ಜೈಲಿನಲ್ಲಿರುವ ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ‘ಪಾಕಿಸ್ತಾನದೊಂದಿಗೆ ಸಂಪರ್ಕ’ ಇದೆ, ‘ಆರ್ಥಿಕ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪಗಳನ್ನು ಅವರ ಪತ್ನಿ ಗೀತಾಂಜಲಿ ಆಂಗ್ಮೋ ತಳ್ಳಿ ಹಾಕಿದ್ದಾರೆ. ವಾಂಗ್ಚುಕ್ ಲೇಹ್‌ನಲ್ಲಿ ಹಿಂಸಾಚಾರ ಪ್ರಚೋದಿಸಿದ್ದಾರೆ ಎಂಬ ಆರೋಪ ಸುಳ್ಳು ಎಂದಿದ್ದಾರೆ.
ವಾಂಗ್ಚುಕ್ ಸಾಧ್ಯವಾದಷ್ಟು ಗಾಂಧಿ ಹಾದಿಯಲ್ಲಿ ಪ್ರತಿಭಟಿಸಿದ್ದಾರೆ. ಸೆಪ್ಟೆಂಬರ್ 24ರಂದು ಪರಿಸ್ಥಿತಿ ಉಲ್ಬಣಗೊಂಡಿದ್ದು ನನ್ನ ಪತಿಯಿಂದ ಅಲ್ಲ, ಸಿಆರ್‌ಪಿಎಫ್‌ನ ಕ್ರಮಗಳಿಂದಾಗಿ ಎಂದು ಆಂಗ್ಮೋ ಹೇಳಿದ್ದಾರೆ.
ವಾಂಗ್ಚುಕ್ ಅವರನ್ನು ಬಂಧಿಸಿದ್ದು ಏಕೆ?
ಲಡಾಖ್‌ನ ಹಕ್ಕುಗಳಿಗಾಗಿ ಕಳೆದ ಐದು ವರ್ಷಗಳಿಂದ ಸತತ ಹೋರಾಟ ನಡೆಸಿಕೊಂಡು ಬರುತಿದ್ದ ವಾಂಗ್ಚುಕ್ ಅವರನ್ನು ಶುಕ್ರವಾರ (ಸೆ.26) ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು, ಸಂವಿಧಾನದ ಆರನೇ ಪರಿಚ್ಛೇಧದ ಅಡಿ ಸೇರಿಸಬೇಕು ಎಂದು ಒತ್ತಾಯಿಸಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ನಡುವೆ ಸೆಪ್ಟೆಂಬರ್ 24ರಂದು ಯುವಜನರ ಗುಂಪೊಂದು ಲೇಹ್‌ನಲ್ಲಿ ಹಠಾತ್ ಬೀದಿಗಿಳಿದಿತ್ತು. ಇದರಿಂದ ಹೋರಾಟ ಹಿಂಸಾತ್ಮಕ ರೂಪ ಪಡೆದಿತ್ತು. ಪರಿಣಾಮ ನಾಲ್ವರು ಪ್ರಾಣ ಕಳೆದುಕೊಂಡು, ಸುಮಾರು 90 ಜನರು ಗಾಯಗೊಂಡಿದ್ದರು.
ಯುವಜನರು ಹಿಂಸಾತ್ಮಕ ಪ್ರತಿಭಟನೆ ನಡೆಸಲು ಪ್ರಚೋದಿಸಿದ್ದು ಸೋನಮ್ ವಾಂಗ್ಚುಕ್ ಎಂದು ಆರೋಪಿಸಿ ಅವರನ್ನು ಸೆಪ್ಟೆಂಬರ್ 26ರಂದು ಬಂಧಿಸಲಾಗಿದೆ. ಪ್ರಸ್ತುತ ಅವರನ್ನು ಲಡಾಖ್‌ನಿಂದ ಸ್ಥಳಾಂತರಿಸಲಾಗಿದ್ದು, ರಾಜಸ್ಥಾನದ ಜೋಧ್‌ಪುರದ ಜೈಲಿನಲ್ಲಿ ಇರಿಸಲಾಗಿದೆ.
ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ (ಹೆಚ್‌ಐಎಎಲ್) ನ ಸಹ-ಸಂಸ್ಥಾಪಕಿಯಾಗಿರುವ ಆಂಗ್ಮೋ, ತನ್ನ ಪತಿಯ ಬಂಧನದ ನಂತರ ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿಲ್ಲ ಮತ್ತು ಬಂಧನ ಆದೇಶದ ಪ್ರತಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಬಂಧನದ ಆದೇಶದ ಪ್ರತಿಯನ್ನು ಶುಕ್ರವಾರ ಕಳುಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇನ್ನೂ ಸಿಕ್ಕಿಲ್ಲ, ನಾವು ಕಾನೂನು ಮೊರೆ ಹೋಗುತ್ತೇವೆ ಎಂದು ಆಂಗ್ಮೋ ಹೇಳಿದ್ದಾರೆ.
ಆಪಾದಿತ ಪಾಕಿಸ್ತಾನ ಸಂಪರ್ಕ
ಸೋನಮ್ ವಾಂಗ್ಚುಕ್ ಅವರಿಗೆ ಪಾಕಿಸ್ತಾನದೊಂದಿಗೆ ಸಂಬಂಧ ಇದೆಯೇ? ಎಂದು ತನಿಖೆ ಮಾಡಲಾಗುತ್ತಿದೆ. ಕಳೆದ ತಿಂಗಳು ಒಬ್ಬ ಪಾಕಿಸ್ತಾನಿ ಗುಪ್ತಚರನನ್ನು ಬಂಧಿಸಲಾಗಿತ್ತು, ಆತ ಗಡಿಯಾಚೆಗಿನ ಪ್ರತಿಭಟನೆಗಳ ವಿಡಿಯೋ ಕಳುಹಿಸಿದ್ದ ಎಂದು ಆರೋಪವಿದೆ. ಇದರ ಜೊತೆಗೆ, ಸೋನಮ್ ವಾಂಗ್ಚುಕ್ ಅವರು ಪಾಕಿಸ್ತಾನಕ್ಕೆ ಒಂದು ಡಾನ್ ಮೀಡಿಯಾ ಕಾರ್ಯಕ್ರಮಕ್ಕೆ ಹೋಗಿದ್ದು, ಅಧಿಕಾರಿಗಳಿಗೆ ‘ಸಂದೇಹಾಸ್ಪದ’ ಎನಿಸಿದೆ. ಹೀಗಾಗಿ, ಈ ವಿಷಯಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಲಡಾಖ್‌ನ ಪೊಲೀಸ್ ಮುಖ್ಯಸ್ಥ ಎಸ್‌ಡಿ ಸಿಂಗ್ ಜಮ್ವಾಲ್ ತಿಳಿಸಿದ್ದಾರೆ.
ಆಂಗ್ಮೋ ಪೊಲೀಸರ ಆರೋಪಗಳನ್ನು ತಳ್ಳಿ ಹಾಕಿದ್ದು, ವಾಂಗ್ಚುಕ್ ಅವರ ಭೇಟಿಗಳು ವೃತ್ತಿಪರ ಮತ್ತು ಹವಾಮಾನ ಕೇಂದ್ರಿತವಾಗಿದ್ದವು ಎಂದಿದ್ದಾರೆ.
ಪಾಕಿಸ್ತಾನದಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಹವಾಮಾನ ಬದಲಾವಣೆಯ ಸಮ್ಮೇಳನದಲ್ಲಿ ವಾಂಗ್ಚುಕ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ನಾವು ವಿಶ್ವಸಂಸ್ಥೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ್ದೆವು, ಅದು ಹವಾಮಾನ ಬದಲಾವಣೆಯ ಕುರಿತಾಗಿತ್ತು. ಹಿಮಾಲಯದ ತುದಿಯಲ್ಲಿರುವ ಹಿಮನದಿ ನಾನು ಪಾಕಿಸ್ತಾನಕ್ಕೆ ಹರಿಯುತ್ತೇನೋ ಅಥವಾ ಭಾರತಕ್ಕೆ ಹರಿಯುತ್ತೇನೋ ಎಂದು ನೋಡುವುದಿಲ್ಲ” ಎಂದು ಆಂಗ್ಮೋ ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಡೆದ ‘ಬ್ರೀತ್ ಪಾಕಿಸ್ತಾನ್’ ಸಮ್ಮೇಳನವನ್ನು ವಿಶ್ವಸಂಸ್ಥೆಯ ಪಾಕಿಸ್ತಾನ ಮತ್ತು ಡಾನ್ ಮೀಡಿಯಾ ಆಯೋಜಿಸಿತ್ತು. ಬಹುರಾಷ್ಟ್ರೀಯ ಸಹಕಾರವನ್ನು ಅದು ಒಳಗೊಂಡಿತ್ತು. ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ಮೆಂಟ್ (ಐಸಿಐಎಂಒಡಿ) ನಂತಹ ಸಂಸ್ಥೆಗಳು ಅದರಲ್ಲಿ ಇತ್ತು. ಇದು ಎಂಟು ಹಿಂದೂ ಕುಶ್ ದೇಶಗಳನ್ನು ಒಟ್ಟುಗೂಡಿಸುತ್ತದೆ ಮತ್ತು ವಿಭಿನ್ನ ವಿಷಯಗಳ ಮೇಲೆ ಕೆಲಸ ಮಾಡುತ್ತದೆ. ನಾವು ಐಸಿಐಎಂಒಡಿಯ ಹಿಮಾಲಯನ್ ವಿಶ್ವವಿದ್ಯಾಲಯ ಒಕ್ಕೂಟದ ಭಾಗವಾಗಿದ್ದೆವು ಎಂದಿದ್ದಾರೆ.
ಐಸಿಐಎಂಒಡಿ 1983ರಲ್ಲಿ ಸ್ಥಾಪನೆಯಾದ ನೇಪಾಳ ಮೂಲದ ಸಂಸ್ಥೆಯಾಗಿದ್ದು, ಇದು ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನ ಸೇರಿ ಹಿಂದೂ ಕುಶ್ ಹಿಮಾಲಯ ಪ್ರದೇಶದ ಎಂಟು ಪ್ರಾದೇಶಿಕ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
ನೇಪಾಳ ಮತ್ತು ಬಾಂಗ್ಲಾದೇಶದ ಉಲ್ಲೇಖವನ್ನು ಸೋನಮ್ ಒಂದು ಉದಾಹರಣೆಯಾಗಿ ನೀಡಿದ್ದಾರೆ. ಅವರ ಹೇಳಿಕೆಯ ಮೂಲ ಉದ್ದೇಶವೆಂದರೆ, “ಸರ್ಕಾರಗಳು ಜನರ ಕೂಗಿಗೆ ಗಮನ ಕೊಡದಿದ್ದರೆ, ಅದು ಕ್ರಾಂತಿಗೆ ಕಾರಣವಾಗಬಹುದು” ಎಂಬುದು. ಆದ್ದರಿಂದ, ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬಾರದು ಎಂದು ಗೀತಾಂಜಲಿ ಆಂಗ್ಮೋ ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆ ಮತ್ತು ಭದ್ರತಾ ಪಡೆಗಳ ಪ್ರತಿಕ್ರಿಯೆ
ಸೋನಮ್ ವಾಂಗ್ಚುಕ್‌ರ ಕಾರ್ಯಕ್ರಮಗಳು ಯಾವಾಗಲೂ ಅಹಿಂಸಾತ್ಮಕವಾಗಿರುತ್ತವೆ. ಲೇಹ್ ಏಪೆಕ್ಸ್ ಬಾಡಿಯ ಪ್ರತಿಭಟನೆ ಶಾಂತಿಯುತವಾಗಿತ್ತು ಮತ್ತು ವಿದ್ಯಾರ್ಥಿಗಳು ಹಾಗೂ ಯುವಕರು ಹಿಂಸಾಚಾರಕ್ಕೆ ಯೋಜನೆ ಮಾಡಿರಲಿಲ್ಲ. ಆದರೆ, ಸಿಆರ್‌ಪಿಎಫ್ ಸಿಬ್ಬಂದಿ ಟಿಯರ್ ಗ್ಯಾಸ್ ಸಿಡಿಸಿದಾಗ, ಯುವಕರು ಕಲ್ಲು ತೂರಾಟ ಮಾಡಿ ಪ್ರತಿಕ್ರಿಯಿಸಿದರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು ಎಂದು ತಿಳಿಸಿದ್ದಾರೆ.
ಸಿಆರ್‌ಪಿಎಫ್‌ಗೆ ಗುಂಡು ಹಾರಿಸುವ ಹಕ್ಕು ನೀಡಿದ್ದು ಯಾರು? ನಮ್ಮ ಸ್ವಂತ ಜನರ ಮೇಲೆ, ನಮ್ಮ ಸ್ವಂತ ಯುವಕರ ಮೇಲೆ ಏಕೆ ಗುಂಡು ಹಾರಿಸಬೇಕು? ಎಂದು ಸಿಆರ್‌ಪಿಎಫ್‌ನ ಕ್ರಮಗಳನ್ನು ಅಂಗ್ಮೋ ಪ್ರಶ್ನಿಸಿದ್ದಾರೆ.
ಹಣಕಾಸಿನ ಆರೋಪಗಳು ಮತ್ತು ಸಂಸ್ಥೆಗಳು
ಗೀತಾಂಜಲಿ ಆಂಗ್ಮೋ ಅವರು ಸೋನಮ್ ವಾಂಗ್ಚುಕ್‌ರ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್‌ನೇಟಿವ್ಸ್ (ಹೆಚ್‌ಐಎಎಲ್) ಮತ್ತು ಇತರ ಉಪಕ್ರಮಗಳ ಮೇಲಿನ ಆರ್ಥಿಕ ಅಕ್ರಮ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಹೆಚ್‌ಐಎಎಲ್‌ಗೆ ಬಂದ ವಿದೇಶಿ ಧನಸಹಾಯವು ದೇಣಿಗೆಯಲ್ಲ, ಅದು ಸಲಹಾ ಕಾರ್ಯಕ್ಕಾಗಿ ಬಂದ ಹಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ಸಂಸ್ಥೆಯು ತನ್ನ 400 ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಎಫ್‌ಸಿಆರ್‍ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಮತ್ತು ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ವಿಷಯಗಳ ಬಗ್ಗೆ ಅಂಗ್ಮೋ ಮಾತನಾಡಿದ್ದಾರೆ. ಈ ವಿಷಯಗಳಲ್ಲಿ ವಿಳಂಬವಾಗಿರುವುದು ಆಡಳಿತಾತ್ಮಕ ವರ್ಗೀಕರಣ ಮತ್ತು ತಡೆ ಹಿಡಿಯುವಿಕೆಯಿಂದ, ಯಾವುದೇ ತಪ್ಪು ಕೃತ್ಯದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೆಚ್‌ಐಎಎಲ್ ಸಂಸ್ಥೆಯು ಐಸ್ ಸ್ತೂಪಗಳು ಮತ್ತು ನಿಷ್ಕ್ರಿಯ ಸೌರ ಕಟ್ಟಡಗಳಂತಹ ಆವಿಷ್ಕಾರಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದಿದ್ದಾರೆ.
ಸೆಪ್ಟೆಂಬರ್ 4ರಂದು ನಡೆದ ಹಿಂಸಾಚಾರದ ನಂತರ, ಕೇಂದ್ರ ಗೃಹ ಸಚಿವಾಲಯವು ಸೋನಮ್ ವಾಂಗ್ಚುಕ್ ಅವರು ಸ್ಥಾಪಿಸಿದ ಎಸ್‌ಇಸಿಎಂಒಎಲ್ ಸಂಸ್ಥೆಯ ಎಫ್‌ಸಿಆರ್‍ಎ ಪರವಾನಗಿಯನ್ನು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ರದ್ದುಗೊಳಿಸಿದೆ.


