ಕಟ್ಟಾ ಸಂಪ್ರದಾಯವಾದಿ ಸನೆ ತಾಕೈಚಿ ಅವರನ್ನು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಜಪಾನ್ ಆಯ್ಕೆ ಮಾಡಿದೆ.
ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಶಿಷ್ಯೆಯಾಗಿರುವ ತಾಕೈಚಿ ಅವರು, ಮಂಗಳವಾರ (ಅ.21) ನಡೆದ ಚುನಾವಣೆಯಲ್ಲಿ 465 ಸ್ಥಾನಗಳ ಸಂಸತ್ತಿನ ಕೆಳಮನೆಯಲ್ಲಿ 237 ಮತಗಳನ್ನು ಪಡೆದು ಪ್ರಧಾನಿ ಹುದ್ದೆಯನ್ನು ಖಚಿತಪಡಿಸಿಕೊಂಡಿದ್ದಾರೆ.
ಸೋಮವಾರ (ಅ20) ತಾಕೈಚಿ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷ (ಎಲ್‌ಡಿಪಿ) ಮತ್ತು ಇಶಿನ್ ಎಂದೂ ಕರೆಯಲ್ಪಡುವ ಬಲಪಂಥೀಯ ಜಪಾನ್ ಇನ್ನೋವೇಶನ್ ಪಾರ್ಟಿ (ಜೆಐಪಿ) ನಡುವಿನ ಕೊನೆಯ ಕ್ಷಣದ ಒಪ್ಪಂದ ಫಲ ಕೊಟ್ಟ ಕಾರಣ ತಾಕೈಚಿ ಗೆಲುವು ಸಾಧಿಸಿದ್ದಾರೆ. ಆದರೂ, ಅವರ ಸರ್ಕಾರದಲ್ಲಿ ಬಹುಮತಕ್ಕೆ ಇನ್ನೂ ಎರಡು ಸ್ಥಾನಗಳ ಕೊರತೆಯಿದ್ದು, ರಾಜಕೀಯ ಅಸ್ಥಿರತೆಯ ಅಪಾಯವಿದೆ ಎಂದು ವರದಿಗಳು ಹೇಳಿವೆ.
ಯುದ್ಧಾನಂತರದ ಇತಿಹಾಸದ ಬಹುಪಾಲು ಜಪಾನ್ ಅನ್ನು ಆಳಿದ ಎಲ್‌ಡಿಪಿ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸೋಲನುಭವಿಸಿತ್ತು. ನಂತರದ ಮೂರು ತಿಂಗಳ ರಾಜಕೀಯ ನಿರ್ವಾತ ಮತ್ತು ಜಗಳವನ್ನು ಕೊನೆಗೊಳಿಸಿದ ಶಿಗೇರು ಇಶಿಬಾ ಅವರ ಸ್ಥಾನಕ್ಕೆ ತಾಕೈಚಿ ಆಯ್ಕೆಯಾಗಿದ್ದಾರೆ.
ಪುರುಷ ಪ್ರಾಬಲ್ಯ ದೇಶದ ರಾಜಕೀಯದಲ್ಲಿ ತಾಕೈಚಿ ಅವರ ಗೆಲುವು ಒಂದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಆದರೆ, ಆಕೆಯ ನಾಯಕತ್ವದಿಂದ ವಲಸೆ ನೀತಿಗಳು ಮತ್ತು ಸಾಮಾಜಿಕ ವಿಷಯಗಳಲ್ಲಿ ಸಂಪ್ರದಾಯವಾದಿ ಅಥವಾ ಕಟ್ಟುನಿಟ್ಟಾದ ನಿಲುವುಗಳು (ಬಲಪಂಥೀಯ ಧೋರಣೆ) ಬಲವಾಗುವ ಸಾಧ್ಯತೆಯಿದೆ. ಮಹಿಳೆಯರ ಸಮಾನತೆ ಅಥವಾ ವಿವಿಧತೆಯನ್ನು (ಉದಾಹರಣೆಗೆ, ಜನಾಂಗೀಯ ಅಥವಾ ಸಾಮಾಜಿಕ ವೈವಿಧ್ಯತೆ) ಉತ್ತೇಜಿಸುವ ನಿರೀಕ್ಷೆಯಿಲ್ಲ.
ರಾಜಕೀಯ ನಾಯಕಿಯಾಗಿ, ಮಹಿಳೆಯರ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳು ಅಥವಾ ಕಾನೂನುಗಳನ್ನು ಜಾರಿಗೆ ತರುವುದನ್ನು ಸ್ವತಃ ತಾಕೈಚಿ ತಡೆಯುತ್ತಿದ್ದಾರೆ ಎಂಬ ಆರೋಪವಿದೆ.
ಅಲ್ಲದೆ, ಜಪಾನ್‌ನ ರಾಜಮನೆತನದಲ್ಲಿ ಕೇವಲ ಪುರುಷರಿಗೆ ಮಾತ್ರ ಸಿಂಹಾಸನದ ಉತ್ತರಾಧಿಕಾರಿತ್ವವನ್ನು ನೀಡುವ ಸಂಪ್ರದಾಯವನ್ನು ತಾಕೈಚಿ ಬೆಂಬಲಿಸುತ್ತಾರೆ. ಇದು ಲಿಂಗ ಸಮಾನತೆಗೆ ವಿರುದ್ಧವಾದ ನಿಲುವಾಗಿದೆ.
ಕಾಗದಕ್ಕೆ ಸೀಮಿತವಾದ ಕದನ ವಿರಾಮ : ಗಾಝಾ ಮೇಲೆ ಅಕ್ರಮಣ ಮುಂದುವರಿಸಿದ ಇಸ್ರೇಲ್; ನೂರಾರು ಪ್ಯಾಲೆಸ್ತೀನಿಯರ ಹತ್ಯೆ


