವಿಧಾನಿಕ ರಕ್ಷಣೆಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ಲಡಾಖ್‌ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರ ನಂತರದಿಂದ ಲಡಾಖ್‌ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.
370ನೇ ವಿಧಿಯನ್ನು ರದ್ದುಪಡಿಸಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿದ ನಂತರ, ಆಗಸ್ಟ್ 2019ರಲ್ಲಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಯಿತು. ಆ ಸಮಯದಲ್ಲಿ, ವಾಂಗ್‌ಚುಕ್ ಸೇರಿದಂತೆ ಲೇಹ್‌ನ ಅನೇಕರು ಈ ಕ್ರಮವನ್ನು ಸ್ವಾಗತಿಸಿದ್ದರು. ಆದರೆ, ಆ ಬಳಿಕ ಲೆಫ್ಟಿನೆಂಟ್ ಗವರ್ನರ್ ಆಡಳಿತದ ವಿರುದ್ದ ಜನರು ಅಸಮಾಧಾನಗೊಂಡಿದ್ದಾರೆ. ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅಸಮಾಧಾನವು ದೊಡ್ಡ ಪ್ರಮಾಣದ ಪ್ರತಿಭಟನೆಗಳು ಮತ್ತು ಉಪವಾಸ ಸತ್ಯಾಗ್ರಹಗಳಿಗೆ ಕಾರಣವಾಗಿದೆ. ಮೊದಲ ಬಾರಿಗೆ, ಬೌದ್ಧರು ಬಹುಸಂಖ್ಯಾತರಾಗಿರುವ ಲೇಹ್ ಮತ್ತು ಮುಸ್ಲಿಂ ಬಹುಸಂಖ್ಯಾತರಾಗಿರುವ ಕಾರ್ಗಿಲ್‌ನ ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ‘ಲೇಹ್‌ನ ಅಪೆಕ್ಸ್ ಬಾಡಿ’ ಮತ್ತು ‘ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್’ ಎಂಬ ಜಂಟಿ ವೇದಿಕೆಯಡಿ ಒಂದಾಗಿವೆ.
ಪ್ರತಿಭಟನೆಗಳ ಹಿನ್ನೆಲೆ, ಕೇಂದ್ರ ಸರ್ಕಾರ ಲಡಾಖ್‌ನ ಬೇಡಿಕೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಆದಾಗ್ಯೂ, ಹಲವು ಸುತ್ತಿನ ಮಾತುಕತೆಗಳಿಂದ ಯಾವುದೇ ಪ್ರಗತಿ ಕಂಡಿಲ್ಲ. ಕಳೆದ ಮಾರ್ಚ್‌ನಲ್ಲಿ, ಲಡಾಖ್ ಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಸ್ಥಳೀಯ ನಾಯಕರು ಗೃಹ ಸಚಿವರು ತಮ್ಮ ಪ್ರಮುಖ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿಕೊಂಡ ನಂತರ ಆ ಮಾತುಕತೆ ವಿಫಲವಾಯಿತು.
“ಸಭೆಯಲ್ಲಿ ಗೃಹ ಸಚಿವರು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಮೂಲಕ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅವರು ರಾಜ್ಯದ ಸ್ಥಾನಮಾನ ಮತ್ತು ಆರನೇ ಶೆಡ್ಯೂಲ್‌ನ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ” ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಬಜರಂಗದಳದಿಂದ ಮತಾಂತರ ಆರೋಪ: ಕ್ರೈಸ್ತ ಸನ್ಯಾಸಿನಿ, 19 ಆದಿವಾಸಿ ಅಪ್ರಾಪ್ತರನ್ನು ವಿಚಾರಣೆಗೊಳಪಡಿಸಿದ ಪೊಲೀಸರು


