ತಮಿಳುನಾಡಿನ ‘ಪ್ರವರ್ತಕ’ ಉಪಕ್ರಮ ಯೋಜನೆಯಿಂದ ಪ್ರೇರಿತರಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ತಮ್ಮ ಸರ್ಕಾರ ರಾಜ್ಯದಲ್ಲಿ ‘ಮುಖ್ಯಮಂತ್ರಿ ಉಪಹಾರ ಯೋಜನೆ’ ಯನ್ನು ಪರಿಚಯಿಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಘೋಷಿಸಿದರು.
ಶುಕ್ರವಾರ ಚೆನ್ನೈನಲ್ಲಿ ನಡೆದ “ತಮಿಳುನಾಡು ಶಿಕ್ಷಣದಲ್ಲಿ ಶ್ರೇಷ್ಠತೆ” ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಈ ಯೋಜನೆಯು 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಶಾಲಾ ಹಾಜರಾತಿಯನ್ನು ಸುಧಾರಿಸುತ್ತದೆ, ಶಾಲೆ ಬಿಡುವುದನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ‘ಹೃದಯಸ್ಪರ್ಶಿ’ ಎಂದು ಬಣ್ಣಿಸಿದ ಅವರು, ಇದನ್ನು ಕಲ್ಪಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಶ್ಲಾಘಿಸಿದರು.
“ತಮ್ಮ ಪೋಷಕರು ಕೆಲಸಕ್ಕೆ ಬೇಗನೆ ಹೋದಾಗ ಶಾಲಾ ಮಕ್ಕಳು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದ ಸಿಎಂ ಸ್ಟಾಲಿನ್ ಅವರಿಂದ ನಾನು ಸ್ಫೂರ್ತಿ ಪಡೆಯುತ್ತಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆಲಂಗಾಣ ಈ ಕ್ರಾಂತಿಕಾರಿ ಉಪಕ್ರಮವನ್ನು ಪುನರಾವರ್ತಿಸಲಿದೆ” ಎಂದು ರೆಡ್ಡಿ ಹೇಳಿದರು.
ತಮಿಳುನಾಡು ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇವಂತ್ ರೆಡ್ಡಿ ವಿಶೇಷ ಆಹ್ವಾನಿತ ಮತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ದ್ರಾವಿಡ ಮಾದರಿ ಆಡಳಿತದ ಅಡಿಯಲ್ಲಿ ವಿವಿಧ ವಿದ್ಯಾರ್ಥಿ ಕೇಂದ್ರಿತ ಯೋಜನೆಗಳ ಮೂಲಕ ಶಿಕ್ಷಣದಲ್ಲಿ ತಮಿಳುನಾಡಿನ ಪ್ರಗತಿಯನ್ನು ತೋರಿಸುತ್ತಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಹಾಗೂ ತೆಲಂಗಾಣದಲ್ಲಿ ಉಪಾಹಾರ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ರೆಡ್ಡಿಗೆ ಧನ್ಯವಾದ ಅರ್ಪಿಸಿದರು. “ಪುದುಮೈ ಪೆನ್, ನಾನ್ ಮುಧಲ್ವನ್ ಮತ್ತು ತಮಿಳು ಪುತಲ್ವನ್‌ನಂತಹ ನಮ್ಮ ಪ್ರಮುಖ ಯೋಜನೆಗಳನ್ನು ಶ್ಲಾಘಿಸುವ ಮೂಲಕ, ಶಿಕ್ಷಣದಲ್ಲಿ ತಮಿಳುನಾಡಿನ ಪ್ರವರ್ತಕ ಮಾರ್ಗವು ಇಡೀ ಭಾರತಕ್ಕೆ ದಾರಿಯನ್ನು ಬೆಳಗಿಸುತ್ತಿದೆ ಎಂದು ನೀವು ಪುನರುಚ್ಚರಿಸಿದ್ದೀರಿ” ಎಂದು ಸ್ಟಾಲಿನ್ ಬರೆದಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿ: ಆದೇಶ ಹೊರಡಿಸಿದ ತೆಲಂಗಾಣ ಸರ್ಕಾರ


