ವಿವಾದಾತ್ಮಕ ಕಾದಂಬರಿಕಾರ ಎಸ್. ಎಲ್ ಭೈರಪ್ಪ ಅವರು ಬುಧವಾರ (ಸೆ.24) ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಹೃದಯಸ್ತಂಭನದಿಂದ ಮಧ್ಯಾಹ್ನ 2.38ಕ್ಕೆ ಭೈರಪ್ಪ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದ ಭೈರಪ್ಪ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಕಳೆದ ಒಂದು ವರ್ಷದಿಂದ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬೆಂಗಳೂರಿನ ಮನೆಯಲ್ಲಿ ಬಂದು ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಭೈರಪ್ಪ ಅವರು 1961ರಲ್ಲಿ ‘ಧರ್ಮಶ್ರೀ’ ಕಾದಂಬರಿ ಪ್ರಕಟಿಸಿ, ಬಳಿಕ ಐದು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ. ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ, ಆವರಣ ಇವರ ಪ್ರಮುಖ ಕಾದಂಬರಿಗಳು.
2007ರಲ್ಲಿ ಪ್ರಕಟಗೊಂಡ ‘ಆವರಣ’ ಒಂದು ವಿವಾದಾತ್ಮಕ ಕಾದಂಬರಿಯಾಗಿದೆ. ಆವರಣ ಸಂಘ ಪರಿವಾರದ ಅಜೆಂಡಾ ಇಟ್ಟುಕೊಂಡು ಬರೆದ ಕೃತಿ ಎಂಬ ಆಪಾದನೆಗೆ ಗುರಿಯಾಗಿತ್ತು.
ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್ (2010), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975), ಪದ್ಮಭೂಷಣ (2023) ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಲಭಿಸಿವೆ. 1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು.


