ಪರಿಶಿಷ್ಟ ಜಾತಿಯೊಳಗೆ (ಎಸ್‌ಸಿ) ಒಳಮೀಸಲಾತಿ ಜಾರಿ ಮಾಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಹೋರಾಟಗಾರರು, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರ ರಾಜಿನಾಮೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರನ್ನು ಪೊಲೀಸರು ಬಂಧಿಸಿದರು.

ಸಚಿವರು ಮತ್ತು ಅಧಿಕಾರಿಗಳಿಂದ ಒಳಮೀಸಲಾತಿ ಜಾರಿಗೆ ಅಡ್ಡಿ
“25-08-2025 ರಂದು ಸರ್ಕಾರ ಹೊರಡಿಸಿದ ಆದೇಶದ ಒಳಸಂಚನ್ನು ವಿಫಲಗೊಳಿಸಲು ಒಳಮೀಸಲಾತಿ ಹೋರಾಟಗಾರರು ಪ್ರಯತ್ನಗಳು ನಡೆಸುತ್ತಿರುವಾಗಲೇ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್, ಸಲಹೆಗಾರರಾದ ವೆಂಕಟಯ್ಯ ಅವರು ಸರ್ಕಾರದಿಂದ ಬಂದ ಕಡತಕ್ಕೆ ಒಪ್ಪಿಗೆ ಸೂಚಿಸಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಹೋರಾಟಗಾರರು ಆರೋಪಿಸಿದರು.
“ಒಳಮೀಸಲಾತಿ ಆದೇಶವು ಕೇವಲ ನೇರ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ, ಬಡ್ತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅನ್ವಯಿಸುವುದಿಲ್ಲವೆಂದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ನೇರ ನೇಮಕಾತಿ, ಬಡ್ತಿ ನೇಮಕಾತಿ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರವನ್ನು ದಾರಿತಪ್ಪಿಸುತ್ತಿದ್ದಾರೆ. ಸರ್ಕಾರ ಆದೇಶದ ಪ್ಯಾರಾ-2ನ್ನು ತಯಾರಿಸಿದವರೂ ಇವರೇ ಆಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ಒಳಮೀಸಲಾತಿ ಜಾರಿಗೆ ವಿಳಂಬ; ರಾಜಿನಾಮೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ


