ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಶನಿವಾರ ಸಂಜೆ ನಟ-ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 18 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ.
ಮೃತರೆಲ್ಲರ ಗುರುತುಗಳನ್ನು ಪತ್ತೆಹಚ್ಚಲಾಗಿದ್ದು, ಅವರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ತಮ್ಮ ಪ್ರಚಾರ ವಾಹನದ ಮೇಲಿನಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಲುಚಾಮಿ ಪುರಂ ಪ್ರದೇಶದಲ್ಲಿ ಸಂಜೆ 7:30 ರ ನಂತರ ಈ ಘಟನೆ ನಡೆಯಿತು.
ಸ್ಥಳದಲ್ಲಿ ಜನದಟ್ಟಣೆಯಿಂದಾಗಿ ಹಲವಾರು ಜನರು ಮೂರ್ಛೆ ಹೋದರು. ವಿಜಯ್ ಅವರ ಭಾಷಣದ ಸಮಯದಲ್ಲಿ ಕುಸಿದು ಬಿದ್ದ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳು ಜನಸಂದಣಿಯ ಮೂಲಕ ಸಾಗಬೇಕಾಯಿತು.
ರ‍್ಯಾಲಿಯಲ್ಲಿ ನಟ ವಿಜಯ್ ಅವರನ್ನು ಹತ್ತಿದಿಂದ ಕಾಣಲು ಉತ್ಸುಕರಾಗಿದ್ದ ಕೆಲವು ಬೆಂಬಲಿಗರು ಮರವನ್ನು ಹತ್ತಿದಾಗ ಗೊಂದಲ ತೀವ್ರಗೊಂಡಿತು. ಅದರ ಒಂದು ಕೊಂಬೆ ಮುರಿದು ಕೆಳಗೆ ಇದ್ದ ಜನಸಮೂಹದ ಮೇಲೆ ಉರುಳಿ ಬಿತ್ತು. ಜನಭಯಭೀತರಾದ ಬಳಿಕ ಅದು ಮಾರಣಾಂತಿಕ ನೂಕು ನುಗ್ಗಲಿಗೆ ಕಾರಣವಾಯಿತು.
ಇದರ ಪರಿಣಾಮವಾಗಿ, 111 ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ರಾತ್ರಿಯಿಡೀ ಮತ್ತು ಭಾನುವಾರ ಬೆಳಗಿನವರೆಗೆ, ಉನ್ನತ ಅಧಿಕಾರಿಗಳು, ನಾಯಕರು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗಳಿಗೆ ಬರಲು ಪ್ರಾರಂಭಿಸಿದರು.
ನ್ಯಾಯಾಂಗ ತನಿಖೆ ನಡೆಸುವ ಜವಾಬ್ದಾರಿಯನ್ನು ಹೊಂದಿರುವ ನಿವೃತ್ತ ನ್ಯಾಯಾಧೀಶೆ ಅರುಣಾ ಜಗದೀಶನ್, ಕಾಲ್ತುಳಿತದ ಸ್ಥಳವನ್ನು ಬೆಳಿಗ್ಗೆ ಪರಿಶೀಲಿಸಿದರು. ನಂತರ, ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಬೆಳಗಿನ ಜಾವ 3:15 ರ ಸುಮಾರಿಗೆ ಆಸ್ಪತ್ರೆಗೆ ತಲುಪಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ನಂತರ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೂಡ ಭೇಟಿ ನೀಡಿ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು.
ಈ ಮಧ್ಯೆ, ತಮಿಳಗ ವೆಟ್ರಿ ಕಳಗಂ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿ, ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ನೀಡಬೇಕೆಂದು ಒತ್ತಾಯಿಸಿತು.
ಈ ಗಲಭೆಯ ಹಿಂದೆ ‘ಕೆಲವು ಪಿತೂರಿಗಳು’ ಇರಬಹುದು ಎಂದು ಪಕ್ಷವು ತನ್ನ ಅರ್ಜಿಯಲ್ಲಿ ಆರೋಪಿಸಿದ್ದು, ಸ್ವಯಂಪ್ರೇರಿತ ತನಿಖೆ ಅಥವಾ ಸ್ವತಂತ್ರ ಸಂಸ್ಥೆಯ ತನಿಖೆಗೆ ಒತ್ತಾಯಿಸಿದೆ.
ಕರೂರು ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ಕೋರಿ ಹೈಕೋರ್ಟ್ ಮೊರೆ ಹೋದ ಟಿವಿಕೆ: ಮೃತರ ಸಂಖ್ಯೆ 40ಕ್ಕೆ ಏರಿಕೆ


